ಸತತ 14ನೇ ಪಂದ್ಯದಲ್ಲೂ ಅಬ್ಬರವಿಲ್ಲ; ಶುಭ್​ಮನ್ ಗಿಲ್​ಗಾಗಿ ಸಂಜು ಸ್ಯಾಮ್ಸನ್​ಗೆ ಅನ್ಯಾಯ

Shubman Gill's T20 Batting Crisis: ಶುಭಮನ್ ಗಿಲ್ ಟಿ20 ಕ್ರಿಕೆಟ್‌ನಲ್ಲಿ ನಿರಂತರವಾಗಿ ಕಳಪೆ ಪ್ರದರ್ಶನ ತೋರುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಅವರ ಬ್ಯಾಟಿಂಗ್ ನಿಧಾನಗತಿಯಲ್ಲಿದೆ. 14 ಇನ್ನಿಂಗ್ಸ್‌ಗಳಿಂದ ಒಂದೇ ಅರ್ಧಶತಕವಿಲ್ಲದೆ, ಗಿಲ್ ಅವರ ಸ್ಟ್ರೈಕ್ ರೇಟ್ ತಂಡದ ಮೇಲೆ ಒತ್ತಡ ಹೇರುತ್ತಿದೆ. ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರಿಗೆ ಅವಕಾಶ ಕಳೆದುಹೋಗುತ್ತಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಗಿಲ್ ಟಿ20 ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ವೇಗದ ಇನ್ನಿಂಗ್ಸ್ ಆಡಬೇಕಿದೆ.

ಸತತ 14ನೇ ಪಂದ್ಯದಲ್ಲೂ ಅಬ್ಬರವಿಲ್ಲ; ಶುಭ್​ಮನ್ ಗಿಲ್​ಗಾಗಿ ಸಂಜು ಸ್ಯಾಮ್ಸನ್​ಗೆ ಅನ್ಯಾಯ
Shubman Gill

Updated on: Nov 06, 2025 | 7:14 PM

ಶುಭಮನ್ ಗಿಲ್ (Shubman Gill) ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರು ಕ್ರಿಕೆಟ್​ನ ಎಲ್ಲಾ ಮೂರು ಮಾದರಿಗೂ ಸರಿ ಹೊಂದುವ ಕ್ರಿಕೆಟಿಗ ಎನ್ನುವುದು ಸರಿಯಲ್ಲ. ಅದರಲ್ಲೂ ಹೊಡಿಬಡಿ ಆಟವನ್ನೇ ಕೇಳುವ ಟಿ20 ಕ್ರಿಕೆಟ್​ನಲ್ಲಿ ಗಿಲ್ ಪ್ರದರ್ಶನ ತೀರ ಸಪ್ಪೆಯಾಗಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲೂ ಶುಭ್​ಮನ್ ಗಿಲ್ ಬ್ಯಾಟ್ ಮೌನಕ್ಕೆ ಶರಣಾಗಿದೆ. ಗಿಲ್ ಅವರ ಬ್ಯಾಟ್ ಮೌನಕ್ಕೆ ಶರಣಾಗಿದೆ ಎನ್ನುವುದಕ್ಕಿಂತ ಅವರ ಬ್ಯಾಟಿಂಗ್​ನಲ್ಲಿ ಪವರ್ ಇಲ್ಲ ಎಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆರಂಭಿಕನಾಗಿ ಆಡುತ್ತಿರುವ ಗಿಲ್, ಇದುವರೆಗೆ ಒಂದೇ ಒಂದು ಅರ್ಧಶತಕವನ್ನು ಬಾರಿಸಿಲ್ಲ. ಆಸೀಸ್ ವಿರುದ್ಧದ 4ನೇ ಟಿ20ಪಂದ್ಯದಲ್ಲಿ ಗಿಲ್ 46 ರನ್ ಬಾರಿಸಿದರಾದರೂ ಅವರ ಬ್ಯಾಟಿಂಗ್​ನಲ್ಲಿ ವೇಗ ಇರಲಿಲ್ಲ.

ಒಂದೇ ಒಂದು ಅರ್ಧಶತಕ ಗಳಿಸಿಲ್ಲ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಶುಭ್​ಮನ್ ಗಿಲ್ ಸತತ ಏಳನೇ ಬಾರಿಗೆ ಅರ್ಧಶತಕ ಬಾರಿಸುವಲ್ಲಿ ವಿಫಲರಾಗಿದ್ದಾರೆ. ಇದಲ್ಲದೆ, ಹಿಂದಿನ ಪಂದ್ಯಾವಳಿಯನ್ನು ಸಹ ಸೇರಿಸಿದರೆ, ಅವರು ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಇದೀಗ ನಾಲ್ಕನೇ ಟಿ20ಪಂದ್ಯದಲ್ಲಿ ಆಮೆಗತಿಯ ಬ್ಯಾಟಿಂಗ್ ಮೂಲಕ 46 ರನ್ ಬಾರಿಸಿರುವ ಗಿಲ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ನಾಲ್ಕನೇ ಟಿ20 ಪಂದ್ಯದಲ್ಲಿ ಶುಭ್​ಮನ್ ಗಿಲ್ ಅವರ ನಿಧಾನಗತಿಯ ಇನ್ನಿಂಗ್ಸ್ ಟೀಕೆಗೆ ಗುರಿಯಾಗಿದೆ. ಪಂದ್ಯದಲ್ಲಿ ಗಿಲ್ 46 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರಾದರೂ ಇದಕ್ಕಾಗಿ ಅವರು 39 ಎಸೆತಗಳನ್ನು ತೆಗೆದುಕೊಂಡರು. ಈ ವೇಳೆ ಅವರ ಸ್ಟ್ರೈಕ್ ರೇಟ್ ಕೇವಲ 117.95 ಆಗಿತ್ತು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 11 ಡಾಟ್ ಬಾಲ್‌ಗಳನ್ನು ಎದುರಿಸಿದರು. ಅಂದರೆ ಅವರು ಸುಮಾರು ಎರಡು ಓವರ್‌ಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಪರಿಣಾಮವಾಗಿ, ಅವರ ಸ್ಟ್ರೈಕ್ ರೇಟ್ ಕುಸಿದಿದ್ದು ಮಾತ್ರವಲ್ಲದೆ ತಂಡದ ಸದಸ್ಯರ ಮೇಲೆ ಒತ್ತಡ ಹೆಚ್ಚಾಯಿತು.

ಸಂಜು ಸ್ಯಾಮ್ಸನ್​ಗೆ ಅನ್ಯಾಯ

ವಾಸ್ತವವಾಗಿ ಟಿ20 ತಂಡದಲ್ಲಿ ಶುಭ್​ಮನ್ ಗಿಲ್ ಅವರ ಸ್ಥಾನದ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಕೇಳಿಬರುತ್ತಿವೆ. ಆರಂಭಿಕನಾಗಿ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದರೂ, ಟೀಂ ಇಂಡಿಯಾ ಗಿಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಿ ಅವರಿಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ನೀಡಿದೆ. ಇದರ ಪರಿಣಾಮವಾಗಿ ಆರಂಭಿಕನಾಗಿ ಆಡುತ್ತಿದ್ದ ಸಂಜು, ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಯಿತು. ಕೊನೆಗೆ ತಂಡದಿಂದಲೇ ಹೊರಬಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾ ಕೊನೆಯದಾಗಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಆ ಸರಣಿಯಲ್ಲಿ ಆರಂಭಿಕನಾಗಿ ಆಡಿದ್ದ ಸಂಜು ಸ್ಯಾಮ್ಸನ್ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ ಅದಕ್ಕೂ ಮುನ್ನ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಂಜು 2 ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯ ವೈಫಲ್ಯದಿಂದಾಗಿ ಸಂಜು ಆರಂಭಿಕ ಸ್ಥಾನವನ್ನು ಕಳೆದುಕೊಂಡರು. ಇದನ್ನೇ ಕಾಯುತ್ತಿದ್ದ ಬಿಸಿಸಿಐ, ಅವರನ್ನು ಆರಂಭಿಕ ಸ್ಥಾನದಿಂದ ತೆಗೆದುಹಾಕಿ ಶುಭ್​ಮನ್ ಗಿಲ್​ಗೆ ಅವಕಾಶ ನೀಡಿದೆ. ಆದರೆ ಉಪನಾಯಕನಾಗಿ ಟಿ20 ತಂಡವನ್ನು ಸೇರಿಕೊಂಡಿರುವ ಗಿಲ್ ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಟಿ20 ಕ್ರಿಕೆಟ್​ನಲ್ಲಿ ತಂಡಕ್ಕೆ ಸ್ಫೋಟಕ ಆರಂಭ ಸಿಗುವುದು ಅತ್ಯಗತ್ಯ. ಇದು ಉಳಿದ ಬ್ಯಾಟ್ಸ್‌ಮನ್​ಗಳ ಒತ್ತಡವನ್ನು ಕಡಿಮೆ ಮಾಡುತ್ತದೆ.

ಆರಂಭದಲ್ಲೇ ಗಿಲ್ ನಿಧಾನ

ಆದರೆ ಅಭಿಷೇಕ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿರುವ ಗಿಲ್, ಪಿಚ್​ನಲ್ಲಿ ನೆಲೆ ನಿಲ್ಲಲು ಮೊದಲ ನಾಲ್ಕೈದು ಓವರ್​ಗಳಲ್ಲಿ ಆಮೆಗತಿಯ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಅಭಿಷೇಕ್ ಮೇಲೂ ಒತ್ತಡ ತರುತ್ತಿದೆ. ಹೀಗಾಗಿ ಗಿಲ್​ ಅವರನ್ನು ಟಿ20 ತಂಡದಲ್ಲಿ ಆಡಿಸಲೇಬೇಕೆಂಬ ಹಟಕ್ಕೆ ಬಿದ್ದಿರುವ ಬಿಸಿಸಿಐ, ಅವರನ್ನು ಆರಂಭಿಕ ಸ್ಥಾನದಿಂದ ತೆಗೆದು ಮಧ್ಯಮ ಕ್ರಮಾಂಕದಲ್ಲಿ ಆಡಿಸಿದರೆ, ತಂಡಕ್ಕೆ ಒಳಿತು. ಆರಂಭಿಕ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅಥವಾ ಯಶಸ್ವಿ ಜೈಸ್ವಾಲ್ ಅವರನ್ನು ತರುವುದು ಅತ್ಯವಶ್ಯಕವಾಗಿದೆ. ಏಕೆಂದರೆ ಜೈಸ್ವಾಲ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 160 ಕ್ಕಿಂತ ಹೆಚ್ಚಿದೆ, ಆದರೂ ಅವರು ಟಿ20 ತಂಡದಿಂದ ಹೊರಗುಳಿದಿದ್ದಾರೆ.

ಏಷ್ಯಾಕಪ್​ನಿಂದ ಭಾರತ ಟಿ20 ತಂಡದಲ್ಲಿ ಆರಂಭಿಕನಾಗಿ ಆಡುತ್ತಿರುವ ಗಿಲ್ ಅಂದಿನಿಂದ ಅರ್ಧಶತಕಕ್ಕಾಗಿ ಹಂಬಲಿಸುತ್ತಿದ್ದಾರೆ. ಗಿಲ್ ಇದುವರೆಗೆ ಆಡಿರುವ 11 ಟಿ20 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಿಲ್ಲ, ಅವರ ಅತ್ಯುತ್ತಮ ಸ್ಕೋರ್ 47 ರನ್ ಆಗಿದೆ. ಇದರಿಂದ ಗಿಲ್ ಮೇಲಿನ ಒತ್ತಡ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಗಿಲ್ ಶೀಘ್ರದಲ್ಲೇ ಟಿ20ಯಲ್ಲಿ ದೊಡ್ಡ ಮತ್ತು ತ್ವರಿತ ಇನ್ನಿಂಗ್ಸ್ ಆಡದಿದ್ದರೆ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Thu, 6 November 25