SA20: ಮುಂಬೈ ಬಳಗ ಸೇರಿದ 88 ಶತಕಗಳ ಸರದಾರ..! ಆಸೀಸ್​ ದಂತಕಥೆಗೂ ಅವಕಾಶ

SA20: ಮುಂಬೈ ಇಂಡಿಯನ್ಸ್ ಕೇಪ್ ಟೌನ್‌ನ ಕೋಚಿಂಗ್ ಸಿಬ್ಬಂದಿಯ ಆಯ್ಕೆಯಾಗಿದ್ದು, ಸೈಮನ್ ಕ್ಯಾಟಿಚ್ ಮುಖ್ಯ ಕೋಚ್ ಆಗಿ, ಹಾಶಿಮ್ ಆಮ್ಲಾ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

SA20: ಮುಂಬೈ ಬಳಗ ಸೇರಿದ 88 ಶತಕಗಳ ಸರದಾರ..! ಆಸೀಸ್​ ದಂತಕಥೆಗೂ ಅವಕಾಶ
Edited By:

Updated on: Sep 15, 2022 | 3:10 PM

ಐಪಿಎಲ್​ನ (IPL) ಅತ್ಯಂತ ಯಶಸ್ವಿ ತಂಡ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್​ಗೆ (Mumbai Indians) ಕಳೆದೆರಡು ಸೀಸನ್​ಗಳು ಉತ್ತಮವಾಗಿಲ್ಲದೆ ಇರಬಹುದು. ಆದರೆ ಯಾವಾಗ ಬೇಕಾದರೂ ಪುಟಿದೇಳುವ ಸಾಮಥ್ರ್ಯವನ್ನು ಈ ತಂಡ ಹೊಂದಿದೆ. ಹೀಗಾಗಿ ಮುಂಬರುವ ಸೀಸನ್​ನಲ್ಲಿ ಶತಯಾಗತಾಯ ಕಪ್ ಗೆಲ್ಲುವ ಕನಸಿನೊಂದಿಗೆ ಈ ತಂಡ ತಯಾರಿಯಲ್ಲಿ ತೊಡಗಿಕೊಂಡಿದೆ. ಆದರೆ ಅದಕ್ಕೂ ಮೊದಲು ಭಾರತದ ಹೊರಕ್ಕೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿರುವ ಮುಂಬೈ ಫ್ರಾಂಚೈಸಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಆಯೋಜನೆಗೊಳ್ಳುತ್ತಿರು ಟಿ20 ಲೀಗ್​ನಲ್ಲೂ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಹೆಸರಿನಲ್ಲಿ ತಂಡವೊಂದನ್ನು ಖರೀದಿಸಿದೆ. ಹೀಗಾಗಿ ತಂಡವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಸಲುವಾಗಿ ಫ್ರಾಂಚೈಸಿ ತನ್ನ ತಂಡಕ್ಕೆ ಹೊಸ ಕೋಚಿಂಗ್ ಸ್ಟಾಫನ್ನು ಆಯ್ಕೆ ಮಾಡಿದೆ. ತಂಡದ ಮುಖ್ಯ ಕೋಚ್ ಆಗಿ ಸೈಮನ್ ಕ್ಯಾಟಿಚ್ (Simon Katich) ನೇಮಕಗೊಂಡಿದ್ದಾರೆ. ಸೈಮನ್ ಕ್ಯಾಟಿಚ್ ಐಪಿಎಲ್‌ನಲ್ಲೂ ಕೋಚಿಂಗ್‌ ಮಾಡಿ ಸಾಕಷ್ಟು ಅಪಾರ ಅನುಭವವನ್ನು ಹೊಂದಿದ್ದು, ಅವರು ಕೆಕೆಆರ್ ಮತ್ತು ಆರ್‌ಸಿಬಿ ತಂಡಕ್ಕೆ ಕೋಚ್ ಆಗಿ ಸೇವೆಸಲ್ಲಿಸಿದ್ದಾರೆ.

ಆಮ್ಲಾ ಬ್ಯಾಟಿಂಗ್ ಕೋಚ್

ಸೈಮನ್ ಕ್ಯಾಟಿಚ್ ಹೊರತಾಗಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಹಾಶಿಮ್ ಆಮ್ಲಾರನ್ನು ತಂಡದ ಬ್ಯಾಟಿಂಗ್ ಕೋಚ್​ಗೆ ನೇಮಿಸಲಾಗಿದೆ. ಆಮ್ಲಾ ದಕ್ಷಿಣ ಆಫ್ರಿಕಾ ತಂಡದಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ತಂಡದ ಪರವಾಗಿ 88 ಶತಕಗಳನ್ನು ಸೇಡಿಸಿದ ದಾಖಲೆಯನ್ನು ಮಾಡಿದ್ದಾರೆ. ಅಷ್ಟೆ ಅಲ್ಲದೆ ಐಪಿಎಲ್​ನಲ್ಲೂ ತಮ್ಮ ಛಾಪೂ ಮೂಡಿಸಿರುವ ಆಮ್ಲಾ ಎರಡು ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮ್ಲಾ ಜೊತೆಗೆ ಫೀಲ್ಡಿಂಗ್ ಕೋಚ್ ಹುದ್ದೆಗೆ ನ್ಯೂಜಿಲೆಂಡ್ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಜೇಮ್ಸ್ ಪಾಲ್ಮಂಟ್ ಆಯ್ಕೆಯಾಗಿದ್ದರೆ, ದಕ್ಷಿಣ ಆಫ್ರಿಕಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ರಾಬಿನ್ ಪೀಟರ್ಸನ್ ತಂಡದ ಜನರಲ್ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.

ಮುಖ್ಯ ಕೋಚ್ ಆಗಿ ಆಯ್ಕೆಯಾದ ಬಳಿಕ ಹೇಳಿಕೆ ನೀಡಿರುವ ಕ್ಯಾಟಿಚ್, “ಮುಂಬೈ ಇಂಡಿಯನ್ಸ್ ಕೇಪ್ ಟೌನ್‌ ತಂಡದ ಮುಖ್ಯ ಕೋಚ್ ಸ್ಥಾನವನ್ನು ನೀಡಿರುವುದು ನನಗೆ ಹೆಮ್ಮೆ ಎನಿಸಿದೆ. ಹೊಸ ತಂಡವನ್ನು ಕಟ್ಟುವುದು ಯಾವಾಗಲೂ ವಿಶೇಷವಾಗಿದ್ದು, ಇದರಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ತಂಡದ ಸಂಸ್ಕೃತಿಯನ್ನು ರಚಿಸಲು ಉತ್ತಮ ಅವಕಾಶ ಸಿಗಲಿದೆ ಎಂದಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್ ಕೇಪ್ ಟೌನ್‌ನ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ರೋಮಾಂಚನಗೊಂಡಿದ್ದೇನೆ ಎಂದು ಆಮ್ಲಾ ಹೇಳಿಕೊಂಡಿದ್ದಾರೆ.

ಮುಂಬೈ ತಂಡದಲ್ಲಿರುವ 5 ಪ್ರಮುಖ ಆಟಗಾರರು

ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಇದುವರೆಗೆ ಐದು ಆಟಗಾರರೊಂದಿಗೆ ಸಹಿ ಹಾಕಿದ್ದು, ಅವರಲ್ಲಿ ಕಗಿಸೊ ರಬಾಡ, ಡೆವಾಲ್ಡ್ ಬ್ರೆವಿಸ್, ರಶೀದ್ ಖಾನ್, ಸ್ಯಾಮ್ ಕರ್ರನ್ ಮತ್ತು ಲಿಯಾಮ್ ಲಿವಿಂಗ್ಸ್ಟನ್​ರಂತಹ ಸ್ಟಾರ್ ಕ್ರಿಕೆಟಿಗರು ಸೇರಿದ್ದಾರೆ.