AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಾರ್ ಎಡವಟ್ಟು… ಪ್ರಾಣಾಪಾಯದಿಂದ ಸಿರಾಜ್ ಪಾರು!

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 351 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 48.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 352 ರನ್​ಗಳಿಸಿ ಐದು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಬ್ರಾರ್ ಎಡವಟ್ಟು... ಪ್ರಾಣಾಪಾಯದಿಂದ ಸಿರಾಜ್ ಪಾರು!
SirajImage Credit source: Starsports
ಝಾಹಿರ್ ಯೂಸುಫ್
|

Updated on: Oct 04, 2026 | 10:02 AM

Share

ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್-ವಿಕೆಟ್‌ಗಳ ಅಬ್ಬರ ಎಷ್ಟು ರೋಮಾಂಚನ ನೀಡುತ್ತದೆಯೋ, ಅಷ್ಟೇ ಮಜಾ ಕೊಡುವುದು ಅಲ್ಲಿ ನಡೆಯುವ ಅನಿರೀಕ್ಷಿತ ಪ್ರಸಂಗಗಳು. ನ್ಯೂ ಚಂಡೀಗಢದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ ಇಂತಹುದೇ ಒಂದು ನಗು-ಹಾಗೂ-ಭಯದ ಕ್ಷಣಕ್ಕೆ ಸಾಕ್ಷಿಯಾಯಿತು.

ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಲೆಗೆ ಅತ್ಯಂತ ವೇಗವಾಗಿ ಬಂದ ಚೆಂಡಿನಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮತ್ತು ಅದನ್ನು ನೋಡಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಿದ್ದು ಬಿದ್ದು ನಕ್ಕ ಪ್ರಸಂಗ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಏನಿದು ಘಟನೆ?

ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಪಂದ್ಯದ 6ನೇ ಓವರ್‌ನಲ್ಲಿ ಈ ರೋಮಾಂಚಕ ಘಟನೆ ಜರುಗಿತು. ಭಾರತದ ಪರ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಯಲ್ಲಿದ್ದರು. ವಿಂಡೀಸ್ ಬ್ಯಾಟರ್ ಅಮಿರ್ ಜಾಂಗೂ ಅವರು ಸಿರಾಜ್ ಎಸೆದ ಚೆಂಡನ್ನು ಡಿಫೆಂಡ್ ಮಾಡಿ, ತಕ್ಷಣವೇ ಒಂದು ರನ್ ಕದಿಯಲು ಓಡಿದರು. ಇತ್ತ ಬೌಲಿಂಗ್ ಫಾಲೋ-ಥ್ರೂ ಮುಗಿಸಿ ಬ್ಯಾಲೆನ್ಸ್ ಕಳೆದುಕೊಂಡ ಸಿರಾಜ್ ನೆಲಕ್ಕುರುಳಿದರು.

ಇದೇ ವೇಳೆ 30 ಯಾರ್ಡ್​ ಸರ್ಕಲ್​ ಒಳಗಿದ್ದ ಯುವ ಫೀಲ್ಡರ್ ಗುರುನೂರ್ ಬ್ರಾರ್ ಅತ್ಯಂತ ಆಕ್ರಮಣಕಾರಿಯಾಗಿ ಧಾವಿಸಿ ಬಂದು ಚೆಂಡನ್ನು ಕೈಗೆತ್ತಿಕೊಂಡರು. ಅಲ್ಲದೆ ಸ್ಟ್ರೈಕರ್ ಎಂಡ್‌ನಲ್ಲಿದ್ದ ಬ್ಯಾಟರ್ ಅನ್ನು ರನ್ ಔಟ್ ಮಾಡುವ ತರಾತುರಿಯಲ್ಲಿ ವಿಕೆಟ್‌ನತ್ತ ಬಲವಾಗಿ ಎಸೆದರು. ಆದರೆ, ಅವರ ಕೈಯಿಂದ ಜಾರಿದ ಆ ‘ವೈಲ್ಡ್ ಥ್ರೋ’ ನೇರವಾಗಿ ಹೋದದ್ದು ನೆಲದ ಮೇಲಿದ್ದ ಸಿರಾಜ್ ಅವರ ತಲೆಯ ಕಡೆಗೆ!

ಸಮಯಪ್ರಜ್ಞೆ ಮೆರೆದ ಸಿರಾಜ್!

ಚೆಂಡು ಅತಿ ವೇಗವಾಗಿ ತನ್ನತ್ತ ನುಗ್ಗಿ ಬರುತ್ತಿರುವುದನ್ನು ಕಂಡ ಸಿರಾಜ್ ಸಮಯಪ್ರಜ್ಞೆ ಮೆರೆದು ಮೈದಾನದಲ್ಲೇ ಮಲಗಿದರು. ಆ ಬುಲೆಟ್ ವೇಗದ ಎಸೆತ ಸಿರಾಜ್ ತಲೆಗೆ ಕೇವಲ ಇಂಚುಗಳ ಅಂತರದಲ್ಲಿ ಹಾದುಹೋಯಿತು. ಒಂದು ವೇಳೆ ಅವರು ಕ್ಷಣಾರ್ಧದಲ್ಲಿ ತಲೆ ಬಗ್ಗಿಸದೇ ಹೋಗಿದ್ದರೆ, ಭೀಕರ ಗಾಯಕ್ಕೆ ಒಳಗಾಗುತ್ತಿದ್ದರು.

ಬ್ರಾರ್​ಗೆ ಬೈಗುಳ:

ಈ ಆಘಾತಕಾರಿ ಥ್ರೋ ಕಂಡು ರೋಹಿತ್ ಶರ್ಮಾ ಮೈದಾನದಲ್ಲೇ ಗುರ್ನೂರ್ ಬ್ರಾರ್​ರನ್ನು ಬೈದರು. ಆದರೆ, ಮರುಕ್ಷಣವೇ ಆ ಎಡವಟ್ಟು ಹಾಗೂ ಅದರಿಂದ ಪಾರಾಗಲು ಸಿರಾಜ್ ಮಾಡಿದ ಸರ್ಕಸ್ ಕಂಡು ರೋಹಿತ್ ಮತ್ತು ವಿರಾಟ್ ಕೊಹ್ಲಿಗೆ ತಮ್ಮ ನಗು ತಡೆಯಲಾಗಲಿಲ್ಲ. ಇಬ್ಬರೂ ದಿಗ್ಗಜರು ಮೈದಾನದಲ್ಲೇ ನಗುತ್ತಿರುವ  ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ವಿರುದ್ಧ ಗಿಲ್ ಗರಂ!

ಒಟ್ಟಾರೆಯಾಗಿ ಹೇಳುವುದಾದರೆ, ಸಿರಾಜ್ ಅವರ ಅದೃಷ್ಟ ಹಾಗೂ ಸಮಯಪ್ರಜ್ಞೆಯಿಂದ ದೊಡ್ಡ ಗಾಯವೊಂದು ತಪ್ಪಿದಂತೂ ಸುಳ್ಳಲ್ಲ. ಪಂದ್ಯದ ಗಂಭೀರತೆಯ ನಡುವೆ ನಡೆದ ಈ ಅನಿರೀಕ್ಷಿತ ಪ್ರಸಂಗವು ಮೈದಾನದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದರೂ, ಅಂತಿಮವಾಗಿ ಎಲ್ಲರ ಮುಖದಲ್ಲೂ ನಗು ತರಿಸುವ ಮೂಲಕ ಸುಖಾಂತ್ಯ ಕಂಡಿತು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More