AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕೇವಲ ಗೆಲುವಲ್ಲ… ಇತಿಹಾಸವನ್ನೇ ಬದಲಿಸಿದ ವೆಸ್ಟ್ ಇಂಡೀಸ್

ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಊಹಿಸದ ರನ್‌ ಚೇಸಿಂಗ್​ಗೆ ಮುಲ್ಲಾನ್‌ಪುರ ಕ್ರೀಡಾಂಗಣ ಸಾಕ್ಷಿಯಾಗಿದೆ. ಈ ಚೇಸಿಂಗ್​ನೊಂದಿಗೆ ವೆಸ್ಟ್ ಇಂಡೀಸ್ ತಂಡ ಹೊಸ ಇತಿಹಾಸವನ್ನು ಸಹ ನಿರ್ಮಿಸಿದೆ. ಭರ್ಜರಿ ಫಾರ್ಮ್‌ನಲ್ಲಿದ್ದ ಟೀಮ್ ಇಂಡಿಯಾವನ್ನು ಅವರದ್ದೇ ನೆಲದಲ್ಲಿ ಸೋಲಿಸಿ ವೆಸ್ಟ್ ಇಂಡೀಸ್ ಬರೆದ ಹೊಸ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಇದು ಕೇವಲ ಗೆಲುವಲ್ಲ... ಇತಿಹಾಸವನ್ನೇ ಬದಲಿಸಿದ ವೆಸ್ಟ್ ಇಂಡೀಸ್
West Indies Image Credit source: GettyImages
ಝಾಹಿರ್ ಯೂಸುಫ್
|

Updated on: Oct 04, 2026 | 8:03 AM

Share

ವೆಸ್ಟ್ ಇಂಡೀಸ್ ತಂಡ ಏಕದಿನ ಕ್ರಿಕೆಟ್ ಆಡಲು ಆರಂಭಿಸಿ ಬರೋಬ್ಬರಿ 53 ವರ್ಷಗಳಾಗಿವೆ. ಈ ಐದು ದಶಕಗಳ ಸುದೀರ್ಘ ಇತಿಹಾಸದಲ್ಲಿ ವಿಂಡೀಸ್ ಪಡೆ ಒಮ್ಮೆಯೂ 350ಕ್ಕೂ ಅಧಿಕ ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಗೆದ್ದ ಉದಾಹರಣೆಯೇ ಇರಲಿಲ್ಲ. ಆದರೆ, ಈ ಬಾರಿ ಬಲಿಷ್ಠ ಭಾರತ ತಂಡವನ್ನೇ ಅವರದ್ದೇ ನೆಲದಲ್ಲಿ ಬಗ್ಗುಬಡಿಯುವ ಮೂಲಕ ಕೆರಿಬಿಯನ್ ಪಡೆ ಹೊಸ ಇತಿಹಾಸ ಬರೆದಿದೆ.

ಚಂಡೀಗಢದ ಮುಲ್ಲಾನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್​ಗಳ ವಿಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಕೆಎಲ್ ರಾಹುಲ್ (129) ಅವರ ಶತಕದ ನೆರವಿನೊಂದಿಗೆ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 351 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ನಾಯಕ ಶಾಯ್ ಹೋಪ್ (163) ಭರ್ಜರಿ ಸೆಂಚುರಿ ಸಿಡಿಸಿದರು. ಈ ಸೆಂಚುರಿಯೊಂದಿಗೆ ವಿಂಡೀಸ್ ಪಡೆ 48.2 ಓವರ್​ಗಳಲ್ಲಿ 352 ರನ್ ಬಾರಿಸಿ ಐತಿಹಾಸಿಕ ವಿಜಯ ಸಾಧಿಸಿದೆ.

ಅಂದರೆ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವು ಏಕದಿನ ಕ್ರಿಕೆಟ್​ನಲ್ಲಿ 350+ ಸ್ಕೋರ್ ಅನ್ನು ಬೆನ್ನತ್ತಿ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ 2019 ರಲ್ಲಿ ಐರ್ಲೆಂಡ್ ವಿರುದ್ಧ 328 ರನ್​ಗಳನ್ನು ಚೇಸ್ ಮಾಡಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ ಕೆರಿಬಿಯನ್ನರು ಟೀಮ್ ಇಂಡಿಯಾವನ್ನು ಭಾರತದ ನೆಲದಲ್ಲೇ ಸೋಲಿಸಿ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಟ್ ಇಂಡೀಸ್ ತಂಡದ ಟಾಪ್ 5 ಯಶಸ್ವಿ ರನ್ ಚೇಸ್‌ಗಳ ವಿವರ ಹೀಗಿದೆ:

ಸಂಖ್ಯೆ ಸ್ಕೋರ್ ಮತ್ತು ಗುರಿ ಎದುರಾಳಿ ತಂಡ ಪಂದ್ಯ ನಡೆದ ಸ್ಥಳ ವರ್ಷ ಫಲಿತಾಂಶ
1 352/5 ಭಾರತ ನ್ಯೂ ಚಂಡೀಗಢ 2026 5 ವಿಕೆಟ್‌ಗಳ ಗೆಲುವು
2 328/3 ಐರ್ಲೆಂಡ್ ಡಬ್ಲಿನ್ 2019 5 ವಿಕೆಟ್‌ಗಳ ಗೆಲುವು
3 326/6 ಇಂಗ್ಲೆಂಡ್ ನಾರ್ತ್ ಸೌಂಡ್ 2023 4 ವಿಕೆಟ್‌ಗಳ ಗೆಲುವು
4 322/3 ಬಾಂಗ್ಲಾದೇಶ್ ಬಾಸೆಟೆರೆ 2024 7 ವಿಕೆಟ್‌ಗಳ ಗೆಲುವು
5 309/6 ಪಾಕಿಸ್ತಾನ್ ಪ್ರಾವಿಡೆನ್ಸ್ 2017 4 ವಿಕೆಟ್‌ಗಳ ಗೆಲುವು

ಇದನ್ನೂ ಓದಿ: ಒಂದು ಶತಕ… ಕೆಎಲ್ ರಾಹುಲ್ ಹೆಸರಿಗೆ ‘ಸಪ್ತ’ ದಾಖಲೆಗಳ ಸೇರ್ಪಡೆ

ಒಟ್ಟಾರೆಯಾಗಿ ಹೇಳುವುದಾದರೆ, ನ್ಯೂ ಚಂಡೀಗಢದ ಈ ಐತಿಹಾಸಿಕ ಗೆಲುವು ಕೇವಲ ಒಂದು ಪಂದ್ಯದ ಜಯವಲ್ಲ. ಇದು ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಗತವೈಭವದ ಮರುಕಳಿಕೆಯ ಸ್ಪಷ್ಟ ಮುನ್ಸೂಚನೆ. ಕಳೆದ ಐದು ದಶಕಗಳಲ್ಲಿ ಅಸಾಧ್ಯವೆನಿಸಿದ್ದ ಸವಾಲನ್ನು ಮೆಟ್ಟಿ ನಿಂತು, ಬಲಿಷ್ಠ ಭಾರತದ ಕೋಟೆಯನ್ನೇ ಭೇದಿಸಿದ ಕೆರಿಬಿಯನ್ ಪಡೆಯ ಈ ಸಾಹಸ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯಲಿದೆ. ಈ ಅದ್ಭುತ ರನ್ ಚೇಸ್ ಮೂಲಕ ವಿಂಡೀಸ್ ಪಡೆ ತನ್ನ ಗತವೈಭವವನ್ನು ಸಂಪೂರ್ಣವಾಗಿ ಮರಳಿ ಪಡೆಯಲಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More