ಭಾರತ-ಐರ್ಲೆಂಡ್ ನಡುವಣ 3 ಪಂದ್ಯಗಳ ಟಿ20 ಸರಣಿ ಆಗಸ್ಟ್ 18 ರಿಂದ ಶುರುವಾಗಲಿದೆ. ಐರ್ಲೆಂಡ್ನ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಈ ಸರಣಿಗಾಗಿ ಟೀಮ್ ಇಂಡಿಯಾ ಆಗಸ್ಟ್ 15 ರಂದು ಪ್ರಯಾಣ ಬೆಳೆಸಲಿದೆ. ಆದರೆ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಸಿತಾಂಶು ಕೊಟಕ್ ಅವರನ್ನು ಭಾರತ ತಂಡದೊಂದಿಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ಮುಂಬರುವ ಏಷ್ಯಾಕಪ್ ಹಿನ್ನಲೆಯಲ್ಲಿ ಐರ್ಲೆಂಡ್ ವಿರುದ್ಧದ ಸರಣಿಯಿಂದ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಹಾಗೆಯೇ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಇತ್ತ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಐರ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಹೊಸ ಕೋಚ್ ಆಗಿ ಮಾಜಿ ಆಟಗಾರ ಸಿತಾಂಶು ಕೊಟಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಸಿತಾಂಶು ಕೊಟಕ್ ಸೌರಾಷ್ಟ್ರ ಮೂಲದ ಮಾಜಿ ಕ್ರಿಕೆಟಿಗ. ಈ ಹಿಂದೆ ಭಾರತ ಎ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಎನ್‌ಸಿಎನಲ್ಲಿ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ದೇಶೀಯ ಅಂಗಳದಲ್ಲಿ 130 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಸಿತಾಂಶು ಒಟ್ಟು 8061 ರನ್ ಕಲೆಹಾಕಿದ್ದಾರೆ. ಹಾಗೆಯೇ 89 ಲಿಸ್ಟ್ ಎ ಪಂದ್ಯಗಳಲ್ಲಿ 3083 ರನ್ ಮತ್ತು 9 ಟಿ20 ಪಂದ್ಯಗಳಲ್ಲಿ 133 ರನ್ ಗಳಿಸಿದ್ದಾರೆ. ಇದಲ್ಲದೆ 124 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಸಿತಾಂಶು ಕೊಟಕ್ 2013 ರಲ್ಲಿ ಕೊನೆಯ ಬಾರಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಮುಂಬೈ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದರು. ಅಂದು ತಂಡದಲ್ಲಿ ಚೇತೇಶ್ವರ ಪೂಜಾರಾ ಹಾಗೂ ಜಯದೇವ್ ಉನಾದ್ಕಟ್ ಕೂಡ ಇದ್ದರು ಎಂಬುದು ವಿಶೇಷ.
ಇದನ್ನೂ ಓದಿ: ಪೂರನ್ ಪವರ್ಗೆ ಹಳೆಯ ದಾಖಲೆ ಉಡೀಸ್: ಟೀಮ್ ಇಂಡಿಯಾ ವಿರುದ್ದ ಹೊಸ ರೆಕಾರ್ಡ್
ಹಾಗೆಯೇ ಆ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಸಚಿನ್ ತೆಂಡೂಲ್ಕರ್ ಕೂಡ ಆಡಿದ್ದರು. ಇದೀಗ ಹೊಸ ಇನಿಂಗ್ಸ್ ಆರಂಭಿಸಿರುವ ಸಿತಾಂಶು ಕೊಟಕ್ ಐರ್ಲೆಂಡ್ ಸರಣಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.