SL vs NZ: 8 ಟೆಸ್ಟ್‌ಗಳಲ್ಲಿ 5ನೇ ಶತಕ; ಶ್ರೀಲಂಕಾ ಕ್ರಿಕೆಟ್ಗೆ ಸಿಕ್ಕ ರನ್ ಮಷಿನ್ ಮೆಂಡಿಸ್
Kamindu Mendis: ಪಂದ್ಯದ ಮೊದಲ ದಿನವೇ ಅರ್ಧಶತಕ ಸಿಡಿಸುವ ಮೂಲಕ ಮೆಂಡಿಸ್ ಅಚ್ಚರಿಯ ವಿಶ್ವ ದಾಖಲೆ ಮಾಡಿದ್ದರು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಕಮಿಂದು ಮೆಂಡಿಸ್ ತಮ್ಮ ಚೊಚ್ಚಲ ಪಂದ್ಯದ ನಂತರ ಸತತ 8 ಟೆಸ್ಟ್ ಪಂದ್ಯಗಳಲ್ಲಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಗಾಲೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾದ ಆಲ್‌ರೌಂಡರ್ ಕಮಿಂದು ಮೆಂಡಿಸ್ ಭರ್ಜರಿ ಶತಕ ಸಿಡಿಸಿ ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಸರಿಗಟ್ಟಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದ ಕೇವಲ 8ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮೆಂಡಿಸ್ ಬರೋಬ್ಬರಿ 5 ನೇ ಶತಕವನ್ನು ಸಿಡಿಸಿದ್ದಾರೆ. ಇದರೊಂದಿಗೆ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್‌ರನ್ನು ಸರಿಗಟ್ಟಿದ್ದಾರೆ. ಬ್ರಾಡ್ಮನ್ ಮತ್ತು ಜಾರ್ಜ್ ಹೆಡ್ಲಿ ತಮ್ಮ ಮೊದಲ 13 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳನ್ನು ಪೂರ್ಣಗೊಳಿಸಿದ್ದರು. ಇದೀಗ ಮೆಂಡಿಸ್ ಕೂಡ ತಮ್ಮ 8ನೇ ಟೆಸ್ಟ್ ಪಂದ್ಯದ 13ನೇ ಇನ್ನಿಂಗ್ಸ್‌ನಲ್ಲಿ 5ನೇ ಶತಕ ಪೂರೈಸಿದ್ದು, ದಿಗ್ಗಜರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.
ಇಷ್ಟೇ ಅಲ್ಲ, ಈ ಪಂದ್ಯದ ಮೊದಲ ದಿನವೇ ಅರ್ಧಶತಕ ಸಿಡಿಸುವ ಮೂಲಕ ಮೆಂಡಿಸ್ ಅಚ್ಚರಿಯ ವಿಶ್ವ ದಾಖಲೆ ಮಾಡಿದ್ದರು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಕಮಿಂದು ಮೆಂಡಿಸ್ ತಮ್ಮ ಚೊಚ್ಚಲ ಪಂದ್ಯದ ನಂತರ ಸತತ 8 ಟೆಸ್ಟ್ ಪಂದ್ಯಗಳಲ್ಲಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
ಕಾಂಬ್ಳಿ ದಾಖಲೆ ಸ್ವಲ್ಪದರಲ್ಲೇ ಮಿಸ್
ಗಾಲೆಯಲ್ಲಿ ದಾಖಲೆಯ ಶತಕ ಸಿಡಿಸಿರುವ ಮೆಂಡಿಸ್ ಇದೀಗ ಟೆಸ್ಟ್‌ನಲ್ಲಿ 900 ರನ್ ಗಡಿ ದಾಟಿದ್ದಾರೆ. ಇದರೊಂದಿಗೆ ಟೆಸ್ಟ್‌ನ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 900 ರನ್ ಗಳಿಸಿದ 5ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ ವೇಗವಾಗಿ 900 ರನ್ ಗಳಿಸಿದ ದಾಖಲೆಯನ್ನು ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತು ವೆಸ್ಟ್ ಇಂಡೀಸ್‌ನ ಎವರ್ಟನ್ ವೀಕ್ಸ್ ಜಂಟಿಯಾಗಿ ಹೊಂದಿದ್ದಾರೆ. ಇವರಿಬ್ಬರೂ 11 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಯಶಸ್ವಿ ದಾಖಲೆ ಮೇಲೆ ಮೆಂಡಿಸ್ ಕಣ್ಣು
ಕಮಿಂದು ಮೆಂಡಿಸ್ 1000 ಟೆಸ್ಟ್ ರನ್ ಪೂರ್ಣಗೊಳಿಸಲು ಇನ್ನೂ 78 ರನ್ ಅಗತ್ಯವಿದೆ. ಈ ಇನ್ನಿಂಗ್ಸ್ ಅಥವಾ ಮುಂದಿನ 2 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರೆ ಅವರು ಭಾರತದ ಯಶಸ್ವಿ ಜೈಸ್ವಾಲ್ ಅವರ ದಾಖಲೆ ಮುರಿಯಲಿದ್ದಾರೆ. ಜೈಸ್ವಾಲ್ 16 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳ ಗಡಿಯನ್ನು ಮುಟ್ಟಿದ್ದರು. ಅತ್ಯಂತ ವೇಗದ 1000 ಟೆಸ್ಟ್ ರನ್‌ಗಳನ್ನು ಗಳಿಸಿದ ದಾಖಲೆಯು ಹರ್ಬರ್ಟ್ ಸಟ್‌ಕ್ಲಿಫ್ ಮತ್ತು ಎವರ್ಟನ್ ವೀಕ್ಸ್ ಹೆಸರಿನಲ್ಲಿದೆ. ಈ ಇಬ್ಬರೂ ಆಟಗಾರರು 12 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಡಾನ್ ಬ್ರಾಡ್ಮನ್ 13 ಇನ್ನಿಂಗ್ಸ್‌ಗಳಲ್ಲಿ ಈ ಅಂಕಿಅಂಶ ದಾಟಿದ್ದರು.
ಬಲಿಷ್ಠ ಸ್ಥಾನದಲ್ಲಿ ಶ್ರೀಲಂಕಾ
ಈ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ಆರಂಭ ಉತ್ತಮವಾಗಿರಲಿಲ್ಲ. 2 ರನ್ ಗಳಿಸುವಷ್ಟರಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಇದಾದ ಬಳಿಕ ಎಲ್ಲ ಬ್ಯಾಟ್ಸ್ಮನ್ಗಳು ಭರ್ಜರಿ ಬ್ಯಾಟಿಂಗ್ ನಡೆಸಿದರು. ದಿನೇಶ್ ಚಾಂಡಿಮಾಲ್ ಮತ್ತು ಕಮಿಂದು ಮೆಂಡಿಸ್ ಶತಕ ಬಾರಿಸಿದರೆ, ದಿಮುತ್ ಕರುಣಾರತ್ನೆ 46 ರನ್, ಏಂಜೆಲೊ ಮ್ಯಾಥ್ಯೂಸ್ 88 ರನ್ ಮತ್ತು ನಾಯಕ ಧನಂಜಯ್ ಡಿ ಸಿಲ್ವಾ 44 ರನ್ ಕಲೆಹಾಕಿದರು. ಇದರೊಂದಿಗೆ ಲಂಕಾ ತಂಡ 5 ವಿಕೆಟ್ ನಷ್ಟಕ್ಕೆ 400 ರನ್ ದಾಟಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ