
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟೂರ್ನಿಯಲ್ಲಿ ಕರ್ನಾಟಕದ ಯುವ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಅಬ್ಬರ ಮುಂದುವರೆದಿದೆ. ಈ ಟೂರ್ನಿಯ 26ನೇ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸುವ ಮೂಲಕ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಅದು ಕೂಡ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗ ಮಿಸ್ಟಿಕ್ಸ್ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮರಣ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಯುವ ದಾಂಡಿಗ ಆ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಸ್ಮರಣ್ ಬ್ಯಾಟ್ನಿಂದ 52 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 89 ರನ್ ಮೂಡಿಬಂತು.
ಈ ಅಜೇಯ ಅರ್ಧಶತಕದ ನೆರವಿನೊಂದಿಗೆ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 19.2 ಓವರ್ಗಳಲ್ಲಿ 167 ರನ್ಗಳಿಸಿ 6 ವಿಕೆಟ್ಗಳ ಜಯ ಸಾಧಿಸಿತು. ವಿಶೇಷ ಎಂದರೆ ಇದು ಗುಲ್ಬರ್ಗ ಮಿಸ್ಟಿಕ್ಸ್ ತಂಡದ 6ನೇ ಗೆಲುವು. ಈ ಆರು ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿರುವುದೇ ಸ್ಮರಣ್ ರವಿಚಂದ್ರನ್.
ಈ ಬಾರಿಯ ಮಹಾರಾಜ ಟಿ20 ಟೂರ್ನಿಯಲ್ಲಿ ಈವರೆಗೆ 8 ಇನಿಂಗ್ಸ್ ಆಡಿರುವ ಸ್ಮರಣ್ ರವಿಚಂದ್ರನ್ ಒಟ್ಟು 391 ರನ್ ಗಳಿಸಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು 391 ರನ್ ಕಲೆಹಾಕಿರುವ ಸ್ಮರಣ್ ಬ್ಯಾಟ್ನಿಂದ ಈವರೆಗೆ ಸಿಡಿದಿರುವುದು ಬರೋಬ್ಬರಿ 25 ಸಿಕ್ಸರ್ಗಳು. ಅಂದರೆ ಪ್ರಸ್ತುತ ಟೂರ್ನಿಯಲ್ಲಿ ಯಾವುದೇ ಬ್ಯಾಟರ್ 20 ಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿಲ್ಲ. ಆದರೆ ಇತ್ತ ಕಡೆ ಸ್ಮರಣ್ ರವಿಚಂದ್ರನ್ ಭರ್ಜರಿ ಬ್ಯಾಟಿಂಗ್ನೊಂದಿಗೆ ಅಬ್ಬರಿಸುತ್ತಿದ್ದಾರೆ.
ಹಾಗೆಯೇ ಈವರೆಗೆ ಆಡಿದ 8 ಇನಿಂಗ್ಸ್ಗಳಲ್ಲಿ ಸ್ಮರಣ್ ರವಿಚಂದ್ರನ್ ಒಟ್ಟು 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದರ ಹೊರತಾಗಿ, ಪ್ರಸ್ತುತ ಟೂರ್ನಿಯಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಸ್ಮರಣ್ ಅವರ ಸದ್ಯದ ಬ್ಯಾಟಿಂಗ್ ಸರಾಸರಿ 97.75 ರನ್.
ಹೀಗೆ ಪ್ರತಿಯೊಂದು ಪಂದ್ಯದಲ್ಲೂ ಮಿಂಚುವ ಮೂಲಕ ಸ್ಮರಣ್ ರವಿಚಂದ್ರನ್ ಕರ್ನಾಟಕ ಟಿ20 ಲೀಗ್ನಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುತ್ತಿದ್ದಾರೆ.
ಸ್ಮರಣ್ ರವಿಚಂದ್ರನ್ ಕಳೆದ ಸೀಸನ್ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಎಸ್ಆರ್ಹೆಚ್ ತಂಡದಲ್ಲಿದ್ದ ಆ್ಯಡಂ ಝಂಪಾ ಅವರು ಗಾಯಗೊಂಡಿದ್ದ ಕಾರಣ ಬದಲಿಯಾಗಿ ಸ್ಮರಣ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ದುರಾದೃಷ್ಟ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಗೊಂಡಿದ್ದ ಸ್ಮರಣ್ ಫೀಲ್ಡಿಂಗ್ ಅಭ್ಯಾಸದ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಗುಳಿಯಬೇಕಾಯಿತು.
ಇದನ್ನೂ ಓದಿ: 93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೊಸ ತಂಡದ ವಿರುದ್ಧ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ
ಇದೀಗ ತನ್ನ ಸ್ಫೋಟಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದಿರುವ ಸ್ಮರಣ್ ರವಿಚಂದ್ರನ್ ಅವರ ಖರೀದಿಗೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮುಂದಾಗುವುದು ಖಚಿತ. ಇದರೊಂದಿಗೆ ಇನ್ನೂ ಕೆಲ ಫ್ರಾಂಚೈಸಿಗಳು ಕೂಡ ಕರ್ನಾಟಕದ ಎಡಗೈ ದಾಂಡಿಗನ ಆಯ್ಕೆಗೆ ಪೈಪೋಟಿ ನಡೆಸುವುದನ್ನು ಸಹ ಎದುರು ನೋಡಬಹುದು.