12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2022) ಟೂರ್ನಿಯ 10ನೇ ಪಂದ್ಯದಲ್ಲಿಂದು ಭಾರತ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಅನ್ನು ಎದುರಿಸುತ್ತಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (West Indies Women vs India Women) ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿಗೆ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ. ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡರೂ ಓಪನರ್ ಸ್ಮೃತಿ ಮಂದಾನ (Smriti Mandhana) ಹಾಗೂ ಉಪ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ 50 ಓವರ್ಗೆ 317 ರನ್ ಸಿಡಿಸಿದೆ. ಕೆರಿಬಿಯನ್ ಬೌಲರ್ಗಳ ಬೆಂಡೆತ್ತಿದ ಮಂದಾನ ಕೇವಲ 119 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಿಡಿಸಿ 123 ರನ್ ಚಚ್ಚಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 5ನೇ ಶತಕ ಪೂರೈಸಿದರು. ಹರ್ಮನ್ 107 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ನೊಂದಿಗೆ 109 ರನ್ ಬಾರಿಸಿದರು.
ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂದಾನ ಹಾಗೂ ಯಸ್ತಿಕಾ ಭಾಟಿಯಾ ಇನ್ನಿಂಗ್ಸ್ ಆರಂಭಿಸಿದರು. ಭಾಟಿಯಾ ಕೇವಲ 21 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 31 ರನ್ ಸಿಡಿಸಿ ಔಟಾದರು. ಈ ಜೋಡಿ ಮೊದಲ ವಿಕೆಟ್ಗೆ 6.3 ಓವರ್ನಲ್ಲಿ 49 ರನ್ ಕಲೆಹಾಕಿತು. ನಾಯಕಿ ಮಿಥಾಲಿ ರಾಜ್ ಈ ಬಾರಿ ಕೂಡ ವೈಫಲ್ಯ ಅನುಭವಿಸಿದರು. ಇವರ ಆಟ ಕೇವಲ 5 ರನ್ಗೆ ಅಂತ್ಯವಾಯಿತು. ದೀಪ್ತಿ ಶರ್ಮಾ (15) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ಬೇಗನೆ ನಿರ್ಗಮಿಸಿದರು.
ಹೀಗೆ ಭಾರತ 78 ರನ್ ಆಗುವ ಗೊತ್ತಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಮಂದಾನ ಹಾಗೂ ಹರ್ಮನ್ಪ್ರೀತ್ ಕೌರ್. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ಸೆಟಲ್ ಆದಂತೆ ಅಬ್ಬರಿಸಲು ಶುರು ಮಾಡಿತು. ಅದರಲ್ಲೂ ಮಂದಾನ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಇತ್ತ ಹರ್ಮನ್ ಕೂಡ ಇವರಿಗೆ ಅತ್ಯುತ್ತಮ ಸಾಥ್ ನೀಡಿದರು. ಮಂದಾನ ಕೇವಲ 119 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಿಡಿಸಿ 123 ರನ್ ಗಳಿಸಿದರು. ಮಂದಾನ ನಿರ್ಗಮನದ ಬಳಿಕ ಹರ್ಮನ್ ತಮ್ಮ ನೈಜ್ಯ ಆಟಕ್ಕೆ ಮುಂದಾದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಕೌರ್ ಕೆರಿಬಿಯನ್ ಬೌಲರ್ಗಳ ಚಳಿ ಬಿಡಿಸಿ ಏಕದಿನ ಕ್ರಿಕೆಟ್ನಲ್ಲಿ ನಾಲ್ಕನೇ ಶತಕ ಪೂರೈಸಿದರು.
ಕೌರ್ಸಿ107 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಿಡಿಸಿ 109 ರನ್ ಚಚ್ಚಿದರು. ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಕಲೆಹಾಕಿತು. ವೆಸ್ಟ್ ಇಂಡೀಸ್ ಪರ ಅನಿಸಾ ಮೊಹಮ್ಮದ್ 2, ಶಾಮಿಲಿಯಾ ಕೊನ್ನೆಲ್, ಶಕೆರಾ ಸೆಲ್ಮನ್, ಹೇಯ್ಲಿ ಮ್ಯಾಥ್ಯೂಸ್, ಡಿಯಾಂಡ್ರಾ ಡಾಟಿನ್ ತಲಾ 1 ವಿಕೆಟ್ ಕಿತ್ತರು.
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ನ್ಯೂಜಿಲೆಂಡ್ ವಿರುದ್ಧ ಆಡಿದ ಆಟಗಾರರೇ ಕಣಕ್ಕಿಳಿದಿದ್ದಾರೆ. ಇತ್ತ ವೆಸ್ಟ್ ಇಂಡೀಸ್ ತಂಡದಲ್ಲೂ ಯಾವುದೇ ಬದಲಾವಣೆ ಇಲ್ಲ. ಇಲ್ಲಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಹರ್ಮನ್ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಡಿಯಾಂಡ್ರಾ ಡಾಟಿನ್, ಹೇಯ್ಲಿ ಮ್ಯಾಥ್ಯೂಸ್, ಕೈಸಿಯಾ ನೈಟ್, ಸ್ಟೆಫನಿ ಟೇಲರ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ (ವಿಕೆಟ್ ಕೀಪರ್), ಚೆಡಿಯನ್ ನೇಷನ್, ಚಿನೆಲ್ಲೆ ಹೆನ್ರಿ, ಆಲಿಯಾ ಅಲೀನ್, ಶಾಮಿಲಿಯಾ ಕೊನ್ನೆಲ್, ಅನಿಸಾ ಮೊಹಮ್ಮದ್, ಶಕೆರಾ ಸೆಲ್ಮನ್.
IND vs SL: ಇಂದಿನಿಂದ ಭಾರತ-ಶ್ರೀಲಂಕಾ ದ್ವಿತೀಯ ಟೆಸ್ಟ್: ಪಿಂಕ್ ಬಾಲ್ ಕದನಕ್ಕೆ ಸಜ್ಜಾದ ಚಿನ್ನಸ್ವಾಮಿ