ಉಲ್ಟಾ ಹೊಡೆದ ದಾದಾ; ಮುಖ್ಯ ಕೋಚ್ ಹುದ್ದೆಗೆ ಗಂಭೀರ್ ಸೂಕ್ತ ಆಯ್ಕೆ ಎಂದ ಗಂಗೂಲಿ..!

|

Updated on: Jun 01, 2024 | 5:09 PM

Sourav Ganguly: ಕೇವಲ ಎರಡು ದಿನಗಳ ಹಿಂದೆ ಗೌತಮ್ ಗಂಭೀರ್ ಟೀಂ ಇಂಡಿಯಾದ ಹೆಡ್ ಕೋಚ್ ಆಗುವುದು ಇಷ್ಟವಿಲ್ಲವೆಂಬಂತೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದ ಸೌರವ್ ಗಂಗೂಲಿ ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ಇದೀಗ ಹೇಳಿಕೊಂಡಿರುವಂತೆ

ಉಲ್ಟಾ ಹೊಡೆದ ದಾದಾ; ಮುಖ್ಯ ಕೋಚ್ ಹುದ್ದೆಗೆ ಗಂಭೀರ್ ಸೂಕ್ತ ಆಯ್ಕೆ ಎಂದ ಗಂಗೂಲಿ..!
ಗೌತಮ್ ಗಂಭೀರ್, ಸೌರವ್ ಗಂಗೂಲಿ
Follow us on

ಇಡೀ ವಿಶ್ವವೇ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2024) ಎದುರು ನೋಡುತ್ತಿದ್ದರೆ, ಬಿಸಿಸಿಐ (BCCI) ಮಾತ್ರ ಟೀಂ ಇಂಡಿಯಾದ (Team India) ಹೊಸ ಮುಖ್ಯ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ. ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿ 2024 ರ ಟಿ20 ವಿಶ್ವಕಪ್ ನಂತರ ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಉತ್ತಮವಾಗಿ ನಿಭಾಯಿಸಬಲ್ಲ ಉತ್ತಮ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವ ಪಟ್ಟಿಯಲ್ಲಿ ಭಾರತದ ಮಾಜಿ ದಿಗ್ಗಜ ಗೌತಮ್ ಗಂಭೀರ್ (Gautam Gambhir) ಹೆಸರು ಮುಂಚೂಣಿಯಲ್ಲಿದೆ.

ಗಂಭೀರ್ ಉತ್ತಮ ಅಭ್ಯರ್ಥಿ; ಗಂಗೂಲಿ

ಟೀಂ ಇಂಡಿಯಾದ ಹೊಸ ಮುಖ್ಯ ಕೋಚ್ ಯಾರು ಎಂಬ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬುದು ಇನ್ನೂ ದೃಢಪಟ್ಟಿಲ್ಲ. ಇತ್ತೀಚೆಗಷ್ಟೇ ಬಿಸಿಸಿಐ ಗಂಭೀರ್ ಜತೆ ಕೋಚ್ ಆಗುವ ಕುರಿತು ಮಾತುಕತೆ ನಡೆಸಿದೆ ಎಂಬ ವರದಿಗಳು ಹೊರಬಿದ್ದಿದ್ದವು. ಇದೀಗ ಗಂಭೀರ್ ಬಗ್ಗೆ ಸೌರವ್ ಗಂಗೂಲಿ ಹೇಳಿಕೆ ಹೊರಬಿದ್ದಿದೆ.

ಟೀಂ ಇಂಡಿಯಾದ ಕೋಚ್ ಆಗಲು ಗೌತಮ್ ಉತ್ತಮ ಅಭ್ಯರ್ಥಿ ಎಂದು ಗಂಗೂಲಿ ಹೇಳಿದ್ದಾರೆ. ಆದರೆ ಫ್ರಾಂಚೈಸಿಯ ತಂಡದ ಮಾರ್ಗದರ್ಶಕರಾಗಿರುವುದು ಮತ್ತು ಉನ್ನತ ಮಟ್ಟದ ಅಂತರರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಗಂಭೀರ್‌ಗೆ ಇದೆಲ್ಲವೂ ಚೆನ್ನಾಗಿ ತಿಳಿದಿರುತ್ತದೆ ಮತ್ತು ವಿರಾಟ್ ಮತ್ತು ರೋಹಿತ್‌ನಂತಹ ಆಟಗಾರರನ್ನು ಹೇಗೆ ನಿಭಾಯಿಸಬೇಕು ಎಂದು ಸಹ ತಿಳಿದಿರುತ್ತದೆ. ಅವರು ಟೀಂ ಇಂಡಿಯಾದ ಕೋಚ್ ಆದರೆ ತಂಡಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದಿದ್ದಾರೆ.

‘ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ’; ಗಂಭೀರ್ ಮುಖ್ಯ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿಲ್ಲ..?

2 ದಿನಗಳ ಹಿಂದೆ ಗೇಲಿ ಮಾಡಿದ್ದ ಗಂಗೂಲಿ

ಆದರೆ ಇದೇ ಸೌರವ್ ಗಂಗೂಲಿ ಕೆಲವೇ ಕೆಲವು ದಿನಗಳ ಹಿಂದೆ ಗಂಭೀರ್ ಕೋಚ್ ಆಗುವ ಬಗ್ಗೆ ಲೇವಡಿ ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ಅವರು, ‘ಆಟಗಾರನ ಜೀವನದಲ್ಲಿ ಕೋಚ್‌ನ ಪ್ರಾಮುಖ್ಯತೆ ಬಹಳ ಮುಖ್ಯ. ತರಬೇತುದಾರನ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಯಾವುದೇ ಆಟಗಾರನ ವೃತ್ತಿಜೀವನವನ್ನು ರೂಪಿಸುತ್ತದೆ. ಮುಖ್ಯ ಕೋಚ್ ಮೈದಾನದಿಂದ ದೂರ ಉಳಿದಿದ್ದರೂ, ಅವರ ಕೊಡುಗೆ ಮೈದಾನದೊಳಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ಮುಖ್ಯ ಕೋಚ್‌ನನ್ನೂ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು’ ಎಂದು ಬರೆದುಕೊಂಡಿದ್ದರು.

ಗಂಗೂಲಿ ಅವರು ಈ ರೀತಿ ಪೋಸ್ಟ್ ಮಾಡಿದ್ದನ್ನು ನೋಡಿದ್ದ ಅಭಿಮಾನಿಗಳು ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಮಾಡಬಾರದು ಎಂಬುದನ್ನು ಸೂಚಿಸುತ್ತದೆ ಎಂದು ಊಹಿಸಿದ್ದರು. ಆದರೆ ಇದೀಗ ಗಂಗೂಲಿ, ಗಂಭೀರ್ ಪರ ಬ್ಯಾಟ್ ಬೀಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ