
ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terrorist Attack) ನಂತರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಪಾಕಿಸ್ತಾನದೊಂದಿಗಿನ ಸಂಬಂಧದ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದ್ದಾರೆ. ಪಾಕಿಸ್ತಾನದೊಂದಿಗಿನ ಸಂಬಂಧವನ್ನು 100 ಪ್ರತಿಶತ ಕೊನೆಗೊಳಿಸಬೇಕು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುವುದು ತಮಾಷೆಯಲ್ಲ. ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ.
ಉಗ್ರರ ದಾಳಿಯ ಬಗ್ಗೆ ಉಗ್ರವಾಗಿ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ, ‘ಪಹಲ್ಗಾಮ್ ಘಟನೆ ತಮಾಷೆಯಲ್ಲ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ. ಇಡೀ ದೇಶದಾದ್ಯಂತ ಈ ದಾಳಿಯನ್ನು ಖಂಡಿಸಲಾಗುತ್ತಿದೆ. ಹೀಗಾಗಿ ಪಾಕಿಸ್ತಾನದ ವಿರುದ್ಧ ಐಸಿಸಿ ಮತ್ತು ಏಷ್ಯನ್ ಪಂದ್ಯಾವಳಿಗಳಲ್ಲಿಯೂ ಆಡಬಾರದು. ಕ್ರಿಕೆಟ್ ಜೊತೆಗೆ ಪಾಕಿಸ್ತಾನದೊಂದಿಗೆ ಯಾವ ಸಂಬಂಧವೂ ಬೇಡ ಎಂದು ಗಂಗೂಲಿ ಗುಡುಗಿದ್ದಾರೆ.
ಗಂಗೂಲಿ ಮಾತ್ರವಲ್ಲದೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶ್ರೀವತ್ಸ್ ಗೋಸ್ವಾಮಿ ಪಾಕಿಸ್ತಾನದೊಂದಿಗಿನ ಕ್ರೀಡಾ ಸಂಬಂಧಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದರು. ಪಾಕಿಸ್ತಾನದೊಂದಿಗೆ ಭಾರತ ಕ್ರಿಕೆಟ್ ಆಡಬಾರದು. ಈಗ ಮಾತ್ರವಲ್ಲ, ಎಂದಿಗೂ ಉಭಯ ತಂಡಗಳು ಪಂದ್ಯವನ್ನಾಡಬಾರದು. ಅಮಾಯಕ ಭಾರತೀಯರನ್ನು ಕೊಲ್ಲುವುದು ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆಯಾಗಿ ಮಾರ್ಪಟ್ಟಿದೆ. ಹೀಗಿರುವಾ ಭಾರತ ಬ್ಯಾಟ್ ಮತ್ತು ಚೆಂಡಿನಿಂದ ಅಲ್ಲ, ಶೂನ್ಯ ಸಹಿಷ್ಣುತೆಯಿಂದ ಪ್ರತಿಕ್ರಿಯಿಸಬೇಕು ಎಂದಿದ್ದಾರೆ.
IPL 2025: ರೋಹಿತ್ ಶರ್ಮಾಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದ ಬಿಸಿಸಿಐ; ವಿಡಿಯೋ ನೋಡಿ
ಪಹಲ್ಗಾಮ್‌ನಲ್ಲಿ ನಡೆದ ಈ ಭಯೋತ್ಪಾದಕ ದಾಳಿಯ ನಂತರ, ಬಿಸಿಸಿಐ ಕೂಡ ಈ ವಿಷಯದಲ್ಲಿ ಕಟ್ಟುನಿಟ್ಟಾಗಿದೆ. ಈ ಹೇಡಿತನದ ದಾಳಿಯನ್ನು ಖಂಡಿಸಿರುವ ಬಿಸಿಸಿಐ, ಐಪಿಎಲ್ ಪಂದ್ಯದ ವೇಳೆ ಈ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಹೈದರಾಬಾದ್-ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಒಂದು ನಿಮಿಷ ಮೌನಾಚರಣೆ ನಡೆಸಿದಲ್ಲದೆ ಆಟಗಾರರು ಕಪ್ಪು ಪಟ್ಟಿ ಧರಿಸಿ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಯಾವುದೇ ಚಿಯರ್‌ಲೀಡರ್‌ಗಳಿರಲಿಲ್ಲ. ಜೊತೆಗೆ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿತ್ತು.
ಹಾಗೆಯೇ ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಮತ್ತು ಭಾರತ ಸರ್ಕಾರ ಏನು ಹೇಳುತ್ತದೆಯೋ, ಬಿಸಿಸಿಐ ಅದನ್ನೇ ಮಾಡುತ್ತದೆ. ನಾವು ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ನಾವು ಅಮಾಯಕರೊಂದಿಗೆ ಇದ್ದು, ಇಡೀ ಘಟನೆಯನ್ನು ಖಂಡಿಸುತ್ತೇವೆ. ನಮ್ಮ ಸರ್ಕಾರ ಏನು ಹೇಳುತ್ತದೆಯೋ, ಅದನ್ನು ಮಾಡುತ್ತೇವೆ ಎಂದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ