ದಾದಾಗಿರಿಗೆ 22 ವರ್ಷಗಳು: ಲಾರ್ಡ್ಸ್​ನಲ್ಲಿ ಸೌರವ್​ ಗಂಗೂಲಿ ಸೆಲೆಬ್ರೇಷನ್ ಹೇಗಿತ್ತು ನೋಡಿ

|

Updated on: Jul 13, 2024 | 10:59 AM

2002 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ 5 ರನ್​ಗಳ ರೋಚಕ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಇಂಗ್ಲೆಂಡ್ ಆಟಗಾರ ಆಂಡ್ರ್ಯೂ ಫಿಂಟ್ಲಾಸ್ ಮೈದಾನದಲ್ಲಿ ಶರ್ಟ್​ ಬಿಚ್ಚಿ ಸಂಭ್ರಮಿಸಿದ್ದರು. ಈ ಸಂಭ್ರಮದ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಶರ್ಟ್ ಬಿಚ್ಚಿ ಸೆಲೆಬ್ರೇಷನ್ ಮಾಡುವ ಮೂಲಕ ಸೌರವ್ ಗಂಗೂಳಿ ಸೇಡು ತೀರಿಸಿಕೊಂಡಿದ್ದರು.

ಅದು 2002, ಲಾರ್ಡ್ಸ್​ ಮೈದಾನದಲ್ಲಿ ನಡೆದ ನ್ಯಾಟ್​​ವೆಸ್ಟ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 325 ರನ್ ಕಲೆಹಾಕಿತು.  326 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 146 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ ಆಗಷ್ಟೇ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದ ಯುವ ತರುಣರಿಬ್ಬರು ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರು.

ಅನುಭವಿ ಇಂಗ್ಲೆಂಡ್ ಬೌಲರ್​ಗಳ ದಾಳಿಯ ಮುಂದೆ ಸೆಟೆದು ನಿಂತರು. ಈ ಮೂಲಕ 7ನೇ ವಿಕೆಟ್​ಗೆ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ 121 ರನ್​ಗಳ ಜೊತೆಯಾಟವಾಡಿದರು. ಇದರ ಬೆನ್ನಲ್ಲೇ 63 ಎಸೆತಗಳಲ್ಲಿ 69 ರನ್ ಬಾರಿಸಿದ ಯುವರಾಜ್ ಸಿಂಗ್ ಔಟಾದರು.

ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಮೊಹಮ್ಮದ್ ಕೈಫ್ 75 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 87 ರನ್ ಬಾರಿಸಿ, 49.3 ಓವರ್​ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಭಾರತ ತಂಡವು 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಗೆಲುವಿನ ಬೆನ್ನಲ್ಲೇ ಲಾರ್ಡ್ಸ್​ ಬಾಲ್ಕನಿಯಲ್ಲಿ ನಿಂತು ಅಂದಿನ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಇದುವೇ ದಾದಾ ಸ್ಟೈಲ್ ಸೆಲೆಬ್ರೇಷನ್ ಆಗಿ ಗುರುತಿಸಿಕೊಂಡಿತು. ಈ ಐತಿಹಾಸಿಕ ಗೆಲುವಿಗೆ ಇಂದು 22 ವರ್ಷಗಳು…ಅಂದರೆ ದಾದಾಗಿರಿಗೆ ಬರೋಬ್ಬರಿ 22 ವರ್ಷಗಳು ತುಂಬಿವೆ.

ಅಂದಹಾಗೆ ಸೌರವ್ ಗಂಗೂಲಿ ಟಿ ಶರ್ಟ್ ಬಿಚ್ಚಿ ಸಂಭ್ರಮಿಸಲು ಮುಖ್ಯ ಕಾರಣ ಆಂಡ್ರ್ಯೂ ಫ್ಲಿಂಟಾಫ್. ಇದಕ್ಕೂ ಮುನ್ನ ಭಾರತದಲ್ಲಿ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಫ್ಲಿಂಟಾಫ್ ಶರ್ಟ್ ಬಿಚ್ಚಿ ವಾಂಖೇಡೆ ಮೈದಾನದಲ್ಲಿ ಸಂಭ್ರಮಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಸೌರವ್ ಗಂಗೂಲಿ ಕ್ರಿಕೆಟ್ ಕಾಶಿಯ ಬಾಲ್ಕನಿಯಲ್ಲಿ ನಿಂತು ದಾದಾಗಿರಿ ತೋರಿಸಿದ್ದರು.

Follow us on