ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಡಿಸೆಂಬರ್ 15 ರಂದು ಏಕದಿನ ನಾಯಕತ್ವ ವಿಚಾರದಲ್ಲಿ ಬುಗಿಲೆದ್ದಿರುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದರು. ಇದರಲ್ಲಿ ಕೊಹ್ಲಿ ನಾಯಕತ್ವ ತೊರೆಯುವ ಬಗ್ಗೆ ತಂಡದ ಘೋಷಣೆಗೆ ಒಂದೂವರೆ ಗಂಟೆಗಳ ಮೊದಲು ನನಗೆ ತಿಳಿಸಲಾಯಿತು ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ವಿರಾಟ್ ಕೊಹ್ಲಿಯ ಈ ಹೇಳಿಕೆ ನಂತರ ಬಿಸಿಸಿಐ ಸೌರವ್ ಗಂಗೂಲಿ ಕೆಂಗಣ್ಣಿಗೆ ಗುರಿಯಾಗಿದೆ. ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ವಜಾಗೊಳಿಸಿದ ಕುರಿತು ಗಂಗೂಲಿ ಅವರು ಟಿ20 ನಾಯಕತ್ವವನ್ನು ಬಿಟ್ಟುಕೊಡದಂತೆ ವಿರಾಟ್‌ಗೆ ಕೇಳಿಕೊಂಡಿದ್ದೆ ಆದರೆ ಅವರು ಒಪ್ಪಲಿಲ್ಲ ಎಂದು ಹೇಳಿಕೊಂಡಿದ್ದರು.
ಕೊಹ್ಲಿ ಪತ್ರಿಕಾಗೋಷ್ಠಿಯ ನಂತರ ಬಿಸಿಸಿಐ ಕಾರ್ಯಶೈಲಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇದರೊಂದಿಗೆ ಗಂಗೂಲಿ ಮೇಲೆ ಅಪಪ್ರಚಾರದ ಆರೋಪವೂ ಕೇಳಿ ಬರುತ್ತಿದೆ. ಏತನ್ಮಧ್ಯೆ, ಟಿ20 ನಾಯಕತ್ವದಿಂದ ಕೆಳಗಿಳಿಯುವ ಕೊಹ್ಲಿ ನಿರ್ಧಾರದ ಬಗ್ಗೆ ಬಿಸಿಸಿಐ ಕೊಹ್ಲಿಯೊಂದಿಗೆ ಮಾತನಾಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲಿ ಒಂಬತ್ತು ಮಂದಿ ಹಾಜರಿದ್ದರು ಎಂತಲೂ ಹೇಳಿದೆ.
ಕೊಹ್ಲಿ ನಿರ್ಧಾರ ಅಚ್ಚರಿ ಮೂಡಿಸಿದೆ
ಈ ಸಭೆಯು ಐಪಿಎಲ್ 2021 ರ ದ್ವಿತೀಯಾರ್ಧದಲ್ಲಿ ಯುಎಇಯಲ್ಲಿ ನಡೆಯಿತು ಎಂದು ಹೇಳಲಾಗುತ್ತದೆ. ಇದರಲ್ಲಿ ಎಲ್ಲಾ ಜನರು ವರ್ಚುವಲ್ ಮೀಟಿಂಗ್ ಮೂಲಕ ಭೇಟಿಯಾದರು. ಆದರೆ, ಟಿ20 ವಿಶ್ವಕಪ್‌ಗೂ ಮುನ್ನ ಕೊಹ್ಲಿ ನಾಯಕತ್ವ ತೊರೆಯುವ ಬಗ್ಗೆ ನಿರ್ಧರಿಸಿರಲಿಲ್ಲ. ಹೀಗಾಗಿ ಟಿ20 ವಿಶ್ವಕಪ್‌ಗೂ ಮುನ್ನ ಕೊಹ್ಲಿ ಈ ಹೆಜ್ಜೆ ಇಟ್ಟಾಗ ಮಂಡಳಿಗೂ ಅಚ್ಚರಿಯಾಗಿತ್ತು. ಕೆಲಸದ ಹೊರೆ ನಿರ್ವಹಣೆಯನ್ನು ಉಲ್ಲೇಖಿಸಿ ಅವರು T20 ನಾಯಕತ್ವದಿಂದ ಬೇರ್ಪಡುವ ಬಗ್ಗೆ ತಿಳಿಸಿದ್ದರು.
ಕೊಹ್ಲಿ ಹೇಳಿಕೆಗೆ ಸಿಟ್ಟಾದ ಗಂಗೂಲಿ
ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಹೇಳಿಕೆಯ ನಂತರ ಗಂಗೂಲಿ ತುಂಬಾ ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಪಿಟಿಐ ಬರೆದಿದೆ. ಆದರೆ ಮಂಡಳಿಯ ಅಧ್ಯಕ್ಷರಾಗಿ, ಅವರು ಸಾಮೂಹಿಕ ನಿರ್ಧಾರವನ್ನು ತೆಗೆದುಕೊಳ್ಳುವ ಪರವಾಗಿರುತ್ತಾರೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ, “ಇದು ಬಿಸಿಸಿಐಗೆ ತುಂಬಾ ಸಂಕೀರ್ಣವಾದ ವಿಷಯವಾಗಿದೆ. ಮಂಡಳಿಯು ಹೇಳಿಕೆ ನೀಡಿದರೆ, ಅದು ಕೊಹ್ಲಿ ಹೇಳಿರುವುದು ಸುಳ್ಳು ಎಂದು ಸಾಬೀತುಪಡಿಸುತ್ತದೆ, ಹೇಳಿಕೆ ನೀಡದಿದ್ದರೆ, ಅಧ್ಯಕ್ಷರ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ. ಮಂಡಳಿಯು ಕೊಹ್ಲಿ ಹೇಳಿಕೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದು ಇಲ್ಲಿ ಸಂವಹನದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.