ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ (Centurion’s SuperSport Park) ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 258 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ (South Africa vs West Indies) ಟಿ20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ಸನ್ ಚಾರ್ಲ್ಸ್ ಅವರ ದಾಖಲೆಯ ಶತಕದ ಆಧಾರದ ಮೇಲೆ 258 ರನ್‌ಗಳ ದೊಡ್ಡ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಈ ಮೂಲಕ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಇದುವರೆಗಿನ ಟಿ20 ಅಂತಾರಾಷ್ಟ್ರೀಯ (T20 Internationals) ಪಂದ್ಯಗಳಲ್ಲಿ ಅತಿ ದೊಡ್ಡ ರನ್ ಚೇಸ್‌ಗೆ ಸಾಕ್ಷಿಯಾಗಿದೆ. ಎರಡೂ ತಂಡಗಳ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 517 ರನ್ ಹರಿದುಬಂದವು. ಟಿ20ಯಲ್ಲಿ ಎರಡು ತಂಡಗಳು ಐನೂರಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ಅಲ್ಲದೆ ಟಿ20ಯಲ್ಲಿ 258 ರನ್ ಗುರಿ ಬೆನ್ನಟ್ಟಿದ ಹರಿಣಗಳ ಪಡೆ ರನ್ ಚೇಸಿಂಗ್ನಲ್ಲಿ ನಾವೇ ಏಕೆ ಬೆಸ್ಟ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದೆ. ವಾಸ್ತವವಾಗಿ ಏಕದಿನದಲ್ಲೂ ಆಫ್ರಿಕಾ ತಂಡ ಬೃಹತ್ ಗುರಿ ಬೆನ್ನಟ್ಟಿದ ದಾಖಲೆ ಬರೆದಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಉಭಯ ತಂಡಗಳಿಂದ ಒಟ್ಟಾರೆ 517 ರನ್ಗಳು ಹರಿದುಬಂದವು. ವಾಸ್ತವವಾಗಿ ಈ ಹಿಂದೆ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಹರಿದುಬಂದಿರಲಿಲ್ಲ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಟ್ಟಾರೆ ಪಂದ್ಯದಲ್ಲಿ 517 ರನ್ ಗಳಿಸಿದ್ದವು. ಅಷ್ಟೇ ಅಲ್ಲ, ಟಿ20 ಪಂದ್ಯವೊಂದರಲ್ಲಿ 35 ಸಿಕ್ಸರ್ ಸಿಡಿದ ದಾಖಲೆಯೂ ಈ ಪಂದ್ಯದಲ್ಲಿ ನಿರ್ಮಾಣವಾಯಿತು. ಅಲ್ಲದೆ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟಿನ್ ಡಿ ಕಾಕ್ ಮತ್ತು ರಿಜಾ ಹೆನ್ರಿಕ್ಸ್ ಆರು ಓವರ್‌ಗಳ ಪವರ್ ಪ್ಲೇನಲ್ಲಿ ಬರೋಬ್ಬರಿ 102 ರನ್ ಗಳಿಸಿ ನೂತನ ದಾಖಲೆ ಕೂಡ ಬರೆದರು. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ ಪವರ್ ಪ್ಲೇನಲ್ಲಿ 98 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ವಿಂಡೀಸ್ ಪರ ದಾಖಲೆಯ ಶತಕ ಸಿಡಿಸಿದ ಜಾನ್ಸನ್ ಚಾರ್ಲ್ಸ್, 46 ಎಸೆತಗಳಲ್ಲಿ 118 ರನ್ ಬಾರಿಸಿ, ಕ್ರಿಸ್ ಗೇಲ್ ಅವರ 47 ಎಸೆತಗಳ ಶತಕದ ಇನ್ನಿಂಗ್ಸ್ ದಾಖಲೆಯನ್ನು ಮುರಿದರು.
IPL 2023: ಈ ಐದು ಆಟಗಾರರಿಗೆ ಇದು ಕೊನೆಯ ಐಪಿಎಲ್..?
ಈಗ ಟಿ20 ಕ್ರಿಕೆಟ್ನಲ್ಲಿ 259 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ತಂಡ ಏಕದಿನದಲ್ಲೂ 438 ರನ್‌ಗಳ ಗುರಿಯನ್ನ ಬೆನ್ನಟ್ಟಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ವಾಸ್ತವವಾಗಿ ಮಾರ್ಚ್ 12, 2006 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡದ ಪರ ರಿಕಿ ಪಾಂಟಿಂಗ್ 105 ಎಸೆತಗಳಲ್ಲಿ 164 ರನ್‌ಗಳ ಇನ್ನಿಂಗ್ಸ್ ಆಡಿದರೆ, ಆಡಮ್ ಗಿಲ್‌ಕ್ರಿಸ್ಟ್ 44 ಎಸೆತಗಳಲ್ಲಿ 55 ರನ್ ಮತ್ತು ಸೈಮನ್ ಕ್ಯಾಟಿಚ್ 90 ಎಸೆತಗಳಲ್ಲಿ 79 ಇನ್ನಿಂಗ್ಸ್ಗಳ ಆಧಾರದ ಮೇಲೆ ಒಟ್ಟು 434 ರನ್‌ಗಳ ಬೃಹತ್ ಸ್ಕೋರ್ ಸೆಟ್ ಮಾಡಿತು. ಐದು ಪಂದ್ಯಗಳ ಏಕದಿನ ಸರಣಿ ಈಗಾಗಲೇ 2-2ರಿಂದ ಸಮಬಲಗೊಂಡಿದ್ದರಿಂದ ತವರಿನಲ್ಲಿ ಸರಣಿ ಗೆಲ್ಲಬೇಕೆಂದರೆ ಆಫ್ರಿಕಾ ತಂಡ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಿತ್ತು.
ಈ ಗುರಿ ಬೆನ್ನಟ್ಟಿದ್ದ ಆಫ್ರಿಕಾದ ಆರಂಭ ಉತ್ತಮವಾಗಿರಲಿಲ್ಲ. ತಂಡ ಎರಡನೇ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡಿತ್ತು. ಆ ನಂತರ ಜೊತೆಯಾದ ಹರ್ಷಲ್ ಗಿಬ್ಸ್ ಮತ್ತು ಸ್ಮಿತ್ ಅದ್ಭುತ ರನ್ ಚೇಸ್ ಪ್ರಾರಂಭಿಸಿದರು. ಇದರಲ್ಲಿ ಗಿಬ್ಸ್ 111 ಎಸೆತಗಳಲ್ಲಿ 175 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರೆ, ನಾಯಕ ಗ್ರೇಮ್ ಸ್ಮಿತ್ 55 ಎಸೆತಗಳಲ್ಲಿ 90 ರನ್ ಚಚ್ಚಿದರು. ಆ ಬಳಿಕ ಬಂದ ಮಾರ್ಕ್ ಬೌಚರ್ ಅರ್ಧಶತಕ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ಇನ್ನು 1 ಎಸೆತ ಬಾಕಿ ಇರುವಂತೆಯೇ 9 ವಿಕೆಟ್ ಕಳೆದುಕೊಂಡು 438 ರನ್ ಬಾರಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Mon, 27 March 23