ಬಿಸಿಸಿಐ ಮುಂದೆ ತಲೆಬಾಗಿದ ಐಸಿಸಿ! ಇಂದೋರ್ ಪಿಚ್ ಈಗ ‘ಕಳಪೆ’ ಅಲ್ಲ
BCCI: ಯಾವುದೇ ಪಿಚ್ ಸತತ ಐದು ವರ್ಷಗಳ ಅವಧಿಯಲ್ಲಿ 5 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಆ ಕ್ರೀಡಾಂಗಣವನ್ನು 12 ತಿಂಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗುತ್ತದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ (Border-Gavaskar Trophy) 4 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ (Team India) 2-1 ಅಂತರದಿಂದ ಗೆದ್ದು ಬೀಗಿದ್ದು ಹಳೆಯ ವಿಚಾರ. ಆದರೆ ಈ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದ ಅದೊಂದು ವಿವಾದ ಮಾತ್ರ ಟೆಸ್ಟ್ ಮುಗಿದಾಗಿನಿಂದಲೂ ಚರ್ಚೆಯಲ್ಲೇ ಇತ್ತು. ವಾಸ್ತವವಾಗಿ ಇಂದೋರ್‌ನ (Indore Pitch) ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತ್ತು. ಅಲ್ಲದೆ 5 ದಿನಗಳ ಟೆಸ್ಟ್ ಪಂದ್ಯ 3 ದಿನವೂ ಸಂಪೂರ್ಣವಾಗಿ ನಡೆಯಲಿಲ್ಲ. ಹೀಗಾಗಿ ಇಂದೋರ್ ಪಿಚ್ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಆ ಬಳಿಕ ಪಂದ್ಯದ ರೆಫರಿ ಕೂಡ ಈ ಪಿಚ್ ಕಳಪೆ ಎಂದು ಐಸಿಸಿ (ICC) ಮುಂದೆ ವರದಿ ನೀಡಿದ್ದರು. ಆದರೆ ರೆಫರಿ ನೀಡಿದ ವರದಿಯಿಂದ ಅಸಮಾಧಾನಗೊಂಡಿದ್ದ ಬಿಸಿಸಿಐ (BCCI), ಈ ವರದಿ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಕ್ರಿಕೆಟ್ ಬಿಗ್ಬಾಸ್ಗಳ ಮುಂದೆ ಮಂಡಿಯೂರಿರುವ ಐಸಿಸಿ ಪಿಚ್ನ ರೇಟಿಂಗ್ ಬದಲಿಸಿದೆ.
ಇಂದೋರ್ ಪಿಚ್ ನಿಷೇಧಕ್ಕೊಳಗಾಗುವ ಆತಂಕ
ವಾಸ್ತವವಾಗಿ, ಇಂದೋರ್ ಟೆಸ್ಟ್ ಕೇವಲ ಮೂರು ದಿನಗಳಲ್ಲಿ ಮುಗಿದ ಬಳಿಕ ಹೋಲ್ಕರ್ ಸ್ಟೇಡಿಯಂ ಪಿಚ್‌ಗೆ ಮ್ಯಾಚ್ ರೆಫರಿ ಕಳಪೆ ರೇಟಿಂಗ್ ನೀಡಿದ್ದರು. ಇದರಿಂದ ಇಂದೋರ್ ಪಿಚ್ ನಿಷೇಧಕ್ಕೊಳಗಾಗುವ ಆತಂಕ ಬಿಸಿಸಿಐಗೆ ಎದುರಾಗಿತ್ತು. ಐಸಿಸಿ ನಿಯಮಗಳ ಪ್ರಕಾರ, ಯಾವುದೇ ಪಿಚ್ ಸತತ ಐದು ವರ್ಷಗಳ ಅವಧಿಯಲ್ಲಿ 5 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಆ ಕ್ರೀಡಾಂಗಣವನ್ನು 12 ತಿಂಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗುತ್ತದೆ. ಈ ನಿಯಮದ ಪ್ರಕಾರ ಹೋಳ್ಕರ್ ಸ್ಟೇಡಿಯಂಗೆ 3 ಡಿಮೆರಿಟ್ ಅಂಕಗಳನ್ನು ನೀಡಲಾಗಿದ್ದರಿಂದ ಮುಂದಿನ 5 ವರ್ಷಗಳಲ್ಲಿ ಈ ಮೈದಾನ ಮತ್ತೆ 2 ಡಿಮೆರಿಟ್ ಅಂಕಗಳನ್ನು ಪಡೆದಿದ್ದರೆ, ಈ ಪಿಚ್ನಲ್ಲಿ 1 ವರ್ಷಗಳ ಕಾಲ ಕ್ರಿಕೆಟ್ ನಿಷೇಧಿಸಲಾಗುತ್ತಿತ್ತು.
ಹೀಗಾಗಿ ಇಂದೋರ್ ಪಿಚ್‌ಗೆ ಕಳಪೆ ರೇಟಿಂಗ್ ನೀಡಿದ್ದರ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಿತ್ತು. ಇಂದೋರ್ ಪಿಚ್ ಅಷ್ಟೊಂದು ಕಳಪೆಯಾಗಿಲ್ಲ ಎಂದು ಬಿಸಿಸಿಐ ವಾದಿಸಿತ್ತು. ಇದೀಗ ಬಿಸಿಸಿಐ ವಾದಕ್ಕೆ ಶರಣಾಗಿರುವ ಐಸಿಸಿ, ಈ ಮುಂಚೆ ನೀಡಿದ ಕಳಪೆ ರೇಟಿಂಗ್ ಅನ್ನು ಬದಲಿಸಿ, ‘ಸರಾಸರಿಗಿಂತ ಕಡಿಮೆ’ ರೇಟಿಂಗ್ ನೀಡಿದೆ. ಅಂದರೆ ಈಗ ಇಂದೋರ್‌ನ ಪಿಚ್ 3 ಡಿಮೆರಿಟ್ ಪಾಯಿಂಟ್‌ಗಳ ಬದಲಿಗೆ ಕೇವಲ ಒಂದು ಡಿಮೆರಿಟ್ ಪಾಯಿಂಟ್ ಪಡೆದುಕೊಂಡಿದೆ.
ಬಿಸಿಸಿಐ ತಾರತಮ್ಯ; 6 ತಿಂಗಳಿಂದ ಕ್ರಿಕೆಟ್ ಆಡದ ಬುಮ್ರಾಗೆ A+ ಗ್ರೇಡ್, 7 ಕೋಟಿ ರೂ. ಸಂಬಳ!
ಮೂರೇ ದಿನಕ್ಕೆ ಮುಗಿದ ಇಂದೋರ್ ಟೆಸ್ಟ್
ಸುಮಾರು ಐದು ವರ್ಷಗಳ ನಂತರ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದಿದ್ದರು. ಪಂದ್ಯದಲ್ಲಿ ಒಟ್ಟು 7 ಸೆಷನ್‌ಗಳನ್ನು ಮಾತ್ರ ಆಡಲಾಗಿದ್ದು, ಇದರಲ್ಲಿ 31 ವಿಕೆಟ್‌ಗಳು ಉರುಳಿದ್ದವು. ಈ ಪೈಕಿ ಮೊದಲ 30 ವಿಕೆಟ್‌ಗಳು ಕೇವಲ ಎರಡು ದಿನಗಳಲ್ಲಿ ಪತನಗೊಂಡಿದ್ದವು. ಈ 31 ವಿಕೆಟ್‌ಗಳ ಪೈಕಿ 26 ವಿಕೆಟ್‌ಗಳನ್ನು ಉಭಯ ತಂಡಗಳ ಸ್ಪಿನ್ನರ್‌ಗಳು ಕಬಳಿಸಿದರೆ, ಕೇವಲ 4 ವಿಕೆಟ್‌ಗಳನ್ನು ವೇಗಿಗಳು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನುಳಿದಂತೆ ಒಂದು ವಿಕೆಟ್ ರನೌಟ್ ಮುಖಾಂತರ ಬಿದ್ದಿತ್ತು. ಹೀಗಾಗಿ ಈ ಪಿಚ್‌ಗೆ ರೆಫರಿ ಕಳಪೆ ರೇಟಿಂಗ್ ನೀಡಿದ್ದರು. ರೆಫರಿ ನಿರ್ಧರಕ್ಕೆ ಅಸಮಧಾನ ಹೊರಹಾಕಿದ್ದ ಮಾಜಿ ಟೀಂ ಇಂಡಿಯಾ ಆಟಗಾರರು, ರೆಫರಿ ತೀರ್ಪನ್ನು ಹಾಸ್ಯಾಸ್ಪದ ಎಂದಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ಭಾರತ
ಅಂದಹಾಗೆ, ಇಂದೋರ್ ಟೆಸ್ಟ್‌ನಲ್ಲಿನ ಹೀನಾಯವಾಗಿ ಸೋತಿದ್ದ ಭಾರತ, ಆ ಬಳಿಕ ಅಹಮದಾಬಾದ್ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರೊಂದಿಗೆ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿಯನ್ನೂ ವಶಪಡಿಸಿಕೊಂಡಿತ್ತು. ಇತ್ತ ನ್ಯೂಜಿಲೆಂಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡ ಸೋತಿದ್ದರಿಂದ, ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿತು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ನಲ್ಲಿ ಭಾರತ, ಆಸ್ಟ್ರೇಲಿಯಾದೊಂದಿಗೆ ಸ್ಪರ್ಧಿಸಲಿದೆ. ಉಭಯ ತಂಡಗಳ ನಡುವಿನ ಟೆಸ್ಟ್ ವಿಶ್ವಕಪ್ ಜೂನ್ 7 ರಂದು ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ತಂಡ ಚೊಚ್ಚಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Mon, 27 March 23
