ಬಿಸಿಸಿಐ ತಾರತಮ್ಯ; 6 ತಿಂಗಳಿಂದ ಕ್ರಿಕೆಟ್ ಆಡದ ಬುಮ್ರಾಗೆ A+ ಗ್ರೇಡ್, 7 ಕೋಟಿ ರೂ. ಸಂಬಳ!
BCCI Central Contracts: ವಾಸ್ತವವಾಗಿ ಬುಮ್ರಾರಂತೆ ಹಾರ್ದಿಕ್ ಪಾಂಡ್ಯ ಕೂಡ ಕಳೆದ ಬಾರಿಯ ಬಿಸಿಸಿಐ ವಾರ್ಷಿಕ ಒಪ್ಪಂದ ನಡೆಯುವ ಸಮಯದಲ್ಲಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಆಗ ಪಾಂಡ್ಯರನ್ನು A ಗ್ರೇಡ್ನಿಂದ ತೆಗೆದುಹಾಕಿ C ಗ್ರೇಡ್ ಆಟಗಾರನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಭಾರತೀಯ ಕ್ರಿಕೆಟ್ ಮಂಡಳಿಯು ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ (BCCI Central Contracts) ಪಟ್ಟಿಯನ್ನು ಪ್ರಕಟಿಸಿದೆ. ಪ್ರತಿ ಬಾರಿಯಂತೆ, ಬಿಸಿಸಿಐ 4 ವಿಭಾಗಗಳಲ್ಲಿ 26 ಆಟಗಾರರನ್ನು ಕೇಂದ್ರ ಒಪ್ಪಂದಕ್ಕೆ ಆಯ್ಕೆ ಮಾಡಿಕೊಂಡಿದೆ. ನಾಲ್ಕು ವಿಭಾಗಗಳಲ್ಲೂ ಕೆಲವು ಅಚ್ಚರಿಯ ಹೆಸರುಗಳು ಕಾಣಿಸಿಕೊಂಡಿದ್ದರೆ, ಇನ್ನು ಕೆಲವು ಆಟಗಾರರ ಗ್ರೇಡ್ ಬದಲಾಗಿರುವುದು ಟೀಂ ಇಂಡಿಯಾ (Team India) ಅಭಿಮಾನಿಗಳು ಅಸಮಾಧಾನ ಹೊರಹಾಕುವಂತೆ ಮಾಡಿದೆ. ನೂತನ ಕೇಂದ್ರ ಗುತ್ತಿಗೆಯಲ್ಲಿ ಬಿಸಿಸಿಐ ರವೀಂದ್ರ ಜಡೇಜಾಗೆ (Ravindra Jadeja) ಬಡ್ತಿ ನೀಡಿದ್ದು, ಜಡೇಜಾ ಇದೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಜೊತೆ A+ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇದಕ್ಕೆ ಅಭಿಮಾನಿಗಳ ಸಮ್ಮತಿಯೂ ಸಿಕ್ಕಿದೆ. ಏಕೆಂದರೆ ಇಂಜುರಿಯಿಂದ ಚೇತರಿಸಿಕೊಂಡು ಬಂದ ಜಡೇಜಾ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಇದೇ ಗ್ರೇಡ್‌ನಲ್ಲಿ ಸ್ಥಾನಪಡೆದಿರುವ ಬುಮ್ರಾ ಬಗ್ಗೆ ಮಾತ್ರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
4 ಶ್ರೇಣಿಗಳಾಗಿ ಆಟಗಾರರ ವಿಂಗಡಣೆ
ವಾಸ್ತವವಾಗಿ ಬಿಸಿಸಿಐ, A+, A, B ಮತ್ತು C ಎಂಬ 4 ಶ್ರೇಣಿಗಳಾಗಿ ಆಟಗಾರರನ್ನು ವಿಂಗಡಿಸಿದೆ. ಇದರಲ್ಲಿ ಎ+ ಗ್ರೇಡ್‌ನಲ್ಲಿ ಸ್ಥಾನ ಪಡೆದಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ವರ್ಷಕ್ಕೆ 7 ಕೋಟಿ ರೂ. ಸಂಭಾವನೆ ಪಡೆಯಲ್ಲಿದ್ದಾರೆ. ಇನ್ನು A ಗ್ರೇಡ್ ಪಡೆದಿರುವ ಆಟಗಾರರು 5 ಕೋಟಿ ರೂ. B ಗ್ರೇಡ್ ಆಟಗಾರರಿಗೆ 3 ಕೋಟಿ ರೂ. C ಗ್ರೇಡ್ ಆಟಗಾರರಿಗೆ 1 ಕೋಟಿ ರೂ. ಸಂಭಾವನೆ ಸಿಗಲಿದೆ.
BCCI Central Contracts: ವಾರ್ಷಿಕ ಒಪ್ಪಂದದಿಂದ ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಬಿಸಿಸಿಐ..!
ಬಿಸಿಸಿಐ ಹೊಸದಾಗಿ ಪ್ರಕಟಿಸಿರುವ ಕೇಂದ್ರ ಗುತ್ತಿಗೆಯಲ್ಲಿ ಕೆಲವು ಪ್ರಮುಖ ಆಟಗಾರರ ಗ್ರೇಡ್ ಬದಲಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅದರಲ್ಲೂ 6 ತಿಂಗಳಿಂದ ಕ್ರಿಕೆಟ್ನಿಂದ ದೂರವಿರುವ ಬುಮ್ರಾಗೆ A+ ಗ್ರೇಡ್ ನೀಡಿ, ವರ್ಷಕ್ಕೆ 7 ಕೋಟಿ ರೂ. ಸಂಬಳ ನೀಡುತ್ತಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಬಿಸಿಸಿಐ ಗುರಿಯಾಗುವಂತೆ ಮಾಡಿದೆ. ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಬಿಸಿಸಿಐ ಈಗ ಮಾಡಿಕೊಂಡಿರುವ ಒಪ್ಪಂದವು ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023 ರವರೆಗೆ ಮಾತ್ರ ಇರಲಿದೆ.
ಹೀಗಾಗಿ ನಾವು ಬುಮ್ರಾ ಬಗ್ಗೆ ಮಾತನಾಡುವುದಾದರೆ, ಅವರು 25 ಸೆಪ್ಟೆಂಬರ್ 2022 ರಿಂದ ಭಾರತದ ಪರ ಯಾವುದೇ ಪಂದ್ಯವನ್ನು ಆಡಿಲ್ಲ. ಅಲ್ಲದೆ ಮುಂದೆ ಯಾವಾಗ ತಂಡಕ್ಕೆ ಎಂಟ್ರಿಕೊಡುತ್ತಾರೆ ಎಂಬುದು ಅಧಿಕೃತವಾಗಿಲ್ಲ. ಹೀಗಿರುವಾಗ ಯಾವ ಆಧಾರದಲ್ಲಿ ಮಂಡಳಿ ಅವರನ್ನು ಈ ಸೀಸನ್‌ನಲ್ಲಿಯೂ A+ ಗ್ರೇಡ್‌ನಲ್ಲಿ ಇರಿಸಿತು ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಬುಮ್ರಾಗೊಂದು ನ್ಯಾಯ, ಪಾಂಡ್ಯಗೊಂದು ನ್ಯಾಯ
ವಾಸ್ತವವಾಗಿ ಬುಮ್ರಾರಂತೆ ಹಾರ್ದಿಕ್ ಪಾಂಡ್ಯ ಕೂಡ ಕಳೆದ ಬಾರಿಯ ಬಿಸಿಸಿಐ ವಾರ್ಷಿಕ ಒಪ್ಪಂದ ನಡೆಯುವ ಸಮಯದಲ್ಲಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಆಗ ಪಾಂಡ್ಯರನ್ನು A ಗ್ರೇಡ್ನಿಂದ ತೆಗೆದುಹಾಕಿ C ಗ್ರೇಡ್ ಆಟಗಾರನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಗ್ರೇಡ್ ಡ್ರಾಪ್ ನಂತರ ಜುಲೈನಲ್ಲಿ ತಂಡ ಸೇರಿಕೊಂಡ ಪಾಂಡ್ಯ ಅಂದಿನಿಂದ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಸದ್ಯ ತನ್ನ ಆಲ್ರೌಂಡರ್ ಆಟದ ಪ್ರಯೋಜನ ಪಡೆದಿರುವ ಪಾಂಡ್ಯ C ಗ್ರೇಡ್ನಿಂದ ಬಡ್ತಿ ಪಡೆದಿದ್ದು, A ಗ್ರೇಡ್ ಆಟಗಾರನಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಪಾಂಡ್ಯಗೆ ವಾರ್ಷಿಕವಾಗಿ 5 ಕೋಟಿ ರೂ. ಸಂಭಾವನೆ ಸಿಗಲಿದೆ.
ಬುಮ್ರಾ ವಿಶ್ವಕಪ್ ಆಡುವುದು ಅನುಮಾನ
ಸದ್ಯದ ಪರಿಸ್ಥಿತಿಯಲ್ಲಿ ಬುಮ್ರಾ ವಿಶ್ವಕಪ್ ಆಡವುದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ತಂಡದಲ್ಲೇ ಇರದ ಬುಮ್ರಾಗೆ A+ ನೀಡಿರುವುದು ಅಭಿಮಾನಿಗಳು ಅಸಮಾಧನಗೊಳ್ಳುವಂತೆ ಮಾಡಿದೆ. ಅಲ್ಲದೆ ಪಾಂಡ್ಯ ತಂಡದಿಂದ ಹೊರಗಿದ್ದಾಗ ಅವರ ಗ್ರೇಡ್ ಬದಲಿಸಿದ್ದ ಬಿಸಿಸಿಐ, ಇದೀಗ ಬುಮ್ರಾ ವಿಚಾರದಲ್ಲಿ ಮಾತ್ರ ತಾರತಮ್ಯ ಮಾಡುತ್ತಿದೆ ಎಂಬುದು ಅಭಿಮಾನಿಗಳ ವಾದವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Mon, 27 March 23
