ಹ್ಯಾಟ್ರಿಕ್ ಗೋಲ್ಡನ್ ಡಕ್ ಮೂಲಕ ಸೂರ್ಯಕುಮಾರ್ ಯಾದವ್ ದಾಖಲೆ ಬರೆದ ಬೆನ್ನಲ್ಲೇ, ಪಾಕಿಸ್ತಾನದ ಬ್ಯಾಟರ್ ಅಬ್ದುಲ್ಲಾ ಶಫೀಕ್ ಸತತ ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿ ಅನಗತ್ಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
2020 ರಲ್ಲಿ ಪಾಕ್ ತಂಡದಲ್ಲಿ ಸ್ಥಾನ ಪಡೆದಿದ್ದ ಅಬ್ದುಲ್ಲಾ ಶಫೀಕ್ ಚೊಚ್ಚಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 41 ರನ್ ಬಾರಿಸಿ ಮಿಂಚಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ಇದಾದ ಬಳಿಕ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಡಕ್ ಔಟ್ ಆಗಿದ್ದರು. ಆ ಬಳಿಕ ಶಫೀಕ್ ರನ್ನು ತಂಡದಿಂದ ಕೈ ಬಿಡಲಾಗಿತ್ತು.
ಅನಂತರ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಶಾರ್ಜಾದಲ್ಲಿ ನಡೆದ ಅಫ್ಘಾನ್ ವಿರುದ್ಧದ 2 ಪಂದ್ಯಗಳಲ್ಲೂ ಅಬ್ದುಲ್ಲಾ ಶಫೀಕ್ ಸೊನ್ನೆ ಸುತ್ತಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ 4 ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎಂಬ ದಾಖಲೆ ಅಬ್ದುಲ್ಲಾ ಶಫೀಕ್ ಪಾಲಾಗಿದೆ.
ಇದಾಗ್ಯೂ ಅಬ್ದುಲ್ಲಾ ಶಫೀಕ್ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿರುವ ಅನಗತ್ಯ ದಾಖಲೆಯಿಂದ ಪಾರಾಗಿದ್ದಾರೆ ಎನ್ನಬಹುದು. ಏಕೆಂದರೆ ಶಫೀಕ್ 4 ಬಾರಿ ಶೂನ್ಯಕ್ಕೆ ಔಟಾಗಿದ್ದರೂ ಗೋಲ್ಡನ್ ಡಕ್ ಆಗಿಲ್ಲ. ಅವರು ಅಫ್ಘಾನಿಸ್ತಾನ್ ವಿರುದ್ಧ ಮೊದಲ ಪಂದ್ಯದಲ್ಲಿ 2 ಎಸೆತಗಳನ್ನು ಎದುರಿಸಿದ್ದರು.
ಅಂದರೆ ಬ್ಯಾಟರ್ರೊಬ್ಬರು ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಅದನ್ನು ಗೋಲ್ಡನ್ ಡಕ್ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಕ್ರಿಕೆಟ್ ಇತಿಹಾಸದಲ್ಲಿ ಹ್ಯಾಟ್ರಿಕ್ ಗೋಲ್ಡನ್ ಡಕ್ಗೆ ಔಟಾದ ಹೀನಾಯ ದಾಖಲೆಯೊಂದು ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿದೆ.
ಇತ್ತ ಟಿ20 ಕ್ರಿಕೆಟ್ನಲ್ಲಿ ಸತತ 4 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಅಬ್ದುಲ್ಲಾ ಶಫೀಕ್ ಇದೀಗ ಅನಗತ್ಯ ದಾಖಲೆಗಳ ಪುಟದಲ್ಲಿ ಹೊಸ ಅಧ್ಯಾಯ ಬರೆದಿರುವುದು ವಿಶೇಷ.
Published On - 3:58 pm, Mon, 27 March 23