ತಂಡದ ಸೋಲನ್ನು ನೋಡಲಾಗದೆ ಬಾತ್ ರೂಂನಲ್ಲಿ ಕುಳಿತಿದ್ದ ಆಫ್ರಿಕಾ ನಾಯಕ ಬವುಮಾ

PAK vs SA: ದಕ್ಷಿಣ ಆಫ್ರಿಕಾ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಫೈನಲ್‌ಗೆ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಫೈನಲ್‌ಗೆ ಪ್ರವೇಶಿಸಿದೆ. ಆದರೆ ಒಂದು ಹಂತದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ತಂಡದ ಪರಿಸ್ಥಿತಿಯನ್ನು ನೋಡಲಾಗದೆ ತಂಡದ ನಾಯಕ ತೆಂಬಾ ಬವುಮಾ ಬಾತ್ ರೂಂನಲ್ಲಿ ಹೋಗಿ ಕುಳಿತಿದ್ದರು ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ತಂಡದ ಸೋಲನ್ನು ನೋಡಲಾಗದೆ ಬಾತ್ ರೂಂನಲ್ಲಿ ಕುಳಿತಿದ್ದ ಆಫ್ರಿಕಾ ನಾಯಕ ಬವುಮಾ
ತೆಂಬಾ ಬವುಮಾ

Updated on: Dec 29, 2024 | 9:42 PM

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2023-25ರ ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ದಕ್ಷಿಣ ಆಫ್ರಿಕಾ ಪಾತ್ರವಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನವನ್ನು 2 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಂಚುರಿಯನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗೆಲುವಿಗೆ 148 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಸೋಲಿನತ್ತ ಮುಖಮಾಡಿತ್ತು. ಆದರೆ, ಹತ್ತನೇ ಕ್ರಮಾಂಕದಲ್ಲಿ ಬಂದ ಕಗಿಸೊ ರಬಾಡ (ಔಟಾಗದೆ 31) ಪಾಕಿಸ್ತಾನದತ್ತ ವಾಲಿದ್ದ ವಿಜಯಲಕ್ಷ್ಮೀಯನ್ನು ತಮ್ಮತ್ತ ತಿರುಗಿಸಿದರು. ರಬಾಡಗೆ ಸಾಥ್ ನೀಡಿದ ಮಾರ್ಕೋ ಯಾನ್ಸನ್ ಕೂಡ 16 ರನ್​ಗಳ ಕಾಣಿಕೆ ನೀಡಿದರು. ಆದರೆ ಒಂದು ಹಂತದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ತಂಡದ ಪರಿಸ್ಥಿತಿಯನ್ನು ನೋಡಲಾಗದೆ ತಂಡದ ನಾಯಕ ತೆಂಬಾ ಬವುಮಾ ಬಾತ್ ರೂಂನಲ್ಲಿ ಹೋಗಿ ಕುಳಿತಿದ್ದರು ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ತುಂಬಾ ಭಾವನಾತ್ಮಕ ಕ್ಷಣವಾಗಿದೆ

ಸ್ವತಃ ಈ ವಿಚಾರವನ್ನು ಬವುಮಾ ಅವರೇ ಹೇಳಿಕೊಂಡಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ಅವರು, ಅನೇಕ ಜನರು ತಮ್ಮ ತಂಡವನ್ನು ಡಬ್ಲ್ಯುಟಿಸಿ ಫೈನಲ್‌ಗೆ ಸ್ಪರ್ಧಿ ಎಂದು ಪರಿಗಣಿಸಿರಲಿಲ್ಲ. ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ, ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ. ನಮಗೆ ತುಂಬಾ ಸಂತೋಷವಾಗಿದೆ. ಪಂದ್ಯದಲ್ಲಿ ಸಾಕಷ್ಟು ಏರಿಳಿತಗಳಿದ್ದವು. ಆದರೆ ಕೊನೆಯಲ್ಲಿ ಗೆಲುವು ಸಾಧಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.

ಇದೇ ವೇಳೆ ಅಚ್ಚರಿಯ ಸಂಗತಿಯನ್ನು ಹೊರಹಾಕಿದ ಬವುಮಾ, ತಂಡ ಸತತ ವಿಕೆಟ್​ಗಳನ್ನು ಕಳೆದುಕೊಂಡಾಗ ಉದ್ವೇಗಕ್ಕೊಳಗಾಗಿದ್ದ ನಾನು ಬಾತ್ ರೂಂನಲ್ಲಿ ಹೋಗಿ ಕುಳಿತಿದ್ದೆ. ಆದರೆ ಗೆಲುವಿಗೆ 15 ರನ್‌ಗಳ ಅಗತ್ಯವಿದ್ದಾಗ ಕೊಂಚ ನಿರಾಳನಾದ ನಾನು ಅಲ್ಲಿಂದ ಹೊರಬಂದೆ ಎಂದು ಬವುಮಾ ಹೇಳಿಕೊಂಡಿದ್ದಾರೆ.

ಭಾರತ- ಆಸೀಸ್ ನಡುವೆ ಪೈಪೋಟಿ

ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದೆ. ಇದೀಗ ಡಬ್ಲ್ಯುಟಿಸಿಯ ಫೈನಲ್ ಮುಂದಿನ ವರ್ಷ ಜೂನ್ 11 ರಿಂದ 15 ರವರೆಗೆ ಲಂಡನ್‌ನಲ್ಲಿ ನಡೆಯಲಿದೆ. ಪ್ರಸ್ತುತ 66.67 ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಇದುವರೆಗೆ 11 ಟೆಸ್ಟ್ ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿದ್ದು, ಮೂರರಲ್ಲಿ ಸೋತಿದೆ ಮತ್ತು ಒಂದು ಡ್ರಾ ಆಗಿದೆ. ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ (58.89) ಎರಡನೇ ಸ್ಥಾನದಲ್ಲಿದ್ದು, ಭಾರತ (55.88) ಮೂರನೇ ಸ್ಥಾನದಲ್ಲಿದೆ. ಫೈನಲ್‌ನಲ್ಲಿ ಎರಡನೇ ಸ್ಥಾನಕ್ಕಾಗಿ ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಹೋರಾಟ ನಡೆಯುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:36 pm, Sun, 29 December 24