IND vs AUS: ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾಗೆ 340 ರನ್ಗಳ ಗುರಿ
Australia vs India, 4th Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್ಗಳ ಗೆಲುವು ದಾಖಲಿಸಿತು. ಇನ್ನು ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಇದೀಗ ಉಭಯ ತಂಡಗಳು ನಾಲ್ಕನೇ ಪಂದ್ಯದಲ್ಲಿ ಗೆಲ್ಲಲು ಶತಪ್ರಯತ್ನ ಮುಂದುವರೆಸಿದ್ದಾರೆ.
ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 234 ರನ್ಗಳಿಗೆ ಆಲೌಟ್ ಆಗಿದೆ. ಇದಾಗ್ಯೂ ಮೊದಲ ಇನಿಂಗ್ಸ್ನಲ್ಲಿನ 105 ರನ್ಗಳ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾ ಕೊನೆಯ ದಿನದಾಟದಲ್ಲಿ 340 ರನ್ಗಳನ್ನು ಕಲೆಹಾಕಿದರೆ ಮಾತ್ರ ಈ ಪಂದ್ಯದಲ್ಲಿ ಜಯ ಸಾಧಿಸಬಹುದು.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (140) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 474 ರನ್ಗಳಿಸಿ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಪರ ನಿತೀಶ್ ಕುಮಾರ್ ರೆಡ್ಡಿ (114) ಶತಕ ಸಿಡಿಸಿದ್ದರು. ಈ ಶತಕದ ಸಹಾಯದಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 369 ರನ್ ಪೇರಿಸಿತು.
ಮೊದಲ ಇನಿಂಗ್ಸ್ನಲ್ಲಿ 105 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಸ್ಯಾಮ್ ಕೊನ್ಸ್ಟಾಸ್ 8 ರನ್ಗಳಿಸಿ ಔಟಾದರೆ, ಉಸ್ಮಾನ್ ಖ್ವಾಜಾ 21 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ನಿಂತ ಮಾರ್ನಸ್ ಲಾಬುಶೇನ್ ಎಚ್ಚರಿಕೆಯ ಆಟದೊಂದಿಗೆ ರನ್ ಪೇರಿಸುತ್ತಾ ಸಾಗಿದರು. ಆದರೆ ಮತ್ತೊಂದೆಡೆ ಬಿಗು ದಾಳಿ ಸಂಘಟಿಸಿದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಟ್ರಾವಿಸ್ ಹೆಡ್ (1), ಮಿಚೆಲ್ ಮಾರ್ಷ್ (0) ವಿಕೆಟ್ ಕಬಳಿಸಿ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.
ಇನ್ನು ಸ್ಟೀವ್ ಸ್ಮಿತ್ (13) ಹಾಗೂ 70 ರನ್ಗಳಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಲಾಬುಶೇನ್ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಮಿಚೆಲ್ ಸ್ಟಾರ್ಕ್ (5) ರನೌಟ್ ಆಗಿ ನಿರ್ಗಮಿಸಿದರು.
ಈ ಹಂತದಲ್ಲಿ ಜವಾಬ್ದಾರಿಯು ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಪ್ಯಾಟ್ ಕಮಿನ್ಸ್ 41 ರನ್ಗಳ ಕೊಡುಗೆ ನೀಡಿದರು. ಆದರೆ ಅರ್ಧಶತಕದ ಹೊಸ್ತಿಲಲ್ಲಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಆದರೆ ಕೊನೆಯ ವಿಕೆಟ್ಗೆ ಜೊತೆಗೂಡಿದ ನಾಥನ್ ಲಿಯಾನ್ (41) ಹಾಗೂ ಸ್ಕಾಟ್ ಬೋಲ್ಯಾಂಡ್ (10) 55 ರನ್ಗಳ ಜೊತೆಯಾಟವಾಡಿದರು. ಈ ಮೂಲಕ 4ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡದ 228 ಕ್ಕೆ ತಲುಪಿಸಿದರು.
ಇನ್ನು ಐದನೇ ದಿನದಾಟದ ಆರಂಭದಲ್ಲೇ ನಾಥನ್ ಲಿಯಾನ್ (41) ವಿಕೆಟ್ ಪಡೆಯುವಲ್ಲಿ ಬುಮ್ರಾ ಯಶಸ್ವಿಯಾದರು. ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು 234 ರನ್ಗಳಿಗೆ ಆಲೌಟ್ ಮಾಡಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದರು.
ಇನ್ನು ಕೊನೆಯ ದಿನದಾಟ ಮಾತ್ರ ಉಳಿದಿದ್ದು, ಭಾರತ ತಂಡವು ಈ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ಸೋಮವಾರದ ದಿನದಾಟದಲ್ಲಿ 340 ರನ್ಗಳನ್ನು ಚೇಸ್ ಮಾಡಬೇಕಿದೆ. ಅದರೊಳಗೆ ಆಸೀಸ್ ಬೌಲರ್ಗಳು 10 ವಿಕೆಟ್ ಪಡೆದರೆ ಜಯ ಆಸ್ಟ್ರೇಲಿಯಾ ಪಾಲಾಗಲಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಸ್ಯಾಮ್ ಕೊನ್ಸ್ಟಾಸ್ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಸ್ಕಾಟ್ ಬೋಲ್ಯಾಂಡ್.
ಇದನ್ನೂ ಓದಿ: ಛೇ ಇದೆಂತಾ ನೀಚತನ… ವಿರಾಟ್ ಕೊಹ್ಲಿ ತಂದೆ ವಿಷಯದಲ್ಲಿ ಕ್ಷುದ್ರತೆ ಮೆರೆದ ಆಸ್ಟ್ರೇಲಿಯಾ ಪತ್ರಿಕೆ..!
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ರೋಹಿತ್ ಶರ್ಮಾ (ನಾಯಕ) , ವಿರಾಟ್ ಕೊಹ್ಲಿ , ರಿಷಬ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ಟನ್ ಸುಂದರ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್.