- Kannada News Photo gallery Cricket photos Steve Smith creates world record with 15th ton against India
ಟೀಮ್ ಇಂಡಿಯಾ ವಿರುದ್ಧ ಇತಿಹಾಸ ರಚಿಸಿದ ಸ್ಟೀವ್ ಸ್ಮಿತ್
Australia vs India: ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಸ್ಟೀವ್ ಸ್ಮಿತ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಮೆಲ್ಬೋರ್ನ್ನಲ್ಲಿ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ ದಾಖಲೆಯನ್ನು ಸ್ಮಿತ್ ತಮ್ಮದಾಗಿಸಿಕೊಂಡರು. ಇದರ ಜೊತೆಗೆ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸಹ ಮುರಿದಿದ್ದಾರೆ.
Updated on: Dec 28, 2024 | 7:53 AM

ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಸ್ಟೀವ್ ಸ್ಮಿತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಬಲಿಷ್ಠ ಭಾರತ ತಂಡದ ವಿರುದ್ಧ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆಯೊಂದಿಗೆ ಎಂಬುದು ವಿಶೇಷ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶೀಸಿದ್ದರು. ಟೀಮ್ ಇಂಡಿಯಾ ವೇಗಿಗಳನ್ನು ಅತ್ಯುತ್ತಮವಾಗಿ ಎದುರಿಸಿದ ಸ್ಮಿತ್ 197 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 140 ರನ್ ಬಾರಿಸಿದರು. ಈ ಶತಕದೊಂದಿಗೆ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಭಾರತದ ವಿರುದ್ಧ ಮೂರು ಸ್ವರೂಪಗಳಲ್ಲಿ 111 ಇನಿಂಗ್ಸ್ ಆಡಿರುವ ಪಾಂಟಿಂಗ್ ಒಟ್ಟು 14 ಸೆಂಚುರಿ ಸಿಡಿಸಿ ಈ ವಿಶೇಷ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸ್ಮಿತ್ ಅಳಿಸಿ ಹಾಕಿದ್ದಾರೆ.

ಸ್ಟೀವ್ ಸ್ಮಿತ್ ಟೀಮ್ ಇಂಡಿಯಾ ವಿರುದ್ಧ ಈವರೆಗೆ ಒಟ್ಟು 62 ಪಂದ್ಯಗಳನ್ನಾಡಿದ್ದು, ಈ ವೇಳೆ 78 ಇನಿಂಗ್ಸ್ ಆಡಿದ್ದಾರೆ. ಇದರ ನಡುವೆ 15 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ತಂಡದ ವಿರುದ್ಧ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ 110 ಪಂದ್ಯಗಳಲ್ಲಿ 144 ಇನಿಂಗ್ಸ್ ಆಡಿರುವ ಸಚಿನ್ 20 ಸೆಂಚುರಿ ಸಿಡಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ಇದೀಗ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ 11 ಶತಕ ಹಾಗೂ ಏಕದಿನ ಕ್ರಿಕೆಟ್ನಲ್ಲಿ 4 ಶತಕ ಸಿಡಿಸಿರುವ ಸ್ಟೀವ್ ಸ್ಮಿತ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿಯಲು ಇನ್ನೂ 6 ಸೆಂಚುರಿಗಳನ್ನು ಬಾರಿಸಬೇಕಿದೆ. ಪ್ರಸ್ತುತ ಟೆಸ್ಟ್ ಸರಣಿ ಹಾಗೂ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸ್ಮಿತ್ ಅಬ್ಬರಿಸಿದರೆ ಈ ದಾಖಲೆಯನ್ನು ಮುರಿಯಬಹುದು.



















