ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ಕ್ವಿಂಟನ್ ಡಿ ಕಾಕ್ (Quinton de Kock) ಅವರು ತಕ್ಷಣವೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಭಾರತದ ವಿರುದ್ಧ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಡಿಕಾಕ್ ಇದ್ದಕ್ಕಿದ್ದಂತೆ ಸದ್ಯದಿಂದಲೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್‌ಗೆ (Test Cricket) ಗುಡ್ ಬೈ ಹೇಳಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ಡಿಕಾಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ ಎ) ಗುರುವಾರ ಡಿಕಾಕ್ ಅವರು ಟೆಸ್ಟ್‌ನಿಂದ ನಿವೃತ್ತಿಯ ನಿರ್ಧಾರವನ್ನು ತಿಳಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 29ರ ಹರೆಯದ ಡಿ ಕಾಕ್ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಉದ್ದೇಶಿಸಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (South Africa Cricket) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರ ಪ್ರಕಟಿಸುವ ವೇಳೆ ಮಾತನಾಡಿದ ಕ್ವಿಂಟನ್ ಡಿ ಕಾಕ್ “ಈ ನಿರ್ಧಾರ ಅತ್ಯಂತ ಸುಲಭವಾಗಿ ತೆಗೆದುಕೊಂಡಿದ್ದಲ್ಲ. ಈ ಬಗ್ಗೆ ನಾನು ಸಾಕಷ್ಟು ಆಲೋಚನೆ ಮಾಡಿದ್ದೇನೆ. ನನ್ನ ಕುಟುಂಬವನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕಿದೆ. ನಾನು ಮತ್ತು ನನ್ನ ಪತ್ನಿ ಸಾಶಾ ಮಗುವನ್ನು ಸ್ವಾಗತಿಸಲಿದ್ದು, ಈ ಬಗ್ಗೆಯೂ ಯೋಚಿಸಿ, ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಇದು ಪ್ರೋಟಿಯಾ ಆಗಿ ನನ್ನ ವೃತ್ತಿಜೀವನದ ಅಂತ್ಯವಲ್ಲ, ನಾನು ವೈಟ್ ಬಾಲ್ ಕ್ರಿಕೆಟ್‌ಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಮತ್ತು ನಿರೀಕ್ಷಿತ ಭವಿಷ್ಯಕ್ಕಾಗಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ. ಭಾರತದ ವಿರುದ್ಧದ ಈ ಟೆಸ್ಟ್ ಸರಣಿಯ ಉಳಿದ ಭಾಗದಲ್ಲಿ ನನ್ನ ಸಹ ಆಟಗಾರರಿಗೆ ಎಲ್ಲಾ ಶುಭಾಶಯಗಳು ತಿಳಿಸಲಿದ್ದೇನೆ” ಎಂದು ಅವರು ಹೇಳಿದರು.
29 ವರ್ಷದ ಡಿ ಕಾಕ್ ಅವರ ಪತ್ನಿ ತುಂಬು ಗರ್ಭಿಣಿ. ಆದ್ದರಿಂದ ಭಾರತ ಎದುರಿನ ಎರಡನೇ ಮತ್ತು ಮೂರನೇ ಟೆಸ್ಟ್‌ಗೆ ಅವರು ಲಭ್ಯ ಇರುವುದಿಲ್ಲ ಎಂದು ಈಗಾಗಲೇ ತಿಳಿಸಲಾಗಿತ್ತು. ಎರಡು ಬಾರಿ ದಕ್ಷಿಣ ಆಫ್ರಿಕಾದ ಶ್ರೇಷ್ಠ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದರು. ಟಿ20 ವಿಶ್ವಕಪ್ ಟೂರ್ನಿ ವೇಳೆ ಬ್ಲ್ಯಾಕ್ ಲಿವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲ ಸೂಚಿಸದ ಕಾರಣ ವಿವಾದಕ್ಕೆ ಒಳಗಾಗಿದ್ದರು.
ಈವರೆಗೆ 54 ಟೆಸ್ಟ್ ಪಂದ್ಯಗಳಲ್ಲಿ 3,300 ರನ್ ಕಲೆ ಹಾಕಿರುವ ಅವರು 221 ಕ್ಯಾಚ್ ಪಡೆದುಕೊಂಡಿದ್ದು 11 ಸ್ಟಂಪಿಂಗ್ ಮಾಡಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಜೊತೆಗೆ 124 ಏಕದಿನ, 61 ಟಿ20 ಪಂದ್ಯಗಳನ್ನು ಆಡಿರುವ ಡಿಕಾಕ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಡೇರ್ಡೆವಿಲ್ಸ್, ರಾಯಲ್ ಚಾಲೆಂಜರ್ಸ್, ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದಾರೆ.
Harbhajan Singh: ತಂಡದಿಂದ ಕೈಬಿಟ್ಟಿದ್ದೇಕೆ ಎಂದು ಹಲವು ಬಾರಿ ಧೋನಿಯನ್ನು ಪ್ರಶ್ನಿಸಿದ್ದೆ…ಆದರೆ
(South Africa wicketkeeper-batter Quinton de Kock announced his retirement from Test cricket with immediate effect)