The Hundred: ಜೆಮಿಮಾ ಹೋರಾಟ ವ್ಯರ್ಥ; ಚಾಂಪಿಯನ್ ಪಟ್ಟಕ್ಕೇರಿದ ಸ್ಮೃತಿ ಮಂಧಾನ ತಂಡ..!

|

Updated on: Aug 28, 2023 | 8:01 AM

The Hundred: ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆದ ವನಿತೆಯರ ದಿ ಹಂಡ್ರೆಂಡ್ ಲೀಗ್ ಫೈನಲ್ ಪಂದ್ಯದಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್‌ ತಂಡವನ್ನು ಮಣಿಸಿದ ಸದರ್ನ್ ಬ್ರೇವ್ಸ್ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಸದರ್ನ್ ಬ್ರೇವ್ ತಂಡದ ವಿಜಯದ ಇನ್ನೊಂದು ವಿಶೇಷತೆ ಎಂದರೆ ಈ ತಂಡದಲ್ಲಿ ಟೀಂ ಇಂಡಿಯಾದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ ಆಡುತ್ತಿರುವುದು.

The Hundred: ಜೆಮಿಮಾ ಹೋರಾಟ ವ್ಯರ್ಥ; ಚಾಂಪಿಯನ್ ಪಟ್ಟಕ್ಕೇರಿದ ಸ್ಮೃತಿ ಮಂಧಾನ ತಂಡ..!
ಸ್ಮೃತಿ ಮಂಧಾನ
Follow us on

ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆದ ವನಿತೆಯರ ದಿ ಹಂಡ್ರೆಂಡ್ ಲೀಗ್ (The Hundred) ಫೈನಲ್ ಪಂದ್ಯದಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್‌ ತಂಡವನ್ನು ಮಣಿಸಿದ ಸದರ್ನ್ ಬ್ರೇವ್ಸ್ (Southern Brave) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಸದರ್ನ್ ಬ್ರೇವ್ ತಂಡದ ವಿಜಯದ ಇನ್ನೊಂದು ವಿಶೇಷತೆ ಎಂದರೆ ಈ ತಂಡದಲ್ಲಿ ಟೀಂ ಇಂಡಿಯಾದ ಉಪನಾಯಕಿ ಮತ್ತು ಸ್ಟಾರ್ ಓಪನರ್ ಸ್ಮೃತಿ ಮಂಧಾನ (Smriti Mandhana) ಆಡುತ್ತಿರುವುದು. ಇನ್ನೊಂದು ಬೇಸರದ ಸಂಗತಿಯೆಂದರೆ, ಫೈನಲ್ ಪಂದ್ಯದಲ್ಲಿ ಸೋತ ಸೂಪರ್‌ಚಾರ್ಜರ್‌ ತಂಡದಲ್ಲಿ ಭಾರತದ ಮತ್ತೊಬ್ಬರು ಸ್ಟಾರ್ ಬ್ಯಾಟರ್ ಜೆಮಿಮಾ ರಾಡ್ರಿಗಸ್ (Jemimah Rodrigues) ಇದ್ದರೆಂಬುದು. ಇದೆಲ್ಲದರ ಹೊರತಾಗಿ ಚಾಂಪಿಯನ್ ಪಟ್ಟಕ್ಕೇರಿದ ಸದರ್ನ್ ಬ್ರೇವ್ ತನ್ನ ತಂಡದ ಅನುಭವಿ ಬೌಲರ್ ಅನ್ಯಾ ಶ್ರುಬ್‌ಸೋಲ್‌ ಅವರಿಗೆ ಸ್ಮರಣೀಯ ವಿದಾಯವನ್ನೂ ನೀಡಿತು.

ನಿರಾಸೆ ಮೂಡಿಸಿದ ಸ್ಮೃತಿ

ಭಾನುವಾರ ಲಾರ್ಡ್ಸ್‌ನಲ್ಲಿ ನಡೆದ ಈ ಫೈನಲ್‌ನಲ್ಲಿ ಸದರ್ನ್ ಬ್ರೇವ್ ಮೊದಲು ಬ್ಯಾಟ್ ಮಾಡಿ 6 ವಿಕೆಟ್ ಕಳೆದುಕೊಂಡು 139 ರನ್ ಕಲೆಹಾಕಿತು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರಲ್ಲಿ ಒಬ್ಬರಾದ ಸ್ಮೃತಿ ಮಂಧಾನ ಅವರಿಗೆ ಈ ಫೈನಲ್ ಪಂದ್ಯದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಪಂದ್ಯದ ಮೊದಲ ಎಸೆತದಲ್ಲಿಯೇ ಸ್ಮೃತಿ ಬೌಂಡರಿ ಬಾರಿಸಿದರಾದರೂ ಮುಂದಿನ ಎಸೆತದಲ್ಲಿ ಔಟಾದರು.

ಮತ್ತೊಮ್ಮೆ ಅಬ್ಬರಿಸಿದ ವ್ಯಾಟ್

ಎರಡನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರೂ, ಸದರ್ನ್ ಬ್ರೇವ್ಸ್ ದೊಡ್ಡ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರಮುಖ ಕಾರಣರಾದವರು ಅನುಭವಿ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್. ಸ್ಮೃತಿಯಂತೆಯೇ ಇಡೀ ಸೀಸನ್​ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ವ್ಯಾಟ್ ಫೈನಲ್‌ನಲ್ಲೂ ತಮ್ಮ ಅಬ್ಬರ ಮುಂದುವರಿಸಿ,ಅತ್ಯುತ್ತಮ ಅರ್ಧಶತಕ ಬಾರಿಸಿದರು. ವ್ಯಾಟ್ ಕೇವಲ 38 ಎಸೆತಗಳಲ್ಲಿ 59 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದ ಬ್ಯಾಟರ್ ಫ್ರೇಯಾ ಕ್ಯಾಂಪ್ ಕೇವಲ 17 ಎಸೆತಗಳಲ್ಲಿ 31 ರನ್ ಗಳಿಸಿ ತಂಡವನ್ನು 139 ರನ್‌ಗಳಿಗೆ ಕೊಂಡೊಯ್ದರು.

ಹೋರಾಟದ ಇನ್ನಿಂಗ್ಸ್ ಆಡಿದ ಜೆಮಿಮಾ

139 ರನ್​ಗಳ ಗುರಿ ಬೆನ್ನಟ್ಟಿದ ಸೂಪರ್‌ಚಾರ್ಜರ್ಸ್ ಕೂಡ ಸದರ್ನ್ ಬ್ರೇವ್ಸ್‌ನಂತೆ ಕೆಟ್ಟ ಆರಂಭವನ್ನು ಹೊಂದಿತ್ತು. ಮೊದಲ ಓವರ್​ನ ಎರಡನೇ ಎಸೆತದಲ್ಲಿಯೇ ಮೊದಲ ವಿಕೆಟ್ ಪತನವಾಯಿತು. ಆ ಬಳಿಕ ಕೆಲವೇ ಸಮಯದಲ್ಲಿ ವಿಕೆಟ್‌ಗಳ ಪತನದ ಸರಣಿ ಪ್ರಾರಂಭವಾಯಿತು. ಆದರೆ ಒಂದೆಡೆ ಕ್ರೀಸ್​ನಲ್ಲಿ ಭದ್ರವಾಗಿ ಬೇರೂರಿದ ಜೆಮಿಮಾ ರಾಡ್ರಿಗಸ್ ಗೆಲುವಿಗಾಗಿ ಹೋರಾಡಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಇನ್ನಿಂಗ್ಸ್‌ನ 73 ನೇ ಎಸೆತದಲ್ಲಿ ತಮ್ಮ ಇನ್ನಿಂಗ್ಸ್ ಮುಗಿಸಿದ ಜೆಮಿಮಾ, ಕೇವಲ 14 ಎಸೆತಗಳಲ್ಲಿ 24 ರನ್ ಸಿಡಿಸಿದರು. ಅಂತಿಮವಾಗಿ, ಇಡೀ ತಂಡವು 93 ಎಸೆತಗಳಲ್ಲಿ ಕೇವಲ 105 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಸದರ್ನ್ ಬ್ರೇವ್ ಪಂದ್ಯವನ್ನು 34 ರನ್‌ಗಳಿಂದ ಗೆದ್ದು ಪ್ರಶಸ್ತಿಯನ್ನು ಸಹ ವಶಪಡಿಸಿಕೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:00 am, Mon, 28 August 23