ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs Sri Lanka) ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ (Ravindra Jadeja) ಅವರ ಅಮೋಘ ಅಜೇಯ 175 ರನ್‌ಗಳ ನೆರವಿನಿಂದ ಟೀಮ್ ಇಂಡಿಯಾ (Team India) ಬರೋಬ್ಬರಿ 574 ರನ್ಗೆ ಡಿಕ್ಲೇರ್ ಘೋಷಿಸಿ ಬೃಹತ್ ಮೊತ್ತ ಕಲೆಹಾಕಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಲಂಕಾನ್ನರು ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 108 ರನ್ ಕಲೆಹಾಕಿದೆ. ಸಿಂಹಳೀಯರು ಇನ್ನೂ 466 ರನ್‌ಗಳ ಹಿನ್ನಡೆಯಲ್ಲಿದ್ದು, ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ. ಈಗಾಗಲೇ ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡಿರುವ ಕಾರಣ ಶ್ರೀಲಂಕಾ ಮೊತ್ತ 250ರ ಗಡಿ ದಾಟುವುದು ಅನುಮಾನ ಎನ್ನಲಾಗುತ್ತಿದೆ. ಇತ್ತ ಭಾರತೀಯ ಬೌಲರ್ಗಳು ಆದಷ್ಟು ಬೇಗ ಆಲೌಟ್ ಮಾಡಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಇಂದಿನ ಮೂರನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ.
ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದ್ದ ಭಾರತ ಪರ ಜಡೇಜಾ ಮತ್ತು ಅಶ್ವಿನ್ ಏಳನೇ ವಿಕೆಟ್‌ಗೆ 130 ರನ್‌ಗಳ ಅಮೂಲ್ಯ ಜೊತೆಯಾಟದ ಮೂಲಕ ತಂಡದ ಸ್ಕೋರನ್ನು 500ರ ಗಡಿಯತ್ತ ತಲುಪಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದ್ದ ಜಡ್ಡು 160ನೇ ಎಸೆತದಲ್ಲಿ 100 ರನ್ ದಾಖಲಿಸಿದರು. ಊಟದ ವಿರಾಮಕ್ಕೆ ಕೆಲ ಸಮಯದ ಹಿಂದೆ ಅರ್ಧಶತಕ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ ರವಿಚಂದ್ರನ್ ಅಶ್ವಿನ್ 82 ಎಸೆತಗಳಲ್ಲಿ 61 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಸುರಂಗ ಲಕ್ಮಲ್ ಬೌಲಿಂಗ್‌ನಲ್ಲಿ ಅಶ್ವಿನ್ ಡಿಕ್ವೆಲ್ಲಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ನಂತರ ತಮ್ಮ ಅಮೋಘ ಇನ್ನಿಂಗ್ಸ್ ಮುಂದುವರಿಸಿದ ಜಡೇಜಾ ಡಿಕ್ಲೇರ್ ಘೋಷಿಸುವ ಮೊದಲು 228 ಎಸೆತಗಳಲ್ಲಿ ಅಜೇಯ 175 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು. ಜಡೇಜಾ ಈ ಅಮೋಘ ಆಟದೊಂದಿಗೆ ಭಾರತ ಮಾಜಿ ನಾಯಕ ಕಪಿಲ್‌ದೇವ್‌ರ 36 ವರ್ಷಗಳ ಹಳೆಯ ದಾಖಲೆ ಕೂಡ ನುಚ್ಚು ನೂರಾದಾವು. 9ನೇ ವಿಕೆಟ್‌ಗೆ ಜಡೇಜಾಗೆ ಸಾಥ್ ನೀಡಿದ ಮೊಹಮ್ಮದ್ ಶಮಿ ಅಜೇಯ 20 ರನ್ ಕಲೆಹಾಕಿದರು. ಈ ಮೂಲಕ 9ನೇ ವಿಕೆಟ್‌ಗೆ 103 ರನ್‌ಗಳ ಜೊತೆಯಾಟವೂ ಮೂಡಿಬಂತು. ಅಂತಿಮವಾಗಿ ನಾಯಕ ರೋಹಿತ್ ಶರ್ಮಾ ಭಾರತ ತಂಡ 129.2 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದರು.
ಇದಾದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 43 ಓವರ್‌ಗಳಿಗೆ 4 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಆ ಮೂಲಕ ಇನ್ನೂ 466 ರನ್‌ಗಳ ಹಿನ್ನಡೆಯಲ್ಲಿದೆ. ದಿಮುತ್ ಕರುಣಾರತ್ನೆ(28), ಲಹಿರು ತಿರಿಮಾನ್ನೆ(17), ಏಂಜೆಲೊ ಮ್ಯಾಥ್ಯೂಸ್(22) ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಆದರೆ ಜಸ್‌ಪ್ರಿತ್ ಅವರಿಂದ ಒಂದು ಜೀವದಾನ ಪಡೆದ ಪತುಮ್ ನಿಸಂಕ ಅವರು ಅಜೇಯ 26 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಚರಿತ ಅಸಲಂಕಾ ಇದ್ದಾರೆ. ಭಾರತದ ಪರ ಆರ್ ಅಶ್ವಿನ್ ಎರಡು ವಿಕೆಟ್ ಪಡೆದುಕೊಂಡರೆ, ಆರ್ ಜಡೇಜಾ ಹಾಗೂ ಜಸ್‌ಪ್ರಿತ್ ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
IND vs PAK ODI: ಟಾಸ್ ಗೆದ್ದ ಭಾರತ: ಮಿಥಾಲಿ ಪಡೆಗೆ ಆರಂಭದಲ್ಲೇ ಶಾಕ್ ನೀಡಿದ ಪಾಕಿಸ್ತಾನ