IND vs PAK ODI: ಟಾಸ್ ಗೆದ್ದ ಭಾರತ: ಮಿಥಾಲಿ ಪಡೆಗೆ ಆರಂಭದಲ್ಲೇ ಶಾಕ್ ನೀಡಿದ ಪಾಕಿಸ್ತಾನ

IND vs PAK ODI: ಟಾಸ್ ಗೆದ್ದ ಭಾರತ: ಮಿಥಾಲಿ ಪಡೆಗೆ ಆರಂಭದಲ್ಲೇ ಶಾಕ್ ನೀಡಿದ ಪಾಕಿಸ್ತಾನ
Pakistan Women vs India Women

India vs Pakistan, Women's World Cup 2022: ಈಗಾಗಲೇ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉಭಯ ತಂಡಗಳು ಬಲಿಷ್ಠ ಆಡುವ ಬಳಗವನ್ನೇ ಕಣಕ್ಕಿಳಿಸಿದೆ.

TV9kannada Web Team

| Edited By: Vinay Bhat

Mar 06, 2022 | 7:21 AM

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ( ICC Women’s World Cup 2022) ನಾಲ್ಕನೇ ಪಂದ್ಯದಲ್ಲಿಂದು ಭಾರತ ಹಾಗೂ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ (India womens vs Pakistan Womens) ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉಭಯ ತಂಡಗಳು ಬಲಿಷ್ಠ ಆಡುವ ಬಳಗವನ್ನೇ ಕಣಕ್ಕಿಳಿಸಿದೆ. ಇದು ಭಾರತಕ್ಕೆ ಚೊಚ್ಚಲ ಪಂದ್ಯವಾಗಿದ್ದು ಗೆಲುವಿನ ಮೂಲಕ ಶುಭಾರಂಭ ಮಾಡುವ ತವಕದಲ್ಲಿದೆ. ಭಾರತೀಯ ವನಿತೆಯರಿಗೆ ಈಗಾಗಲೇ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಅನೇಕ ಕ್ರಿಕೆಟ್ ಆಟಗಾರರು ಶುಭಕೋರಿದ್ದಾರೆ. ಕಳೆದ ಬಾರಿ ರನ್ನರ್‌-ಅಪ್‌ ಪ್ರಶಸ್ತಿಗೆ ತೃಪ್ತಿ ಪಟ್ಟಿದ್ದ ಭಾರತ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಏಪ್ರಿಲ್‌ 3ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು, ನ್ಯೂಜಿಲೆಂಡ್​ನ ಕ್ರೈಸ್ಟ್‌ಚರ್ಚ್, ಆಕ್ಲೆಂಡ್‌, ಡ್ಯುನೆಡಿನ್‌, ತೌರಂಗ, ಹ್ಯಾಮಿಲ್ಟನ್‌ ಹಾಗೂ ವೆಲ್ಲಿಂಗ್ಟನ್‌ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಸದ್ಯ ಮೌಂಟ್‌ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಶುರುವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದಿರುವ ಭಾರತಕ್ಕೆ ಪಾಕಿಸ್ತಾನ ಆರಂಭದಲ್ಲೇ ಆಘಾತ ಉಂಟುಮಾಡಿದೆ. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಜೊತೆ ಓಪನರ್ ಆಗಿ ಕಣಕ್ಕಿಳಿದ ಶಫಾಲಿ ವರ್ಮಾ ಪಂದ್ಯದ ಮೂರನೇ ಓವರ್​ನ ಡಯಾನ ಬೇಗ್ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದೀಗ ಕ್ರೀಸ್​​ನಲ್ಲಿ ಮಂದಾನ ಜೊತೆ ದೀಪ್ತಿ ಶರ್ಮಾ ಎಚ್ಚರಿಕೆಯ ಆಟವಾಡುತ್ತಿದ್ದಾರೆ.

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಹರ್ಮನ್​ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.

ಪಾಕಿಸ್ತಾನ ಪ್ಲೇಯಿಂಗ್ XI: ಜವೇರಿಯ ಖಾನ್, ಸಿದ್ರಾ ಅಮೀನ್, ಬಿಸ್ಮಾ ಮರೂಫ್ (ನಾಯಕಿ), ಒಮೈನಾ ಸೊಹಾಲಿ, ನಿದಾ ದರ್, ಅಲಿಯಾ ರಿಯಾಝ್, ಫಾತಿಮಾ ಸನಾ, ಸಿದ್ರಾ ನವಾಜ್ (ವಿಕೆಟ್ ಕೀಪರ್), ಡಯಾನ್ ಬೇಗ್, ನಶ್ರಾ ಸಂಧು, ಅನಮ್ ಅಮಿನ್.

ಭಾರತ ಮಹಿಳಾ ತಂಡ ಮತ್ತು ಪಾಕಿಸ್ತಾನ ಮಹಿಳಾ ತಂಡ ಇಲ್ಲಿಯವರೆಗೆ ಎರಡು ಬಾರಿ ಮುಖಾಮುಖಿಯಾಗಿವೆ. ಈ ಎರಡು ಪಂದ್ಯಗಳಲ್ಲೂ ಭಾರತ ಮಹಿಳಾ ತಂಡ ಗೆಲುವಿನ ನಗೆ ಬೀರಿದೆ. ಪುರುಷರಂತೆ ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಪಾಕ್ ಯಾವತ್ತೂ ಸವಾಲೆನಿಸಿಲ್ಲ. ವಿಶ್ವಕಪ್‌ನ 3 ಮುಖಾಮುಖಿ ಸೇರಿದಂತೆ ಪಾಕ್ ವಿರುದ್ಧ ಈ ಹಿಂದೆ ಆಡಿದ 10 ಏಕದಿನ ಪಂದ್ಯಗಳಲ್ಲೂ ಭಾರತ ಮಹಿಳಾ ತಂಡ ಗೆಲುವು ದಾಖಲಿಸಿದ ಅಜೇಯ ದಾಖಲೆ ಹೊಂದಿದೆ. ಇನ್ನು ಪಾಕ್ ಮಹಿಳಾ ತಂಡ ಟೂರ್ನಿಗೆ ಕೊನೇ ಶ್ರೇಯಾಂಕಿತ ತಂಡವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. 2013, 2017ರ ವಿಶ್ವಕಪ್‌ಗಳಲ್ಲಿ ಪಾಕ್ ತಂಡ ಒಂದೂ ಪಂದ್ಯ ಗೆದ್ದಿರಲಿಲ್ಲ.

ಕಳೆದ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯವನ್ನು ವಹಿಸಿತ್ತು. 2017ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ಆದರೆ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಎದುರು 9 ರನ್‌ಗಳ ರೋಚಕ ಸೋಲು ಕಾಣುವ ಮೂಲಕ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಭಾರತೀಯ ವನಿತೆಯರು ಕೈಚೆಲ್ಲಿದ್ದರು. ಇದೀಗ ಮತ್ತೆ ಭಾರತ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ಭಾರತದ ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಪಾಲಿಗೆ ಇದು ಕಡೆಯ ಏಕದಿನ ವಿಶ್ವಕಪ್ ಆಗಿರುವುದರಿಂದ ಟ್ರೋಫಿ ಗೆದ್ದು ಕ್ರಿಕೆಟ್‌ ವೃತ್ತಿಜೀವನಕ್ಕೆ ಗುಡ್‌ ಬೈ ಹೇಳಲು ಎದುರು ನೋಡುತ್ತಿದ್ದಾರೆ.

IND vs SL: ಮೊಹಾಲಿ ಟೆಸ್ಟ್​ನಲ್ಲಿ ಕಿವೀಸ್ ದಂತಕಥೆ ಹ್ಯಾಡ್ಲಿ ದಾಖಲೆ ಮುರಿದ ಅಶ್ವಿನ್!

Follow us on

Most Read Stories

Click on your DTH Provider to Add TV9 Kannada