Sri Lanka vs Pakistan: ಪಾಕ್​ಗೆ 131 ರನ್​ಗಳ ಗುರಿ ನೀಡಿದ ಶ್ರೀಲಂಕಾ: ಕುತೂಹಲಘಟ್ಟದಲ್ಲಿ ಪಂದ್ಯ

| Updated By: ಝಾಹಿರ್ ಯೂಸುಫ್

Updated on: Jul 19, 2023 | 6:41 PM

Sri Lanka vs Pakistan, 1st Test: ಶ್ರೀಲಂಕಾ ತಂಡವು 7 ವಿಕೆಟ್ ಕಬಳಿಸಿದರೆ ಪಂದ್ಯವನ್ನು ಜಯಿಸಬಹುದು. ಹೀಗಾಗಿಯೇ ಅಂತಿಮ ದಿನದಾಟದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

Sri Lanka vs Pakistan: ಪಾಕ್​ಗೆ 131 ರನ್​ಗಳ ಗುರಿ ನೀಡಿದ ಶ್ರೀಲಂಕಾ: ಕುತೂಹಲಘಟ್ಟದಲ್ಲಿ ಪಂದ್ಯ
PAK vs SL
Follow us on

Sri Lanka vs Pakistan: ಗಾಲೆ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಧನಂಜಯ ಡಿಸಿಲ್ವಾ (122) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 312 ರನ್​ ಕಲೆಹಾಕಿತು.
ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಪಾಕಿಸ್ತಾನ್ ಪರ ಮೊದಲ ಇನಿಂಗ್ಸ್​ನಲ್ಲಿ ಸೌದ್ ಶಕೀಲ್ (208) ಅಜೇಯ ದ್ವಿಶತಕ ಸಿಡಿಸಿದ್ದರು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ಪಾಕ್ ತಂಡವು 461 ರನ್​ ಕಲೆಹಾಕಿತು.

149 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಮತ್ತೊಮ್ಮೆ ಬ್ಯಾಟಿಂಗ್ ಕುಸಿತಕ್ಕೊಳಗಾಯಿತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ 82 ರನ್ ಬಾರಿಸಿ ಧನಂಜಯ ಡಿಸಿಲ್ವಾ ಮತ್ತೊಮ್ಮೆ ಆಸರೆಯಾದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಶ್ರೀಲಂಕಾ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 279 ರನ್​ಗಳಿಗೆ ಆಲೌಟ್ ಆಯಿತು.

ಅತ್ತ ಮೊದಲ ಇನಿಂಗ್ಸ್​ನಲ್ಲಿ 149 ರನ್​ಗಳ ಮುನ್ನಡೆದಿದ್ದ ಪಾಕಿಸ್ತಾನ್ ತಂಡಕ್ಕೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 131 ರನ್​ಗಳ ಗುರಿ ಪಡೆಯಿತು. ಆದರೆ ಈ ಮೊತ್ತವನ್ನು ಬೆನ್ನತ್ತಿದ ಪಾಕ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಶ್ರೀಲಂಕಾ ಬೌಲರ್​ಗಳು ಯಶಸ್ವಿಯಾಗಿದ್ದಾರೆ.

ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ್ ತಂಡವು 48 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಸದ್ಯ ಕ್ರೀಸ್​ನಲ್ಲಿ ಬಾಬರ್ ಆಝಂ (6) ಹಾಗೂ ಇಮಾಮ್ ಉಲ್ ಹಕ್ (25) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಲ್ಲದೆ 5ನೇ ದಿನದಾಟದಲ್ಲಿ 83 ರನ್​ ಕಲೆಹಾಕಬೇಕಿದೆ.

ಅತ್ತ ಶ್ರೀಲಂಕಾ ತಂಡವು 7 ವಿಕೆಟ್ ಕಬಳಿಸಿದರೆ ಪಂದ್ಯವನ್ನು ಜಯಿಸಬಹುದು. ಹೀಗಾಗಿಯೇ ಅಂತಿಮ ದಿನದಾಟದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ (ನಾಯಕ) , ನಿಶಾನ್ ಮದುಷ್ಕ , ಕುಸಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ಧನಂಜಯ ಡಿ ಸಿಲ್ವಾ , ದಿನೇಶ್ ಚಂಡಿಮಲ್ , ಸದೀರ ಸಮರವಿಕ್ರಮ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ವಿಶ್ವ ಫೆರ್ನಾಂಡೋ , ಕಸುನ್ ರಜಿತ.

ಇದನ್ನೂ ಓದಿ: Saud Shakeel: ಸಚಿನ್, ಸೆಹ್ವಾಗ್ ದಾಖಲೆ ಸರಿಗಟ್ಟಿದ ಸೌದ್ ಶಕೀಲ್

ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಖ್, ಇಮಾಮ್-ಉಲ್-ಹಕ್ , ಶಾನ್ ಮಸೂದ್ , ಬಾಬರ್ ಆಝಂ (ನಾಯಕ) , ಸೌದ್ ಶಕೀಲ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಅಘ ಸಲ್ಮಾನ್ , ನೌಮಾನ್ ಅಲಿ , ಅಬ್ರಾರ್ ಅಹ್ಮದ್ , ಶಾಹೀನ್ ಅಫ್ರಿದಿ , ನಸೀಮ್ ಶಾ.