ZIM vs SL: ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ವಿಕೆಟ್; ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಜಿಂಬಾಬ್ವೆ

Zimbabwe vs Sri Lanka ODI: ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ 298 ರನ್ ಗಳಿಸಿತು. ಜಿಂಬಾಬ್ವೆ ಗೆಲುವಿನ ಹಾದಿಯಲ್ಲಿದ್ದಾಗ, ಕೊನೆಯ ಓವರ್‌ನಲ್ಲಿ ಮಧುಶಂಕರ ಹ್ಯಾಟ್ರಿಕ್‌ನಿಂದಾಗಿ ಶ್ರೀಲಂಕಾ 7 ರನ್‌ಗಳಿಂದ ಗೆದ್ದಿತು. ಸಿಕಂದರ್ ರಾಝಾ ಅವರ 92 ರನ್‌ಗಳ ಇನ್ನಿಂಗ್ಸ್ ವ್ಯರ್ಥವಾಯಿತು. ಶ್ರೀಲಂಕಾ ಪರ ಪಾಥುಮ್ ನಿಸ್ಸಂಕಾ ಮತ್ತು ಲಿಯಾನಗೆ ಅರ್ಧಶತಕ ಗಳಿಸಿದರು.

ZIM vs SL: ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ವಿಕೆಟ್; ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಜಿಂಬಾಬ್ವೆ
Zim Vs Sl

Updated on: Aug 29, 2025 | 10:16 PM

ಜಿಂಬಾಬ್ವೆ ಹಾಗೂ ಶ್ರೀಲಂಕಾ (Zimbabwe vs Sri Lanka) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 298 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಕೂಡ ಸುಲಭವಾಗಿ ಗೆಲುವಿನತ್ತ ಸಾಗುತ್ತಿತ್ತು ಆದರೆ ಕೊನೆಯ ಓವರ್‌ನಲ್ಲಿ ಯಾರೂ ನಿರೀಕ್ಷಿಸದ ಒಂದು ಘಟನೆ ಸಂಭವಿಸಿತು. ಶ್ರೀಲಂಕಾದ ಎಡಗೈ ವೇಗದ ಬೌಲರ್ ಮಧುಶಂಕ (Dilshan Madushanka) ಕೊನೆಯ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಇಡೀ ಪಂದ್ಯದ ದಿಕ್ಕನೇ ಬದಲಿಸಿದರು. ಅಂತಿಮವಾಗಿ ಜಿಂಬಾಬ್ವೆ ತಂಡ ಈ ಪಂದ್ಯವನ್ನು 7 ರನ್‌ಗಳಿಂದ ಕಳೆದುಕೊಂಡಿತು.

ಕೊನೆಯ ಓವರ್‌ನಲ್ಲಿ ಮಧುಶಂಕ ಮ್ಯಾಜಿಕ್

ವಾಸ್ತವವಾಗಿ ಕೊನೆಯ ಓವರ್​ನಲ್ಲಿ ಜಿಂಬಾಬ್ವೆ ಗೆಲುವಿಗೆ ಕೇವಲ 10 ರನ್ ಬೇಕಿತ್ತು. ತಂಡದ ಪರ 92 ರನ್ ಬಾರಿಸಿದ್ದ ಸಿಕಂದರ್ ರಾಝಾ ಹಾಗೂ 42 ರನ್ ಬಾರಿಸಿದ್ದ ಟೋನಿ ಮುನಿಯೊಂಗಾ ಕ್ರೀಸ್​ನಲ್ಲಿದ್ದರು. ಹೀಗಾಗಿ ಜಿಂಬಾಬ್ವೆ ತಂಡಕ್ಕೆ ಗೆಲುವು ಖಚಿತ ಎನ್ನಲಾಗುತ್ತಿತ್ತು. ಆದರೆ ಶ್ರೀಲಂಕಾ ಪರ ಕೊನೆಯ ಓವರ್ ಬೌಲ್ ಮಾಡುವ ಜವಾಬ್ದಾರಿ ಹೊತ್ತ ವೇಗಿ ಮಧುಶಂಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಮೊದಲ ಎಸೆತದಲ್ಲಿಯೇ ಸಿಕಂದರ್ ರಾಝಾ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದ ಮಧುಶಂಕ, ಮುಂದಿನ ಎಸೆತದಲ್ಲಿ ಇವಾನ್ಸ್ ಅವರ ವಿಕೆಟ್ ಉರುಳಿಸಿದರು. ನಂತರ ಮುಂದಿನ ಎಸೆತದಲ್ಲಿ ರಿಚರ್ಡ್ ನಾಗರ್ವಾ ಅವರನ್ನು ಪೆವಿಲಿಯನ್​ಗಟ್ಟುವ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಇದರ ನಂತರ, ಜಿಂಬಾಬ್ವೆ 3 ಎಸೆತಗಳಲ್ಲಿ 10 ರನ್ ಗಳಿಸಬೇಕಾಗಿತ್ತು ಆದರೆ ಮಧುಶಂಕರ ಕೇವಲ ಎರಡು ರನ್‌ಗಳನ್ನು ಬಿಟ್ಟುಕೊಟ್ಟರು.

ಸಿಕಂದರ್ ರಾಝಾ ಹೋರಾಟ ವ್ಯರ್ಥ

ಶ್ರೀಲಂಕಾ ಈ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಗೆದ್ದಿರಬಹುದು ಆದರೆ ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಾಝಾ ಈ ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್ ಆಡಿದರು. ಒಂದು ಹಂತದಲ್ಲಿ ಜಿಂಬಾಬ್ವೆ ತಂಡವು 161 ರನ್‌ಗಳಿಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆ ಬಳಿಕ ಜೊತೆಯಾದ ಸಿಕಂದರ್ ರಾಝಾ ಮತ್ತು ಟೋನಿ ಶತಕದ ಜೊತೆಯಾಟವನ್ನಾಡಿ ಜಿಂಬಾಬ್ವೆ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದಾಗ್ಯೂ, ಕೊನೆಯಲ್ಲಿ ಸಿಕಂದರ್ ರಾಝಾ ತಮ್ಮ ಒಂದು ತಪ್ಪಿನಿಂದಾಗಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಪಾಥುಮ್ ನಿಸ್ಸಂಕಾ 76 ರನ್ ಗಳಿಸಿದರೆ, ಲಿಯಾನಗೆ ಕೂಡ 70 ರನ್​ಗಳ ಇನ್ನಿಂಗ್ಸ್ ಆಡಿದರು. ಕಮಿಂದು ಮೆಂಡಿಸ್ ಕೂಡ 57 ರನ್​ಗಳ ಕಾಣಿಕೆ ನೀಡಿದರು. ಈ ಮೂರು ಇನ್ನಿಂಗ್ಸ್‌ಗಳ ಆಧಾರದ ಮೇಲೆ ಶ್ರೀಲಂಕಾ 298 ರನ್ ಕಲೆಹಾಕಿ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ