ODI Rankings: ಟಾಪ 5 ರೊಳಗೆ ಗಿಲ್, ರೋಹಿತ್, ಕೊಹ್ಲಿ; ಏಕದಿನ ರ್ಯಾಂಕಿಂಗ್ನಲ್ಲಿ ಭಾರತೀಯರದ್ದೇ ಪಾರುಪತ್ಯ
ODI Rankings: ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಶ್ರೇಯಾಂಕ ಪಟ್ಟಿಯಲ್ಲಿ ಶುಭ್‌ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಮೂವರೂ ಚಾಂಪಿಯನ್ಸ್ ಟ್ರೋಫಿ ನಂತರ ಯಾವುದೇ ಏಕದಿನ ಪಂದ್ಯಗಳನ್ನು ಆಡದಿದ್ದರೂ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ. ಕೆಎಲ್ ರಾಹುಲ್ ಒಂದು ಸ್ಥಾನ ಏರಿಕೆಯೊಂದಿಗೆ 14ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಮತ್ತು ಕ್ಯಾಮರೂನ್ ಗ್ರೀನ್ ಅವರು ಶತಕಗಳೊಂದಿಗೆ ಶ್ರೇಯಾಂಕದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.
Updated on: Aug 27, 2025 | 5:55 PM

ಐಸಿಸಿ, ಏಕದಿನ ಬ್ಯಾಟ್ಸ್‌ಮನ್‌ಗಳ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಾದ ಶುಭ್‌ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಹಾಗೆಯೇ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂವರು ಕ್ರಿಕೆಟಿಗರು ಚಾಂಪಿಯನ್ಸ್ ಟ್ರೋಫಿ ಬಳಿಕ ಯಾವುದೇ ಏಕದಿನ ಪಂದ್ಯವನ್ನಾಡಿಲ್ಲ. ಆದಾಗ್ಯೂ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್ 784 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ 756 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. ಪಾಕಿಸ್ತಾನದ ಬಾಬರ್ ಆಝಂ 739 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಗಳಲ್ಲಿದ್ದಾರೆ.

ಮೇಲೆ ಹೇಳಿದಂತೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 736 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ 10 ನೇ ಸ್ಥಾನದಲ್ಲಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಕೆಎಲ್ ಒಂದು ಸ್ಥಾನ ಏರಿಕೆಯೊಂದಿಗೆ 14 ನೇ ಸ್ಥಾನದಲ್ಲಿದ್ದು, ಅವರ ರೇಟಿಂಗ್ 638 ಆಗಿದೆ.

ಉಳಿದಂತೆ ದಕ್ಷಿಣ ಆಫ್ರಿಕಾ ವಿರುದ್ಧ ಮೆಕೆಯಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೂವರು ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್ (142), ಮಿಚೆಲ್ ಮಾರ್ಷ್ (100) ಮತ್ತು ಕ್ಯಾಮರೂನ್ ಗ್ರೀನ್ (ಔಟಾಗದೆ 118) ಶತಕಗಳನ್ನು ಬಾರಿಸಿದ್ದರು. ಈ ಪ್ರದರ್ಶನದಿಂದಾಗಿ ಈ ಮೂವರೂ ಶ್ರೇಯಾಂಕದಲ್ಲಿ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ.

ಹೆಡ್ ಒಂದು ಸ್ಥಾನ ಮೇಲಕ್ಕೇರಿ 11 ನೇ ಸ್ಥಾನಕ್ಕೇರಿದರೆ, ಮಾರ್ಷ್ ನಾಲ್ಕು ಸ್ಥಾನ ಮೇಲಕ್ಕೇರಿ 44 ನೇ ಸ್ಥಾನಕ್ಕೆ ಮತ್ತು ಗ್ರೀನ್ 40 ಸ್ಥಾನ ಮೇಲಕ್ಕೇರಿ 78 ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾ ಮತ್ತೊಬ್ಬ ಆಟಗಾರ ಜೋಶ್ ಇಂಗ್ಲಿಸ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 23 ಸ್ಥಾನ ಮೇಲಕ್ಕೇರಿ 64 ನೇ ಸ್ಥಾನಕ್ಕೆ ತಲುಪಿದ್ದಾರೆ.
