R Ashwin: ಐಪಿಎಲ್ಗೆ ಗುಡ್ ಬೈ ಹೇಳಿದ ರವಿಚಂದ್ರನ್ ಅಶ್ವಿನ್
Ravichandran Ashwin IPL Retirement: ರವಿಚಂದ್ರನ್ ಅಶ್ವಿನ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ ಒಟ್ಟು 221 ಪಂದ್ಯಗಳನ್ನಾಡಿರುವ ಅವರು 187 ವಿಕೆಟ್ ಕಬಳಿಸಿದ್ದಾರೆ.
Updated on: Aug 27, 2025 | 11:21 AM

ಭಾರತದ ಲೆಜೆಂಡ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಇಂಡಿಯನ್ ಪ್ರೀಮಿಯರ್ ಲೀಗ್ನಿಂದ (IPL) ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಅಶ್ವಿನ್ ಐಪಿಎಲ್ನಲ್ಲಿ ಮುಂದುವರೆದಿದ್ದರು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.

ರವಿಚಂದ್ರನ್ ಅಶ್ವಿನ್ ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ 9 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಅವರು 186 ಎಸೆತಗಳಲ್ಲಿ 283 ರನ್ ಬಿಟ್ಟು ಕೊಟ್ಟಿದ್ದರು. ಇದರ ನಡುವೆ 7 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ನಿವೃತ್ತಿ ಘೋಷಿಸಿ ಅಶ್ವಿನ್ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭ ಇರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಕೊನೆಗೊಳ್ಳುತ್ತದೆ, ಆದರೆ ವಿವಿಧ ಲೀಗ್‌ಗಳ ಸುತ್ತಲಿನ ಆಟದ ಅನ್ವೇಷಣೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಈವರೆಗಿನ ಅದ್ಭುತ ನೆನಪುಗಳು ಮತ್ತು ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮತ್ತು ಮುಖ್ಯವಾಗಿ ಐಪಿಎಲ್ ಮತ್ತು ಬಿಸಿಸಿಐಗೆ ಧನ್ಯವಾದಗಳನ್ನು ಸಲ್ಲಿಸುತ್ತಿರುವುದಾಗಿ ಅಶ್ವಿನ್ ಬರೆದುಕೊಂಡಿದ್ದಾರೆ.

2009 ರಲ್ಲಿ ಐಪಿಎಲ್ ಕೆರಿಯರ್ ಆರಂಭಿಸಿದ್ದ ರವಿಚಂದ್ರನ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದರು. ಅಲ್ಲದೆ ಕಳೆದ ಸೀಸನ್ ಮೂಲಕ ಸಿಎಸ್ಕೆ ತಂಡಕ್ಕೆ ಮರಳಿದ್ದರು.

ರವಿಚಂದ್ರನ್ ಅಶ್ವಿನ್ ಐಪಿಎಲ್ನಲ್ಲಿ ಈವರೆಗೆ 221 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 4710 ಎಸೆತಗಳನ್ನು ಎಸೆದಿರುವ ಅವರು ಒಟ್ಟು 187 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟಿಂಗ್ ಮೂಲಕ 833 ರನ್ಗಳ ಕೊಡುಗೆ ನೀಡಿದ್ದಾರೆ. ಇದೀಗ 17 ವರ್ಷಗಳ ತಮ್ಮ ಸುದೀರ್ಘ ಐಪಿಎಲ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ.
