ಸೌತ್ ಆಫ್ರಿಕಾ ತಂಡಕ್ಕೆ ಗುಡ್ ಬೈ… 6 ತಿಂಗಳಲ್ಲೇ 27 ಕೋಟಿ ರೂ. ಗಳಿಸಿದ ಹೆನ್ರಿಕ್ ಕ್ಲಾಸೆನ್
Heinrich Klaasen: ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅದ್ಭುತ ಫಾರ್ಮ್ನಲ್ಲಿದ್ದಾಗಲೇ ದಿಢೀರ್ ನಿವೃತ್ತಿ ಘೋಷಿಸಿದ್ದ ಕ್ಲಾಸೆನ್ ಇದೀಗ ವಿಶ್ವದ ಪ್ರಮುಖ ಲೀಗ್ಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ಮುಂಬರುವ ಸೌತ್ ಆಫ್ರಿಕಾ ಲೀಗ್ ಹರಾಜಿನಲ್ಲೂ ಕಾಣಿಸಿಕೊಳ್ಳಲಿದ್ದಾರೆ.
Updated on:Aug 26, 2025 | 3:25 PM

ಕೆಲ ತಿಂಗಳುಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಸೌತ್ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ (Heinrich Klaasen) ಇದೀಗ ವಿಶ್ವದ ಪ್ರಮುಖ ಲೀಗ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಕಳೆದ 6 ತಿಂಗಳಲ್ಲಿ ಫ್ರಾಂಚೈಸಿ ಲೀಗ್ ಆಡಿ ಕ್ಲಾಸೆನ್ ಸಂಪಾದಿಸಿರುವುದು ಬರೋಬ್ಬರಿ 27 ಕೋಟಿ ರೂ.

ಹೌದು, ಸೌತ್ ಆಫ್ರಿಕಾ ತಂಡಕ್ಕೆ ಗುಡ್ ಬೈ ಹೇಳಿರುವ ಹೆನ್ರಿಕ್ ಕ್ಲಾಸೆನ್ ಇಂಡಿಯನ್ ಪ್ರೀಮಿಯರ್ ಲೀಗ್, ದಿ ಹಂಡ್ರೆಡ್ ಲೀಗ್, ಮೇಜರ್ ಲೀಗ್ ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಹೀಗೆ ಕಳೆದ ಆರು ತಿಂಗಳಲ್ಲಿ ಮೂರು ಲೀಗ್ ಆಡಿರುವ ಕ್ಲಾಸೆನ್ 27 ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ.

ಐಪಿಎಲ್ನಲ್ಲಿ ಕಳೆದ ಕೆಲ ವರ್ಷಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿರುವ ಹೆನ್ರಿಕ್ ಕ್ಲಾಸೆನ್ ಅವರ ಪ್ರಸ್ತುತ ಸಂಭಾವನೆ 23 ಕೋಟಿ ರೂ. ಅಂದರೆ ಕಳೆದ ಬಾರಿ ಐಪಿಎಲ್ ಆಡಿದ್ದಕ್ಕಾಗಿ ಕ್ಲಾಸೆನ್ ಬರೋಬ್ಬರಿ 23 ಕೋಟಿ ರೂ. ಪಡೆದುಕೊಂಡಿದ್ದಾರೆ.

ಇನ್ನು ಐಪಿಎಲ್ ಬೆನ್ನಲ್ಲೇ ಹೆನ್ರಿಕ್ ಕ್ಲಾಸೆನ್ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯತ್ತ ಮುಖ ಮಾಡಿದ್ದರು. ಈ ಟೂರ್ನಿಯಲ್ಲಿ ಸಿಯಾಟಲ್ ಓರ್ಕಾಸ್ ತಂಡದ ಪರ ಕಣಕ್ಕಿಳಿದಿದ್ದ ಕ್ಲಾಸೆನ್ ಸುಮಾರು 1.53 ಕೋಟಿ ರೂ. ಸಂಭಾವನೆ ಪಡೆದಿದ್ದರು.

ಇದೀಗ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಹೆನ್ರಿಕ್ ಕ್ಲಾಸೆನ್ ಓವಲ್ ಇನ್ವಿನ್ಸಿಬಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಈ ಫ್ರಾಂಚೈಸಿ ಸೌತ್ ಆಫ್ರಿಕಾದ ಸ್ಫೋಟಕ ದಾಂಡಿಗನಿಗೆ ನೀಡುತ್ತಿರುವುದು ಬರೋಬ್ಬರಿ 2.32 ಕೋಟಿ ರೂ.

ಅಂದರೆ ಐಪಿಎಲ್, ಮೇಜರ್ ಲೀಗ್ ಹಾಗೂ ದಿ ಹಂಡ್ರೆಡ್ ಲೀಗ್ ಮೂಲಕವೇ ಹೆನ್ರಿಕ್ ಕ್ಲಾಸೆನ್ ಕೇವಲ 6 ತಿಂಗಳಲ್ಲಿ 27 ಕೋಟಿ ರೂ. ಸಂಪಾದಿಸಿದ್ದಾರೆ. ಅಷ್ಟೇ ಅಲ್ಲದೆ ಸೌತ್ ಅಫ್ರಿಕಾ ಟಿ20 ಲೀಗ್ನ ಹರಾಜಿನಲ್ಲಿ ಕಾಣಿಸಿಕೊಳ್ಳಲು ಕ್ಲಾಸೆನ್ ನಿರ್ಧರಿಸಿದ್ದಾರೆ. ಹೀಗಾಗಿ ಹೆನ್ರಿಕ್ ಕ್ಲಾಸೆನ್ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ. ಈ ಪೈಪೋಟಿಯೊಂದಿಗೆ ಅವರ ಕೋಟಿ ಗಳಿಕೆ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ.
Published On - 3:23 pm, Tue, 26 August 25
