SL vs ZIM: ಕೇವಲ ಎರಡಂಕಿಗೆ ಆಲೌಟ್; ಜಿಂಬಾಬ್ವೆ ವಿರುದ್ಧ ಹೀನಾಯವಾಗಿ ಸೋತ ಶ್ರೀಲಂಕಾ

SL vs ZIM: ಏಷ್ಯಾಕಪ್ 2025ಕ್ಕೆ ಸಿದ್ಧತೆ ನಡೆಸುತ್ತಿರುವ ಶ್ರೀಲಂಕಾ ತಂಡವು ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ 80 ರನ್‌ಗಳಿಗೆ ಆಲೌಟ್ ಆಗಿ ಅವಮಾನಕರ ಸೋಲುಂಡಿದೆ. ಜಿಂಬಾಬ್ವೆ ತಂಡ ಸುಲಭವಾಗಿ ಗೆಲುವು ಸಾಧಿಸಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದರೆ, ಜಿಂಬಾಬ್ವೆಯ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿದ್ದಾರೆ. ಈ ಸೋಲು ಶ್ರೀಲಂಕಾ ತಂಡಕ್ಕೆ ಎಚ್ಚರಿಕೆಯ ಸಂಕೇತವಾಗಿದೆ.

SL vs ZIM: ಕೇವಲ ಎರಡಂಕಿಗೆ ಆಲೌಟ್; ಜಿಂಬಾಬ್ವೆ ವಿರುದ್ಧ ಹೀನಾಯವಾಗಿ ಸೋತ ಶ್ರೀಲಂಕಾ
Sl Vs Zim

Updated on: Sep 06, 2025 | 10:30 PM

ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ನಡೆಯಲಿರುವ 2025 ರ ಏಷ್ಯಾಕಪ್​ಗೆ (Asia Cup 2025) ತಯಾರಿಯ ಭಾಗವಾಗಿ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾಗಶಃ ತಂಡಗಳು ಟಿ20 ಪಂದ್ಯಗಳನ್ನು ಆಡುತ್ತಿವೆ. ಇದರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಯುಎಇ ಹಾಗೂ ಶ್ರೀಲಂಕಾ ತಂಡಗಳು ಸೇರಿವೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಯುಎಇ ತಂಡಗಳು ತ್ರಿಕೋನ ಸರಣಿಯನ್ನು ಆಡುತ್ತಿದ್ದರೆ, ಇತ್ತ ಶ್ರೀಲಂಕಾ, ಜಿಂಬಾಬ್ವೆ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದರೆ, ಇದೀಗ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಸುಲಭ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಕೇವಲ 80 ರನ್‌ಗಳ ಅಲ್ಪ ಸ್ಕೋರ್‌ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ 15ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು.

ಮೇಲೆ ಹೇಳಿದಂತೆ ಹರಾರೆಯಲ್ಲಿ ನಡೆಯುತ್ತಿರುವ ಈ ಟಿ20 ಸರಣಿಯನ್ನು ಏಷ್ಯಾಕಪ್‌ಗೆ ಸಿದ್ಧತೆಯಾಗಿ ಶ್ರೀಲಂಕಾ ತಂಡ ನೋಡುತ್ತಿತ್ತು. ಚರಿತ್ ಅಸಲಂಕಾ ನಾಯಕತ್ವದ ಶ್ರೀಲಂಕಾ, ಮೊದಲ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸುವ ಮೂಲಕ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ಈ ತಂಡ ಇಷ್ಟೊಂದು ಕೆಟ್ಟದಾಗಿ ಸೋಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಸರಣಿಯಲ್ಲಿ ಜಿಂಬಾಬ್ವೆ ಪಂದ್ಯ ಗೆಲ್ಲುವ ಸಾಧ್ಯತೆ ಮತ್ತು ಭರವಸೆ ಎಲ್ಲರಿಗೂ ಇದ್ದಿರಬೇಕು, ಆದರೆ ಶ್ರೀಲಂಕಾ ತಂಡ ಇಷ್ಟೊಂದು ಕೆಟ್ಟದಾಗಿ ಸೋಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಶ್ರೀಲಂಕಾದ ಎರಡನೇ ಕನಿಷ್ಠ ಸ್ಕೋರ್

ಈ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾದ ವಿಕೆಟ್​ಗಳು ಎರಡನೇ ಓವರ್‌ನಿಂದಲೇ ಬೀಳಲು ಪ್ರಾರಂಭಿಸಿದವು. ಅಂತಿಮವಾಗಿ 18 ನೇ ಓವರ್‌ನಲ್ಲಿ ಇಡೀ ತಂಡ ಆಲೌಟ್ ಆಯಿತು. ಶ್ರೀಲಂಕಾದ 11 ಬ್ಯಾಟ್ಸ್‌ಮನ್‌ಗಳಲ್ಲಿ 8 ಮಂದಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಕಮಿಲ್ ಮಿಶ್ರಾ 20 ಎಸೆತಗಳಲ್ಲಿ ಅತ್ಯಧಿಕ 20 ರನ್ ಗಳಿಸಿದರೆ, ನಾಯಕ ಅಸಲಂಕಾ 23 ಎಸೆತಗಳಲ್ಲಿ 18 ರನ್ ಗಳಿಸಿದರು.

ಶ್ರೀಲಂಕಾದ ದುಸ್ಥಿತಿಯಲ್ಲಿ ಜಿಂಬಾಬ್ವೆ ನಾಯಕ ಸಿಕಂದರ್ ರಾಝ ದೊಡ್ಡ ಪಾತ್ರ ವಹಿಸಿದರು. ಸಿಕಂದರ್ ಪ್ರಮುಖ 3 ವಿಕೆಟ್ ಕಬಳಿಸಿದರೆ, ಯುವ ವೇಗಿ ಬ್ರಾಡ್ ಇವಾನ್ಸ್ ಕೂಡ 3 ವಿಕೆಟ್‌ಗಳನ್ನು ಪಡೆದರು. ಇದು ಟಿ20 ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಎರಡನೇ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಶ್ರೀಲಂಕಾದ ಅತ್ಯಂತ ಕಡಿಮೆ ಸ್ಕೋರ್ 77 ರನ್‌ಗಳಾಗಿದ್ದು, ಇದು 2024 ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಂದಿತು.

ಜಿಂಬಾಬ್ವೆಗೆ 5 ವಿಕೆಟ್‌ಗಳ ಜಯ

ಇಲ್ಲಿಂದ ಜಿಂಬಾಬ್ವೆಯ ಗೆಲುವು ಖಚಿತವೆನಿಸಿದರೂ ಅದಕ್ಕಾಗಿ ಸ್ವಲ್ಪ ಕಷ್ಟಪಡಬೇಕಾಯಿತು. ಇತ್ತ ಶ್ರೀಲಂಕಾ ಕೂಡ ಸುಲಭವಾಗಿ ಗುರಿ ತಲುಪಲು ಬಿಡಲಿಲ್ಲ. ಅನುಭವಿ ವೇಗಿ ದುಷ್ಮಂತ ಚಮೀರ 4 ಓವರ್‌ಗಳಲ್ಲಿ ಕೇವಲ 19 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ, ಜಿಂಬಾಬ್ವೆ ಈ ಗುರಿಯನ್ನು ತಲುಪಲು 14.2 ಓವರ್‌ಗಳನ್ನು ತೆಗೆದುಕೊಂಡಿತ್ತಾದರೂ 5 ವಿಕೆಟ್‌ಗಳನ್ನು ಸಹ ಕಳೆದುಕೊಂಡರು. ತಂಡದ ಪರ ತಶಿಂಗಾ ಮುಸ್ಕಿವಾ ಅವರು 14 ಎಸೆತಗಳಲ್ಲಿ 21 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇದರೊಂದಿಗೆ ಸರಣಿ 1-1ರಿಂದ ಸಮಗೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ