Duleep Trophy 2025: ಉತ್ತರ ವಲಯ ತಂಡಕ್ಕೆ ಆಸರೆಯಾದ ಜಮ್ಮು ಕಾಶ್ಮೀರದ ಆಟಗಾರ
Duleep Trophy Semifinals 2025:2025 ರ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರ ವಲಯ ತಂಡ 536 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದೆ. ಶುಭಂ ಖಜುರಿಯಾ ಅವರ ಅದ್ಭುತ ಶತಕದ ಸಹಾಯದಿಂದ ಉತ್ತರ ವಲಯ ತಂಡವು ಸಂಕಷ್ಟದಿಂದ ಪಾರಾಗಿದೆ. ನಿಶಾಂತ್ ಸಿಂಧು ಅವರೊಂದಿಗಿನ ಅವರ ಜೊತೆಯಾಟವು ತಂಡಕ್ಕೆ ಉತ್ತಮ ಆಧಾರವನ್ನು ಒದಗಿಸಿತು. ಮೂರನೇ ದಿನದ ಅಂತ್ಯದ ವೇಳೆಗೆ ಉತ್ತರ ವಲಯ 5 ವಿಕೆಟ್‌ಗಳ ನಷ್ಟಕ್ಕೆ 278 ರನ್ ಗಳಿಸಿದೆ.

2025 ರ ದುಲೀಪ್ ಟ್ರೋಫಿಯ ಸೆಮಿಫೈನಲ್ (Duleep Trophy Semifinals 2025) ಸುತ್ತು ಮುಗಿಯುವ ಹಂತಕ್ಕೆ ಬಂದಿದೆ. ಈಗಾಗಲೇ ಮೂರು ದಿನಗಳ ಆಟಗ ಮುಗಿದಿದ್ದು ಯಾವ ಎರಡು ತಂಡಗಳು ಫೈನಲ್ಗೆ ಪ್ರವೇಶಿಸಬಹುದು ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಏಕಂದರೆ ನಾಲ್ಕು ತಂಡಗಳ ಕಡೆಯಿಂದಲೂ ಹೋರಾಟದ ಪ್ರದರ್ಶನ ಕಂಡುಬಂದಿದೆ. ಅದರಲ್ಲೂ ದಕ್ಷಿಣ ವಲಯ ಹಾಗೂ ಉತ್ತರ ವಲಯ ತಂಡಗಳ ನಡುವಿನ ಕದನ ತೀವ್ರ ಕುತೂಹಲ ಕೆರಳಿಸಿದ್ದು ದಕ್ಷಿಣ ವಲಯ ಕಲೆಹಾಕಿರುವ 536 ರನ್‌ಗಳ ಬೆನ್ನಟ್ಟಿರುವ ಉತ್ತರ ವಲಯ ತಂಡದ ಪರ ಆರಂಭಿಕ ಆಟಗಾರ ಶುಭಂ ಖಜುರಿಯಾ (Shubham Khajuria) ಅಜೇಯ ಶತಕ ಬಾರಿಸಿದ್ದಾರೆ. ಅಲ್ಲದೆ ತಂಡದ ಕಳಪೆ ಆರಂಭದ ಹೊರತಾಗಿಯೂ 21 ವರ್ಷದ ನಿಶಾಂತ್ ಸಿಂಧು ಅವರೊಂದಿಗೆ ಉತ್ತಮ ಜೊತೆಯಾಟವನ್ನು ಕಟ್ಟಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಶುಭಂ ಅದ್ಭುತ ಶತಕ
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದ ಮೂರನೇ ದಿನದಂದು, ಉತ್ತರ ವಲಯದ ಆರಂಭಿಕ ಆಟಗಾರ ಶುಭಂ ಸ್ಮರಣೀಯ ಶತಕ ಬಾರಿಸಿದರು. 536 ರನ್‌ಗಳ ಗುರಿ ಬೆನ್ನಟ್ಟಿದ ಉತ್ತರ ವಲಯ ತಂಡ ಮೂರನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 38 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಮೂರನೇ ವಿಕೆಟ್ ಕೂಡ 101 ರನ್‌ಗಳಿಗೆ ಪತನವಾಯಿತು.
ಈ ವೇಳೆ ಜೊತೆಯಾದ ಶುಭಂ ಮತ್ತು ನಿಶಾಂತ್ ಸಿಂಧು ನಾಲ್ಕನೇ ವಿಕೆಟ್‌ಗೆ 171 ರನ್‌ಗಳ ಪಾಲುದಾರಿಕೆಯನ್ನು ನೀಡುವ ಮೂಲಕ ತಂಡವನ್ನು ಉತ್ತಮ ಸ್ಥಿತಿಯಲ್ಲಿಟ್ಟರು. ಈ ಸಮಯದಲ್ಲಿ, ಶುಭಂ ತಮ್ಮ ಶತಕವನ್ನೂ ಪೂರೈಸಿದರು, ಇದು ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರ 8 ನೇ ಶತಕವಾಗಿದೆ. ಮೂರನೇ ದಿನದ ಅಂತ್ಯದ ವೇಳೆಗೆ, ಈ ಬಲಗೈ ಬ್ಯಾಟ್ಸ್‌ಮನ್ 245 ಎಸೆತಗಳಲ್ಲಿ 20 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸೇರಿದಂತೆ 128 ರನ್ ಬಾರಿಸಿದ್ದಾರೆ. ಶುಭಂ ಅವರ ಈ ಇನ್ನಿಂಗ್ಸ್‌ನ ಆಧಾರದ ಮೇಲೆ, ಉತ್ತರ ವಲಯ ತಂಡವು ಮೂರನೇ ದಿನದ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 278 ರನ್ ಕಲೆಹಾಕಿದೆ.
ಜಮ್ಮು ಮತ್ತು ಕಾಶ್ಮೀರದ ಆಟಗಾರ ಶುಭಂ
29 ವರ್ಷದ ಶುಭಂ ದೇಶೀಯ ಕ್ರಿಕೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಪ್ರಮುಖ ಆಟಗಾರ. ಜಮ್ಮು ಮೂಲದ ಖಜುರಿಯಾ, ರಣಜಿ ಟ್ರೋಫಿ ಸೇರಿದಂತೆ ಒಟ್ಟು 74 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 4158 ರನ್ ಬಾರಿಸಿದ್ದು, ಈ ಪಂದ್ಯಕ್ಕೂ ಮೊದಲು 7 ಶತಕಗಳನ್ನು ಸಿಡಿಸಿದ್ದರು. ಕಳೆದ ರಣಜಿ ಟ್ರೋಫಿ ಆವೃತ್ತಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪರ ಅಮೋಘ ಪ್ರದರ್ಶನ ನೀಡಿದ್ದ ಶುಭಂ ಆಡಿದ 8 ಪಂದ್ಯಗಳಲ್ಲಿ 679 ರನ್ ಬಾರಿಸಿದ್ದರು. ಇದರಲ್ಲಿ 1 ಶತಕ ಮತ್ತು 4 ಅರ್ಧಶತಕಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
