ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆದ ಕನ್ನಡಿಗನಿಗೆ ದುಲೀಪ್ ಟ್ರೋಫಿಯಿಂದ ಗೇಟ್ಪಾಸ್
Duleep Trophy Semis:ದುಲೀಪ್ ಟ್ರೋಫಿ ಸೆಮಿಫೈನಲ್‌ಗೆ ದಕ್ಷಿಣ ವಲಯ ತಂಡವನ್ನು ಘೋಷಿಸಲಾಗಿದೆ. ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಅವರನ್ನು ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ತಂಡದಿಂದ ಕೈಬಿಡಲಾಗಿದೆ. ಮೊಹಮ್ಮದ್ ಅಜರುದ್ದೀನ್ ನಾಯಕತ್ವ ವಹಿಸಿದ್ದಾರೆ. ಸಾಯಿ ಕಿಶೋರ್ ಅವರನ್ನು ಬದಲಿಸಿ ಅಂಕಿತ್ ಶರ್ಮಾ ಅವರಿಗೆ ಅವಕಾಶ ನೀಡಲಾಗಿದೆ. ವೈಶಾಕ್ ಮತ್ತು ಸಾಯಿ ಕಿಶೋರ್ ಅವರ ಅನುಪಸ್ಥಿತಿಯು ದಕ್ಷಿಣ ವಲಯ ತಂಡಕ್ಕೆ ಹೊಡೆತ ನೀಡಿದೆ.

ದುಲೀಪ್ ಟ್ರೋಫಿಯ (Duleep Trophy) ಸೆಮಿಫೈನಲ್ ಸುತ್ತು ಇದೇ ಸೆಪ್ಟೆಂಬರ್ 4 ರಿಂದ ಆರಂಭವಾಗಲಿದೆ. ಈ ಸುತ್ತಿಗೆ 4 ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಮೊದಲ ಸೆಮಿಫೈನಲ್‌ನಲ್ಲಿ, ಶಾರ್ದೂಲ್ ಠಾಕೂರ್ ತಂಡವು ರಜತ್ ಪಟಿದಾರ್ ತಂಡವನ್ನು ಎದುರಿಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ, ಉತ್ತರ ವಲಯ ತಂಡ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ. ಇದೀಗ ಈ ಸುತ್ತಿಗೆ ದಕ್ಷಿಣ ವಲಯ ತಂಡವನ್ನು ಸಹ ಘೋಷಿಸಲಾಗಿದೆ. ಆದರೆ ಈ ತಂಡದಿಂದ ಕನ್ನಡಿಗ ವೈಶಾಕ್ ವಿಜಯ್ಕುಮಾರ್ (Vyshak Vijay Kumar) ಅವರನ್ನು ಕೈಬಿಡಲಾಗಿದೆ. ವರದಿಗಳ ಪ್ರಕಾರ, ವೈಶಾಕ್ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಫಿಟ್‌ನೆಸ್ ಪರೀಕ್ಷೆಯಲ್ಲಿ ವೈಶಾಕ್ ಫೇಲ್
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡುವ ಮೊದಲು ಎಲ್ಲಾ ಆಟಗಾರರು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ಯೋಯೋ ಪರೀಕ್ಷೆ ಮತ್ತು ಬ್ರಾಂಕೊ ಪರೀಕ್ಷೆ ಸೇರಿವೆ, ಇದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಆದಾಗ್ಯೂ ವೈಶಾಕ್ ಯಾವ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಅವರನ್ನು ತಂಡದಿಂದ ಕೈಬಿಟ್ಟಿರುವುದು ದಕ್ಷಿಣ ವಲಯ ತಂಡಕ್ಕೆ ಹೊಡೆತ ನೀಡಿದೆ. ಏಕೆಂದರೆ ವೈಶಾಕ್ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದುವರೆಗೆ ಆಡಿರುವ 26 ಪ್ರಥಮ ದರ್ಜೆ ಪಂದ್ಯಗಳಲ್ಲಿ 103 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅಜರುದ್ದೀನ್ ನಾಯಕ
ದಕ್ಷಿಣ ವಲಯ ತಂಡದ ನಾಯಕತ್ವವನ್ನು ಕೇರಳದ ಮೊಹಮ್ಮದ್ ಅಜರುದ್ದೀನ್ ಅವರಿಗೆ ವಹಿಸಲಾಗಿದೆ. ಈ ಹಿಂದೆ ಈ ಜವಾಬ್ದಾರಿಯನ್ನು ತಿಲಕ್ ವರ್ಮಾ ಅವರಿಗೆ ನೀಡಲಾಗಿತ್ತು. ಆದರೆ ತಿಲಕ್ ಏಷ್ಯಾಕಪ್ ತಂಡದಲ್ಲಿರುವುದರಿಂದ ಈಗ ಈ ಜವಾಬ್ದಾರಿಯನ್ನು ಅಜರುದ್ದೀನ್ ಅವರಿಗೆ ನೀಡಲಾಗಿದೆ. ನಾರಾಯಣ್ ಜಗದೀಶನ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ವೈಶಾಕ್ ಮಾತ್ರವಲ್ಲದೆ ತಮಿಳುನಾಡು ಸ್ಪಿನ್ನರ್ ಸಾಯಿ ಕಿಶೋರ್ ಅವರನ್ನು ಸಹ ಇಂಜುರಿಯಿಂದಾಗಿ ಸೆಮಿಫೈನಲ್‌ನಿಂದ ಹೊರಗಿಡಲಾಗಿದೆ. ತಿಲಕ್ ವರ್ಮಾ ಬದಲಿಗೆ ಶೇಖ್ ರಶೀದ್‌ಗೆ ಮತ್ತು ಸಾಯಿ ಕಿಶೋರ್ ಬದಲಿಗೆ ಅಂಕಿತ್ ಶರ್ಮಾಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ
ಮೊಹಮ್ಮದ್ ಅಜರುದ್ದೀನ್ (ನಾಯಕ-ಉಪನಾಯಕ), ತನ್ಮಯ್ ಅಗರ್ವಾಲ್, ದೇವದತ್ತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ನಾರಾಯಣ್ ಜಗದೀಸನ್, ಟಿ ವಿಜಯ್, ಅಂಕಿತ್ ಶರ್ಮಾ, ತನಯ್ ತ್ಯಾಗರಾಜನ್, ಎಂಡಿ ನಿಧೀಶ್, ರಿಕಿ ಭುಯಿ, ಬೆಸಿಲ್ ಎನ್‌ಪಿ, ಗುರ್ಜಪ್ನೀತ್ ಸಿಂಗ್, ಸ್ನೇಹಲ್ ಕೌತಾಂಕರ್, ಮತ್ತು ವಾಸುಕಿ ಕೌಶಿಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
