ZIM vs SL: ಏಕದಿನ ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ ದಂಡದ ಬರೆ ಎಳೆದ ಐಸಿಸಿ
Sri Lanka vs Zimbabwe ODI series: ಚರಿತ ಅಸಲಂಕಾ ನೇತೃತ್ವದ ಶ್ರೀಲಂಕಾ ತಂಡವು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದು ಕ್ಲೀನ್ ಸ್ವೀಪ್ ಮಾಡಿದೆ. ಆದರೆ, ನಿಧಾನ ಓವರ್ ರೇಟ್‌ಗಾಗಿ ಐಸಿಸಿ ದಂಡ ವಿಧಿಸಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ 2019 ರ ನಂತರ ವಿದೇಶದಲ್ಲಿ ಮೊದಲ ಏಕದಿನ ಸರಣಿ ಗೆದ್ದಿದೆ. ಟಿ20 ಸರಣಿ ಸೆಪ್ಟೆಂಬರ್ 3 ರಿಂದ ಆರಂಭವಾಗಲಿದೆ.

ಚರಿತಾ ಅಸಲಂಕಾ ನೇತೃತ್ವದ ಶ್ರೀಲಂಕಾ ತಂಡವು ಜಿಂಬಾಬ್ವೆ ಪ್ರವಾಸವನ್ನು ಅದ್ಭುತವಾಗಿ ಆರಂಭಿಸಿದೆ. ಉಭಯ ತಂಡಗಳ ನಡುವೆ ನಡೆದ 2 ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ ತಂಡ 2-0 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಆತಿಥೇಯ ಜಿಂಬಾಬ್ವೆ ತಂಡವನ್ನು ಕ್ಲೀನ್ ಸ್ವೀಪ್ ಮಾಡಿತು. ಆಗಸ್ಟ್ 29 ರಂದು ನಡೆದ ಮೊದಲ ಏಕದಿನ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಗೆದ್ದುಕೊಂಡಿದ್ದ ಶ್ರೀಲಂಕಾ ಎರಡನೇ ಏಕದಿನ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು ಏಕಪಕ್ಷೀಯ ಅಂತರದಿಂದ ವಶಪಡಿಸಿಕೊಂಡಿತು. ಆದಾಗ್ಯೂ, ಎರಡನೇ ಪಂದ್ಯದ ಸಮಯದಲ್ಲಿ ಐಸಿಸಿ ನಿಯಮ ಉಲ್ಲಂಘಿಸಿದ ಶ್ರೀಲಂಕಾ ತಂಡಕ್ಕೆ ದಂಡದ ಬರೆ ಎಳೆಯಲಾಗಿದೆ.
ಸ್ಲೋ ಓವರ್ ರೇಟ್ ನಿಯಮ ಉಲ್ಲಂಘಿಸಿದ ಶ್ರೀಲಂಕಾ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ. ಶ್ರೀಲಂಕಾ ಕ್ರಿಕೆಟ್ ತಂಡವು ಮೊದಲ ಪಂದ್ಯದಲ್ಲಿಯೂ ಈ ನಿಯಮವನ್ನು ಉಲ್ಲಂಘಿಸಿತ್ತು. ಹೀಗಾಗಿ ಶ್ರೀಲಂಕಾ ಆಟಗಾರರ ವಿರುದ್ಧ ಐಸಿಸಿ ಶಿಸ್ತು ಕ್ರಮ ಕೈಗೊಂಡಿದೆ. ಆದ್ದರಿಂದ, ಲಂಕಾ ತಂಡದ ಆಟಗಾರರು ಪಂದ್ಯದ ಒಟ್ಟು ಸಂಭಾವನೆಯ 5 ಪ್ರತಿಶತದಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
ನಿಗದಿತ ಸಮಯದಲ್ಲಿ ಶ್ರೀಲಂಕಾ 1 ಓವರ್ ಹಿಂದಿತ್ತು. ಹೀಗಾಗಿ ಶ್ರೀಲಂಕಾ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಅನ್ನು ಉಲ್ಲಂಘಿಸಿದೆ. ಆರ್ಟಿಕಲ್ 2.22 ರ ಪ್ರಕಾರ, ಒಂದು ತಂಡವು ನಿಗದಿತ ಸಮಯದಲ್ಲಿ ತನ್ನ ಓವರ್‌ಗಳನ್ನು ಬೌಲ್ ಮಾಡಲು ವಿಫಲವಾದರೆ, ಪ್ರತಿ ಆಟಗಾರನಿಗೆ ಪ್ರತಿ ಓವರ್‌ಗೆ ಒಟ್ಟು ಪಂದ್ಯ ಶುಲ್ಕದ 5 ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ. ಶ್ರೀಲಂಕಾ ನಾಯಕ ಚರಿತ ಅಸಲಂಕಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಈ ವಿಷಯದಲ್ಲಿ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
ಏಕದಿನ ಸರಣಿ ಗೆದ್ದ ಲಂಕಾ
ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದ ಕೊನೆಯ ಓವರ್‌ನ ಮೊದಲ 3 ಎಸೆತಗಳಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಶ್ರೀಲಂಕಾದ ಬೌಲರ್ ದಿಲ್ಶನ್ ಮಧುಶಂಕ ಹ್ಯಾಟ್ರಿಕ್ ವಿಕೆಟ್ ಪಡೆದರು. ಈ ಮೂಲಕ ಶ್ರೀಲಂಕಾ 7 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ನಂತರ ಆಗಸ್ಟ್ 31 ರಂದು ನಡೆದ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಶ್ರೀಲಂಕಾ ಸರಣಿಯನ್ನು ಗೆದ್ದುಕೊಂಡಿತು. ಈ ಮೂಲಕ ಶ್ರೀಲಂಕಾ 2019 ರ ನಂತರ ವಿದೇಶದಲ್ಲಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆದ್ದ ಸಾಧನೆ ಮಾಡಿತು.
ಟಿ20 ಸರಣಿ ಆರಂಭ
ಏತನ್ಮಧ್ಯೆ, ಜಿಂಬಾಬ್ವೆ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯು ಸೆಪ್ಟೆಂಬರ್ 3 ರಿಂದ ನಡೆಯಲಿದೆ. ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿವೆ. ಎರಡನೇ ಪಂದ್ಯವು ಸೆಪ್ಟೆಂಬರ್ 6 ರಂದು ನಡೆಯಲಿದ್ದು, ಅಂತಿಮ ಪಂದ್ಯವನ್ನು ಸೆಪ್ಟೆಂಬರ್ 7 ರಂದು ಆಯೋಜಿಸಲಾಗಿದೆ. ಈ ಎಲ್ಲಾ ಮೂರು ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
