
ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್ಗೆ (T20 World Cup 2026) ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಈ ಟೂರ್ನಿ ಆರಂಭಕ್ಕೂ ಮುನ್ನವೇ ವಿವಾದಗಳು ಹುಟ್ಟಿಕೊಂಡಿವೆ. ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಪಂದ್ಯಾವಳಿಯಿಂದ ಹಿಂದೆ ಸರಿದರೆ ಅದರ ಬದಲಿಗೆ ಸ್ಕಾಟ್ಲೆಂಡ್ಗೆ ಆಡುವ ಅವಕಾಶ ಸಿಕ್ಕಿದೆ. ಇತ್ತ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದಕ್ಕೆ ಕೆರಳಿರುವ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಹಿಂದೆ ಸರಿಯುವ ಮಾತನಾಡುತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi), ತಮ್ಮ ಸರ್ಕಾರ ಅನುಮತಿ ನೀಡಿದರೆ ಮಾತ್ರ ಟಿ20 ವಿಶ್ವಕಪ್ ಆಡುವುದಾಗಿ ಹೇಳಿದ್ದಾರೆ. ಒದೀಗ ಪಾಕಿಸ್ತಾನದ ಈ ನಾಟಕಗಳಿಗೆ ಸರಿಯಾಗಿ ಟಕ್ಕರ್ ನೀಡಿರುವ ಭಾರತದ ಮಾಜಿ ಆಯ್ಕೆದಾರ ಮತ್ತು 1983 ರ ವಿಶ್ವಕಪ್ ಹೀರೋ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth), ಭಾರತದ ಬ್ಯಾಟಿಂಗ್ ನೋಡಿ ಹೆದರಿರುವ ಪಾಕಿಸ್ತಾನ ಈ ರೀತಿಯ ನಾಟಕ ಆರಂಭಿಸಿದೆ ಎಂದಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, ‘ಪಾಕಿಸ್ತಾನದ ಆಟದ ಶೈಲಿ ಮತ್ತು ಮಂಡಳಿಯ ವಿಧಾನವನ್ನು ಟೀಕಿಸಿದರು. ಟೀಂ ಇಂಡಿಯಾ ಈಗ ಆಡುತ್ತಿರುವ ವಿನಾಶಕಾರಿ ಬ್ಯಾಟಿಂಗ್‌ಗೆ ಪಾಕಿಸ್ತಾನ ಹೆದರುತ್ತಿದೆ. ಕಳೆದ ಪಂದ್ಯಗಳಲ್ಲಿ ಭಾರತ ತಂಡ ಕೇವಲ 10 ಓವರ್‌ಗಳಲ್ಲಿ 150 ರನ್ ಕಲೆಹಾಕಿದೆ. ನಾನು ಅಂತಹ ಪವರ್ ಹಿಟಿಂಗ್ ಅನ್ನು ಎಂದಿಗೂ ನೋಡಿರಲಿಲ್ಲ. ಭಾರತ ತಂಡ ಕೊಲಂಬೊದಲ್ಲಿ ಸಿಕ್ಸ್ ಬಾರಿಸಿದ್ದರೆ, ಅದು ಚೆನ್ನೈನಲ್ಲಿ ಬಂದು ಬೀಳಲಿದೆ. ತಂಡದ ಬ್ಯಾಟ್ಸ್ಮನ್ಗಳು ಹಾಗೆ ಹೊಡೆಯುತ್ತಿದ್ದಾರೆ. ಇದನ್ನು ನೋಡಿದ ಪಾಕಿಸ್ತಾನ ತಂಡ ತುಂಬಾ ಹೆದರುತ್ತಿದೆ. ನೀವು ಭಾರತ ಬ್ಯಾಟಿಂಗ್ ನೋಡಿ ಹೆದರುತ್ತಿದ್ದರೆ, ಟಿ20 ವಿಶ್ವಕಪ್ ಆಡಲು ಬರಬೇಡಿ, ಯಾರೂ ನಿಮ್ಮನ್ನು ಒತ್ತಾಯಿಸುತ್ತಿಲ್ಲ. ನೀವು ಬಂದರೆ, ನೀವು ಖಂಡಿತವಾಗಿಯೂ ಟೀಂ ಇಂಡಿಯಾ ವಿರುದ್ಧ ಕೆಟ್ಟದಾಗಿ ಸೋಲುತ್ತೀರಿ’ ಎಂದಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನ ಮಂಡಳಿಯ ದ್ವಂದ್ವ ನಿಲುವಿನ ಬಗ್ಗೆಯೂ ಟೀಕೆಗಳಿವೆ. ಒಂದೆಡೆ, ನಖ್ವಿ ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಪಿಸಿಬಿ, ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡವನ್ನು ತರಾತುರಿಯಲ್ಲಿ ಘೋಷಿಸಿದೆ. ಆದಾಗ್ಯೂ, ಈ ತಂಡವನ್ನು ಘೋಷಿಸಿದ ನಂತರವೂ, ಸರ್ಕಾರದಿಂದ ಹಸಿರು ನಿಶಾನೆ ಸಿಗುವವರೆಗೆ ಟಿ20 ವಿಶ್ವಕಪ್ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಮ್ಯಾನೇಜ್‌ಮೆಂಟ್ ಹೇಳುತ್ತಿದೆ. ಇದರರ್ಥ ಪಾಕಿಸ್ತಾನ ಭಾರತದ ಮೇಲೆ ಒತ್ತಡ ಹೇರಲು ಇಂತಹ ಮೈಂಡ್ ಗೇಮ್ ಆಡುತ್ತಿದೆ ಎಂಬುದು ಕ್ರೀಡಾ ವಿಶ್ಲೇಷಕರ ಅಭಿಪ್ರಾಯವಾಗಿದೆ.
T20 World Cup 2026: ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ
ಪ್ರಸ್ತುತ ಪಾಕಿಸ್ತಾನ ಸರ್ಕಾರ ಮತ್ತು ಪಿಸಿಬಿ ಅಧ್ಯಕ್ಷರ ನಡುವೆ ಮಾತುಕತೆ ನಡೆಯುತ್ತಿದೆ. ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಿದರೆ ಐಸಿಸಿಯಿಂದ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಪಾಕಿಸ್ತಾನದ ಈ ನಡೆಯನ್ನು ವ್ಯಂಗ್ಯ ಮಾಡಿರುವ ಶ್ರೀಕಾಂತ್, ‘ಪಾಕಿಸ್ತಾನದ ಬೆದರಿಕೆಗಳಿಗೆ ಗಮನ ಕೊಡಬೇಕಾಗಿಲ್ಲ. ಟೀಂ ಇಂಡಿಯಾ ಮೈದಾನದಲ್ಲಿ ತನ್ನ ವಿಶ್ವ ದರ್ಜೆಯ ಫಾರ್ಮ್ ಅನ್ನು ಪ್ರದರ್ಶಿಸುತ್ತದೆ ಎಂಬ ವಿಶ್ವಾಸ ನನಗಿದೆ ಸರಳ ಭಾಷೆಯಲ್ಲಿ ಹೇಳುವುದಾದರೆ, ಪಾಕಿಸ್ತಾನವು ಆಡಲು ಸಾಧ್ಯವಾಗದ ಕಾರಣ ಮತ್ತು ಸೋಲಿನ ಭಯದಿಂದಾಗಿ ಅಂತಹ ನೆಪಗಳನ್ನು ಹುಡುಕುತ್ತಿದೆ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ