Stuart Broad: 6 ಸಿಕ್ಸ್​ಗಿಂತ 600 ವಿಕೆಟ್​ ಮೇಲು..!

| Updated By: ಝಾಹಿರ್ ಯೂಸುಫ್

Updated on: Aug 01, 2023 | 2:27 PM

Stuart Broad Records: ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವದ 2ನೇ ವೇಗದ ಬೌಲರ್​ ಎಂಬ ವಿಶ್ವ ದಾಖಲೆ ಕೂಡ ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿದೆ.

Stuart Broad: 6 ಸಿಕ್ಸ್​ಗಿಂತ 600 ವಿಕೆಟ್​ ಮೇಲು..!
Stuart Broad
Follow us on

ಸೆಪ್ಟೆಂಬರ್ 19, 2007…ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (Stuart Broad) ಅವರ  ಓವರ್​ನಲ್ಲಿ ಯುವರಾಜ್ ಸಿಂಗ್ ಸತತ 6 ಸಿಕ್ಸ್​ ಸಿಡಿಸಿದ್ದರು. ಈ ಆರು ಸಿಕ್ಸ್​ಗಳೊಂದಿಗೆ ಯುವರಾಜ್ ಸಿಂಗ್ ವಿಶ್ವ ದಾಖಲೆ ನಿರ್ಮಿಸಿದರು…ಮರುದಿನ ಎಲ್ಲಾ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಯುವರಾಜ್ ಸಿಂಗ್ ಜೊತೆಗೆ 21 ವರ್ಷದ ಯುವ ವೇಗಿಯ ಫೋಟೋಗಳು ರಾರಾಜಿಸಿದ್ದವು. ಅಲ್ಲಿಗೆ ಬಹುತೇಕರು ಸ್ಟುವರ್ಟ್ ಬ್ರಾಡ್ ಅವರ ಕ್ರಿಕೆಟ್ ಕೆರಿಯರ್ ಕೂಡ ಮುಗಿಯಿತು ಎಂದೇ ಷರಾ ಬರೆದಿದ್ದರು.

ಆದರೆ ಇದಾಗಿ ಬರೋಬ್ಬರಿ 16 ವರ್ಷಗಳ ಬಳಿಕವಷ್ಟೇ ಸ್ಟುವರ್ಟ್ ಬ್ರಾಡ್ ತಮ್ಮ ಕೆರಿಯರ್ ಮುಗಿಸಿದ್ದಾರೆ. ಅದು ಕೂಡ ಅವರ ನಿರ್ಧಾರದಂತೆ. ಅಂದರೆ ಈಗಲೂ ಬ್ರಾಡ್​ನಂತಹ ವೇಗದ ಬೌಲರ್​ನ ಅವಶ್ಯಕತೆ ಇಂಗ್ಲೆಂಡ್​ ತಂಡಕ್ಕಿದೆ. ಏಕೆಂದರೆ ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಪಡೆದಿರುವುದೇ ಬ್ರಾಡ್. ಒಟ್ಟು 22 ವಿಕೆಟ್ ಕಬಳಿಸಿ ವಯಸ್ಸು ಕೇವಲ ಸಂಖ್ಯೆ ಎಂಬುದನ್ನು 37 ವರ್ಷದ ವೇಗಿ ಸಾರಿ ಹೇಳಿದ್ದಾರೆ. ಆದರೂ ಆ್ಯಶಸ್ ಸರಣಿಯೊಂದಿಗೆ ನಿವೃತ್ತಿ ಹೊಂದಬೇಕೆಂಬ ಬಹುಕಾಲದ ಬಯಕೆಯೊಂದಿಗೆ ಬ್ರಾಡ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

ಇಲ್ಲಿ ಕುತೂಹಲಕಾರಿ ವಿಷಯ ಎಂದರೆ, ಇಂದಿಗೂ ಅನೇಕರು ಸ್ಟುವರ್ಟ್​ ಬ್ರಾಡ್​ ಅವರನ್ನು ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸ್​ಗಳೊಂದಿಗೆ ನೆನಪಿಸಿಕೊಳ್ಳುತ್ತಿರುತ್ತಾರೆ. ಆದರೆ ಈ 6 ಎಸೆತಗಳ ಹೊರತಾಗಿಯೂ ಬ್ರಾಡ್ ಒಟ್ಟು40974 ಎಸೆತಗಳನ್ನು ಎಸೆದಿದ್ದಾರೆ. ಈ ಮೂಲಕ ಕೇವಲ ಒಂದು ಓವರ್​ನಲ್ಲಿ ಯಾರ ಕೆರಿಯರ್ ಕೂಡ ಮುಗಿಯಲ್ಲ ಎಂಬುದನ್ನು  ನಿರೂಪಿಸಿದ್ದಾರೆ. ಅದು ಕೂಡ ಹಲವು ವಿಶ್ವ ದಾಖಲೆಗಳೊಂದಿಗೆ ಎಂಬುದು ವಿಶೇಷ. ಇದಕ್ಕೆ ಸಾಕ್ಷಿಯೇ ಈ ಕೆಳಗಿನ ಅಂಕಿ ಅಂಶಗಳು.

ಸ್ಟುವರ್ಟ್ ಬ್ರಾಡ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಒಟ್ಟು 40980 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 23574 ರನ್​ಗಳು ಮಾತ್ರ. ಇದೇ ವೇಳೆ ಪಡೆದಿರುವುದು ಬರೋಬ್ಬರಿ 847 ವಿಕೆಟ್​ಗಳು ಎಂದರೆ ನಂಬಲೇಬೇಕು.

ಅಂದರೆ ಕ್ರಿಕೆಟ್ ಇತಿಹಾಸದಲ್ಲಿ 800+ ವಿಕೆಟ್ ಪಡೆದ ವಿಶ್ವದ 8 ಬೌಲರ್​ಗಳಲ್ಲಿ ಸ್ಟುವರ್ಟ್ ಬ್ರಾಡ್ ಕೂಡ ಒಬ್ಬರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಈ ಎಂಟು ಮಂದಿಯಲ್ಲಿ ಭಾರತದ ಯಾವುದೇ ವೇಗದ ಬೌಲರ್​ ಇಲ್ಲ ಎಂಬುದು.

ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ  2ನೇ ವೇಗದ ಬೌಲರ್​ ಎಂಬ ವಿಶ್ವ ದಾಖಲೆ ಕೂಡ ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿದೆ. ಒಟ್ಟು 604 ವಿಕೆಟ್ ಕಬಳಿಸಿ ಇಂಗ್ಲೆಂಡ್ ವೇಗಿ ಈ ದಾಖಲೆ ನಿರ್ಮಿಸಿದ್ದಾರೆ.

ಹಾಗೆಯೇ ಟೆಸ್ಟ್ ಕ್ರಿಕೆಟ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 150+ ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಸ್ಟುವರ್ಟ್ ಬ್ರಾಡ್ ಎಂದರೆ ನಂಬಲೇಬೇಕು. ವಿಶ್ವದ ಯಾವುದೇ ಬೌಲರ್​ಗೆ ಆಸ್ಟ್ರೇಲಿಯಾ ವಿರುದ್ಧ ಇಂತಹದೊಂದು ಸಾಧನೆ ಮಾಡಲು ಸಾಧ್ಯವಾಗಿಲ್ಲವೆಂದರೆ, ಬ್ರಾಡ್ ಅದ್ಯಾವ ರೀತಿಯಲ್ಲಿ ಆಸೀಸ್ ಬ್ಯಾಟರ್​ಗಳನ್ನು ಕಾಡಿರಬಹುದು ಎಂಬುದನ್ನು ಊಹಿಸಬಹುದು.

ಅಂದರೆ 6 ಸಿಕ್ಸ್​ಗಳನ್ನು ಹೊಡೆಸಿಕೊಂಡು ಟ್ರೋಲ್​ಗೆ ಒಳಗಾದ ಯುವ ವೇಗಿಯೊಬ್ಬ 16 ವರ್ಷಗಳ ಬಳಿಕ ರೆಡ್​ ಬಾಲ್​ನೊಂದಿಗೆ ವಿದಾಯ ಹೇಳುವಾಗ ಆರರ ಮುಂದರೆ ಸೊನ್ನೆ ಹಾಗು 4 ಅನ್ನು ಸೇರಿಸಿದ್ದ… ಹೇಗೆ ಲೆಕ್ಕ ಹಾಕಿದರೂ 6 ಸಿಕ್ಸ್​ಗಿಂತ 604 ವಿಕೆಟ್​ ಮೇಲು ಎಂಬುದನ್ನು ನಿರೂಪಿಸಿ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದ.

ಇದನ್ನೂ ಓದಿ: Stuart Broad: 1.84 ಕೋಟಿ ರೂ.ಗೆ ಹರಾಜಾಗಿದ್ದರೂ IPL ಆಡದ ಸ್ಟುವರ್ಟ್​ ಬ್ರಾಡ್..!

ಈ ಎಲ್ಲಾ ಕಾರಣಗಳಿಂದಾಗಿಯೇ ಇಂದು ಸ್ಟುವರ್ಟ್ ಬ್ರಾಡ್ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬೌಲರ್​ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅದು ಕೂಡ ತಮ್ಮ ಕೊನೆಯ ಪಂದ್ಯದ ಕಡೆಯ ಎಸೆತದಲ್ಲಿ ವಿಕೆಟ್​ ಉರುಳಿಸಿ ವಿದಾಯ ಹೇಳುವ ಮೂಲಕ ಎಂಬುದು ಇಲ್ಲಿ ಮತ್ತೊಂದು ವಿಶೇಷ.