Bazball: ಆ್ಯಶಸ್ ಸರಣಿಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಬಾಝ್ಬಾಲ್
Ashes 2023: ಆ್ಯಶಸ್ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿರುವ ಕಾರಣ ಇಂಗ್ಲೆಂಡ್ ತಂಡದ ಈ ಸ್ಟ್ರಾಟರ್ಜಿ ಮುಂಬುರುವ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳಲಿದೆ.
ಆಡು ಗೆಲ್ಲುವ ತನಕ ಆಡು…ಗೆಲ್ಲಲು ಸಾಧ್ಯವಿಲ್ಲವೆಂದು ಕಂಡು ಬಂದರೆ ಡ್ರಾ ಮಾಡಲೆಂದು ಆಡು…ಟೆಸ್ಟ್ ಕ್ರಿಕೆಟ್ನ ಈ ನಿಯಮ ಇಂಗ್ಲೆಂಡ್ (England) ತಂಡಕ್ಕೆ ಅನ್ವಯಿಸಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದು ಕೂಡ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಎಂಬುದು ವಿಶೇಷ. 5 ಪಂದ್ಯಗಳ ಈ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದರು. ಆದರೆ ಈ ಎರಡೂ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ವಿರುದ್ಧ ಆಂಗ್ಲರು ಮುಗ್ಗರಿಸುತ್ತಿದ್ದಂತೆ ಬಾಝ್ಬಾಲ್ ತಂತ್ರಗಾರಿಕೆಯನ್ನು ಹಲವರು ಟೀಕಿಸಿದ್ದರು.
ಆದರೆ ಈ ಟೀಕೆ ಟಿಪ್ಪಣಿಗಳಿಗೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಂ ತಲೆ ಕೆಡಿಸಿಕೊಂಡಿರಲಿಲ್ಲ ಎಂಬುದು ವಿಶೇಷ. ಅದರಂತೆ ಮುಂದಿನ 3 ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡ ಬಾಝ್ಬಾಲ್ ಆಟವನ್ನೇ ಮುಂದುವರೆಸಿದ್ದರು. ಅಂತಿಮ ಫಲಿತಾಂಶ ಬಂದಾಗ ಆ್ಯಶಸ್ ಸರಣಿ 2-2 ಸಮಬಲದೊಂದಿಗೆ ಅಂತ್ಯಗೊಂಡಿತ್ತು. ಇತ್ತ ಮತ್ತೊಮ್ಮೆ ಬಾಝ್ಬಾಲ್ ಕ್ರಿಕೆಟ್ ಗೆದ್ದ ಖುಷಿಯಲ್ಲಿದ್ದರು ಬ್ರೆಂಡನ್ ಮೆಕಲಂ. ಅತ್ತ ಸರಣಿ ಸೋಲದ ಸಂಭ್ರಮದಲ್ಲಿದ್ದರು ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳು.
ಆ್ಯಶಸ್ ಸರಣಿಯಲ್ಲಿ ಬಾಝ್ಬಾಲ್ ಎಫೆಕ್ಟ್:
ಈ ಬಾರಿಯ ಆ್ಯಶಸ್ ಸರಣಿಯ ಮೂಲಕ ಇಂಗ್ಲೆಂಡ್ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡಕ್ಕೆ ಬಾಝ್ಬಾಲ್ ಎಫೆಕ್ಟ್ ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಇದುವರೆಗೆ ಒಂದು ಲೆಕ್ಕ ಇನ್ಮುಂದೆ ಮತ್ತೊಂದು ಲೆಕ್ಕ ಎಂಬುದನ್ನೂ ಕೂಡ ನಿರೂಪಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
- ಆ್ಯಶಸ್ ಸರಣಿಯ ಇತಿಹಾಸದಲ್ಲೇ ಈ ಬಾರಿ ಅತ್ಯಧಿಕ ಸಿಕ್ಸ್ಗಳು ಮೂಡಿಬಂದಿವೆ. ಅಂದರೆ 5 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 74 ಸಿಕ್ಸ್ಗಳು ಸಿಡಿದಿವೆ.
- ಆ್ಯಶಸ್ ಸರಣಿ ಇತಿಹಾಸದಲ್ಲೇ ಈ ಸಲ ಅತ್ಯಧಿಕ ರನ್ ರೇಟ್ನಲ್ಲಿ ಸ್ಕೋರ್ ಗಳಿಸಲಾಗಿದೆ. ಅಂದರೆ 5 ಟೆಸ್ಟ್ ಪಂದ್ಯಗಳಲ್ಲಿ ಪ್ರತಿ ಓವರ್ನಲ್ಲಿ 3.93 ರನ್ ರೇಟ್ನಲ್ಲಿ ರನ್ ಕಲೆಹಾಕಿದ್ದಾರೆ.
- ಈ ಬಾರಿಯ ಸರಣಿಯಲ್ಲಿ ಪ್ರತಿ ಓವರ್ಗೆ 4.74 ಸರಾಸರಿಯಲ್ಲಿ ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಬ್ಯಾಟರ್ಗಳು ಆಸ್ಟ್ರೇಲಿಯನ್ನರಿಗೆ ಬಾಝ್ಬಾಲ್ ಕ್ರಿಕೆಟ್ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಈ ಮೂಲಕ ಬಾಝ್ಬಾಲ್ ತಂತ್ರಗಾರಿಕೆಯೊಂದಿಗೆ ಇಂಗ್ಲೆಂಡ್ ತಂಡವು ಈ ಹಿಂದಿನ ಆ್ಯಶಸ್ ಸರಣಿಯ ರನ್ಗಳಿಕೆ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ್ದಾರೆ. ಇದೀಗ ಆ್ಯಶಸ್ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿರುವ ಕಾರಣ ಇಂಗ್ಲೆಂಡ್ ತಂಡದ ಈ ಸ್ಟ್ರಾಟರ್ಜಿ ಮುಂಬುರುವ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಭಾರತಕ್ಕೂ ಬಾಝ್ಬಾಲ್ ಭೀತಿ:
ಇಂಗ್ಲೆಂಡ್ ತಂಡದ ಮುಂದಿನ ಟೆಸ್ಟ್ ಭಾರತ ವಿರುದ್ಧ ಎಂಬುದು ವಿಶೇಷ. ಹೀಗಾಗಿ ಭಾರತದ ಪಿಚ್ನಲ್ಲಿ ಬಾಝ್ಬಾಲ್ ಎಫೆಕ್ಟ್ ಹೇಗಿರಲಿದೆ ಎಂಬುದನ್ನು ತಿಳಿಯಲು ಜನವರಿ 25 ರ ತನಕ ಕಾಯಲೇಬೇಕು. ಅಂದರೆ ಜನವರಿ 25, 2024 ರಿಂದ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಆರಂಭವಾಗಲಿದೆ.
ಏನಿದು ಬಾಝ್ಬಾಲ್ ಕ್ರಿಕೆಟ್?
ನ್ಯೂಝಿಲೆಂಡ್ನ ಮಾಜಿ ಆಟಗಾರ, ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಂ ಅವರ ಅಡ್ಡ ಹೆಸರು ಬಾಝ್. ಕ್ರಿಕೆಟ್ ಅಂಗಳದಲ್ಲಿ ಬಾಝ್ ಎಂದೇ ಗುರುತಿಸಿಕೊಂಡಿರುವ ಮೆಕಲಂ ಅವರ ಆಕ್ರಮಣಕಾರಿ ಆಟದ ವಿಧಾನವನ್ನು ಇದೀಗ ಬಾಝ್ಬಾಲ್ (BazBall) ಕ್ರಿಕೆಟ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Stuart Broad: 6 ಸಿಕ್ಸ್ಗಿಂತ 600 ವಿಕೆಟ್ ಮೇಲು..!
ವಿಶೇಷ ಎಂದರೆ ಬಾಝ್ಬಾಲ್ ಆಟವನ್ನು ಆರಂಭಿಸಿದ ಬಳಿಕ ಇಂಗ್ಲೆಂಡ್ ತಂಡವು ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋತಿಲ್ಲ. ಬ್ರೆಂಡನ್ ಮೆಕಲಂ ಕೋಚಿಂಗ್ ಹಾಗೂ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ 7 ಟೆಸ್ಟ್ ಸರಣಿಗಳನ್ನು ಆಡಿದೆ. ಈ ವೇಳೆ 5 ರಲ್ಲಿ ಗೆಲುವು ದಾಖಲಿಸಿದರೆ, 2 ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲೂ ಬಾಝ್ಬಾಲ್ ಎಫೆಕ್ಟ್ ಮುಂದುವರೆಯುವುದರಲ್ಲಿ ಯಾವುದೇ ಅನುಮಾನ ಬೇಡ.