ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ಜೀವನ ನಿರ್ವಹಣೆಗೂ ಸಂಕಷ್ಟ ಪಡುತ್ತಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರಿಗೆ ಎಲ್ಲಾ ರೀತಿಯ ನೆರವು ನೀಡಲು 1983 ರ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರೆಲ್ಲರು ಸಿದ್ದರಿದ್ದೇವೆ ಎಂದು ಆ ತಂಡದ ಭಾಗವಾಗಿದ್ದ ಸುನೀಲ್ ಗವಾಸ್ಕರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಕೆಲವು ದಿನಗಳ ಹಿಂದೆ ಕಪಿಲ್ ದೇವ್ ಕೂಡ ವಿನೋದ್ ಕಾಂಬ್ಳಿಗೆ ನೆರವು ನೀಡುವುದಾಗಿ ಹೇಳಿಕೊಂಡಿದ್ದರು. ಆದರೆ ನಾವು ನೆರವು ನೀಡಬೇಕೆಂದರೆ ವಿನೋದ್ ಮೊದಲು ರಿಹ್ಯಾಬ್ ಸೆಂಟರ್ಗೆ ಸೇರಿ ಕುಡಿತದ ಚಟದಿಂದ ಹೊರಬರಬೇಕು ಎಂಬ ಷರತ್ತವನ್ನು ವಿಧಿಸಿದ್ದರು.
ವಾಸ್ತವವಾಗಿ ಕೆಲವು ದಿನಗಳ ಹಿಂದೆ ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕವನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಸೇರಿದಂತೆ ರಮಾಕಾಂತ್ ಅವರ ಕೋಚಿಂಗ್‌ನಲ್ಲಿ ಬೆಳೆದಿದ್ದ ಪ್ರಸಿದ್ಧ ಕ್ರಿಕೆಟಿಗರು ಉಪಸ್ಥಿತರಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರನ್ನು ಸಮಾರಂಭದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದರು. ಆ ಕ್ಷಣದಲ್ಲಿ ಕಾಂಬ್ಳಿಗೆ ಆರಂಭದಲ್ಲಿ ಸಚಿನ್ರನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಅಲ್ಲೇ ಪಕ್ಕದಲ್ಲಿ ಕುಳಿತಿದ್ದವರು, ಅದು ಸಚಿನ್ ತೆಂಡೂಲ್ಕರ್ ಎಂದು ಹೇಳಿದ ಬಳಿಕ ಕಾಂಬ್ಳಿಗೆ ಗೆಳೆಯನನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು.
ಇದಲ್ಲದೆ ಸಮಾರಂಭದಲ್ಲಿ ಮಾತನಾಡಿದ್ದ ಕಾಂಬ್ಳಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಅವರು ಮಾತನಾಡಲು ಸಾಕಷ್ಟು ಕಷ್ಟಪಡಬೇಕಾಯಿತು. ಅಲ್ಲದೆ ಕಳೆದ ಆಗಸ್ಟ್ನಲ್ಲಿ ಕಾಂಬ್ಳಿ ಅವರ ಶಾಕಿಂಗ್ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದರಲ್ಲಿ ಕಾಂಬ್ಳಿ ಒಬ್ಬರೇ ಸ್ವಾತಂತ್ರವಾಗಿ ನಡೆಯಲು ಸಾಧ್ಯವಾಗದಂತ ಸ್ಥಿತಿಗೆ ತಲುಪಿದ್ದರು. ಕಾಂಬ್ಳಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಾಧ್ಯವಾಗುತ್ತಿಲ್ಲ. ಕಾಂಬ್ಳಿ ಅವರ ಈ ಸೋಚನೀಯ ಸ್ಥಿತಿಯನ್ನು ನೋಡಿದ್ದ ಮಾಧ್ಯಮಗಳು ಹಾಗೂ ಮಾಜಿ ಕ್ರಿಕೆಟಿಗರು ಮರುಕ ಪಟ್ಟಿದ್ದರು.
ಇದೀಗ ಕಷ್ಟದಲ್ಲಿರುವ ಕಾಂಬ್ಳಿಗೆ ಸಹಾಯ ಮಾಡುವುದಾಗಿ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು 1983 ವಿಶ್ವಕಪ್ ವಿಜೇತ ತಂಡವು ಕಿರಿಯ ಆಟಗಾರರ ನೆರವಿಗೆ ಸದಾ ನಿಲ್ಲುತ್ತದೆ. ವಿನೋದ್ ಕಾಂಬ್ಳಿ ನನ್ನ ಮಗನಿದ್ದಂತೆ. ಆತ ಮತ್ತೆ ಸಹಜ ಜೀವನ ನಡೆಸಲು ಬೇಕಾದ ಎಲ್ಲಾ ನೆರವನ್ನು ನಮ್ಮ ತಂಡ ಮಾಡಲಿದೆ. ಅವರಿಗೆ ಯಾವ ರೀತಿಯ ನೆರವು ನೀಡುತ್ತೇವೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದಿದ್ದಾರೆ.
ಸುನೀಲ್ ಗವಾಸ್ಕರ್ ಅವರಿಗೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಕೂಡ ಕಾಂಬ್ಳಿ ಅವರ ನೆರವಿಗೆ ನಿಲ್ಲುವುದಾಗಿ ಹೇಳಿಕೊಂಡಿದ್ದರು. ಕುಡಿತದ ಚಟಕ್ಕೆ ಬಿದ್ದಿರುವ ವಿನೋದ್ ರಿಹ್ಯಾಬ್ಗೆ ಹೋಗುವುದಾದರೆ, ನಾವು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಿದ್ಧರಿದ್ದೇವೆ. ಕಾಂಬ್ಳಿ ರಿಹ್ಯಾಬ್ಗೆ ಸೇರಿದರೆ ಮಾತ್ರ, ಚಿಕಿತ್ಸೆಯು ಎಷ್ಟು ಸಮಯದವರೆಗೆ ಇರುತ್ತದೆ ಎಂಬುದನ್ನು ಲೆಕ್ಕಿಸದೆ ನಾವು ಬಿಲ್ ಪಾವತಿಸಲು ಸಿದ್ಧರಿದ್ದೇವೆ ಎಂದು ಕಪಿಲ್ ಹೇಳಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Sat, 7 December 24