4 ಸೀಸನ್​ಗಳಲ್ಲೂ ಫೈನಲ್​ಗೇರಿದ ‘ಸನ್​ರೈಸರ್ಸ್​’

Sunrisers Eastern Cape: ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡದ ಪಾರುಪತ್ಯ ಮುಂದುವರೆದಿದೆ. ಕಳೆದ ಮೂರು ಸೀಸನ್​ಗಳಲ್ಲಿ ಫೈನಲ್ ಆಡಿದ್ದ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಇದೀಗ ಮೂರನೇ ಬಾರಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಪಡೆ ಹೊಸ ಇತಿಹಾಸ ನಿರ್ಮಿಸಿದೆ.

4 ಸೀಸನ್​ಗಳಲ್ಲೂ ಫೈನಲ್​ಗೇರಿದ ಸನ್​ರೈಸರ್ಸ್​
Sunrisers Eastern Cape

Updated on: Jan 24, 2026 | 12:56 PM

ಸೌತ್ ಆಫ್ರಿಕಾ ಟಿ20 ಲೀಗ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಎಂದಿನಂತೆ ಈ ಬಾರಿ ಕೂಡ ಕೊನೆಯ ಪಂದ್ಯದಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡ ಕಣಕ್ಕಿಳಿಯಲಿದೆ. ಅಂದರೆ ಸೌತ್ ಆಫ್ರಿಕಾ ಟಿ20 ಲೀಗ್​ನ ಪ್ರತಿ ಸೀಸನ್​ನಲ್ಲೂ ಫೈನಲ್​ ಆಡಿದ ವಿಶೇಷ ದಾಖಲೆಯೊಂದನ್ನು ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತನ್ನದಾಗಿಸಿಕೊಂಡಿದೆ.

  • 2023 ರಲ್ಲಿ ಶುರುವಾದ ಸೌತ್ ಆಫ್ರಿಕಾ ಟಿ20 ಲೀಗ್​ನ ಮೊದಲ ಸೀಸನ್​ನಲ್ಲಿ ಪ್ರಿಟೊರಿಯಾ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕ್ಯಾಪಿಟಲ್ಸ್ ಪಡೆಯನ್ನು ಬಗ್ಗು ಬಡಿದು ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
  • 2024 ರಲ್ಲಿ ನಡೆದ ದ್ವಿತೀಯ ಸೀಸನ್​ನಲ್ಲೂ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡ ಫೈನಲ್​ಗೇರಿತ್ತು. ಅಷ್ಟೇ ಅಲ್ಲದೆ ಫೈನಲ್​ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್​ ತಂಡವನ್ನು ಮಣಿಸಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದರು.
  • 2025 ರಲ್ಲಿ ನಡೆದ ಸೌತ್ ಆಫ್ರಿಕಾ ಟಿ20 ಲೀಗ್​ನ ಮೂರನೇ ಸೀಸನ್​ನ ಫೈನಲ್​ನಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ಹಾಗೂ ಎಂಐ ಕೇಪ್ ​ಟೌನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಅಂತಿಮ ಹಣಾಹಣಿಯಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡಕ್ಕೆ ಸೋಲುಣಿಸುವಲ್ಲಿ ಎಂಐ ಕೇಪ್ ಟೌನ್ ಯಶಸ್ವಿಯಾಗಿತ್ತು.

ಇದೀಗ ನಾಲ್ಕನೇ ಸೀಸನ್​ನಲ್ಲೂ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಜೋಹಾನ್ಸ್​ಬರ್ಗ್​ನಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪರ್ಲ್ ರಾಯಲ್ಸ್ ತಂಡಕ್ಕೆ ಸೋಲುಣಿಸುವಲ್ಲಿ ಸನ್​ರೈಸರ್ಸ್ ಪಡೆ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪರ್ಲ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 114 ರನ್​ಗಳು ಮಾತ್ರ. ಈ ಸುಲಭ ಗುರಿಯನ್ನು ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 11.4 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ನಾಲ್ಕನೇ ಬಾರಿ ಫೈನಲ್​ಗೇರಿದೆ. ಭಾನುವಾರ (ಜ.25) ನಡೆಯಲಿರುವ ಫೈನಲ್ ಪಂದ್ಯದಲ್ಲಿ  ಪ್ರಿಟೊರಿಯಾ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡಗಳು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ಗರಿಷ್ಠ ಸ್ಕೋರ್​ ಗಳಿಸಿದರೂ ಸೂರ್ಯನಿಗೆ ಸಿಗದ ಪಂದ್ಯ ಶ್ರೇಷ್ಠ ಪ್ರಶಸ್ತಿ

ಈ ಪಂದ್ಯದ ಮೂಲಕ ಪ್ರಿಟೊರಿಯಾ ಕ್ಯಾಪಿಟಲ್ಸ್ ತಂಡವು 2023ರ ಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳಲಿದೆಯಾ ಅಥವಾ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 3ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.