ಇದು ಟೀಮ್ ಇಂಡಿಯಾ, ಟಿ20 ವಿಶ್ವಕಪ್ಗೂ ಮುನ್ನ ಇತರೆ ತಂಡಗಳಿಗೆ ಎಚ್ಚರಿಕೆ!
India vs New Zealand: ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ 48 ರನ್ಗಳ ಗೆಲುವು ದಾಖಲಿಸಿದ್ದ ಭಾರತ ತಂಡವು ದ್ವಿತೀಯ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳಿಂದ ಜಯಭೇರಿ ಬಾರಿಸಿದೆ.

ಭಾರತದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಮ್ಯಾಚ್ಗಳಲ್ಲಿ ನ್ಯೂಝಿಲೆಂಡ್ ತಂಡ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ 48 ರನ್ಗಳ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ, ದ್ವಿತೀಯ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿದೆ. ಅದು ಕೂಡ 209 ರನ್ಗಳನ್ನು ಕೇವಲ 15.2 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಎಂಬುದು ವಿಶೇಷ.
ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 200+ ಸ್ಕೋರ್ ಚೇಸ್ ಮಾಡಿ ಅತ್ಯಧಿಕ ಎಸೆತಗಳನ್ನು ಬಾಕಿಯಿರಿಸಿದ ತಂಡವೆಂಬ ಖ್ಯಾತಿ ಭಾರತದ ಪಾಲಾಗಿದೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
ಈ ಪಂದ್ಯದ ಬಳಿಕ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿದ ಹೇಳಿಕೆಯು ಇದೀಗ ಇತರೆ ತಂಡಗಳಿಗೆ ಎಚ್ಚರಿಕೆಯಾಗಿ ಪರಿಗಣಿಸಲಾಗುತ್ತಿದೆ. ಏಕೆಂದರೆ ಭಾರತ ತಂಡವನ್ನು ಭಾರತದಲ್ಲಿ ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಮುಂಬರುವ ಟಿ20 ವಿಶ್ವಕಪ್ ನಡೆಯಲಿರುವುದು ಭಾರತ ಮತ್ತು ಶ್ರೀಲಂಕಾದಲ್ಲಿ.
ಇತ್ತ ಬಹುತೇಕ ಪಂದ್ಯಗಳು ಭಾರತದಲ್ಲೇ ನಡೆಯುವುದರಿಂದ ಟೀಮ್ ಇಂಡಿಯಾವನ್ನು ಎದುರಿಸಲು ಅಲ್ಪ ಸ್ವಲ್ಪ ರನ್ಗಳಿಸಿದರೆ ಸಾಕಾಗುವುದಿಲ್ಲ ಎಂಬುದಕ್ಕೆ ಮಿಚೆಲ್ ಸ್ಯಾಂಟ್ನರ್ ನೀಡಿರುವ ಹೇಳಿಕೆಯೇ ಸಾಕ್ಷಿ.
ಕಠಿಣ ಗುರಿ ನೀಡಿದರೂ ಗೆಲ್ಲಲಾಗದಿರುವ ಬಗ್ಗೆ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ಟೀಮ್ ಇಂಡಿಯಾ ವಿರುದ್ಧ 300 ಆದರೂ ಗಳಿಸಲೇಬೇಕು. ಅಂದರೆ ಮಾತ್ರ ನಾವು ಗೆಲ್ಲುವುದನ್ನು ಎದುರು ನೋಡಬಹುದು ಎಂದಿದ್ದಾರೆ. ಏಕೆಂದರೆ ಭಾರತದ ಬ್ಯಾಟಿಂಗ್ ಲೈನಪ್ ಆಗಿದೆ. ಅವರ ಮುಂದೆ 200 ಅಥವಾ 210 ರನ್ಗಳು ಸಾಕಾಗುವುದಿಲ್ಲ.
ಟೀಮ್ ಇಂಡಿಯಾ ಬ್ಯಾಟರ್ಗಳು ಈಗಾಗಲೇ ಟಿ20 ವಿಶ್ವಕಪ್ಗಾಗಿ ಸಿಡಿಯರಾಂಭಿಸಿದ್ದಾರೆ. ಹೀಗಾಗಿ ಭಾರತದ ವಿರುದ್ಧ ಗೆಲ್ಲಬೇಕಿದ್ದರೆ 300 ರನ್ ಆದರೂ ಗಳಿಸಲೇಬೇಕು ಎಂದು ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.
ಮಿಚೆಲ್ ಸ್ಯಾಂಟ್ನರ್ ಅವರ ಇಂತಹ ಹೇಳಿಕೆಗೆ ಮುಖ್ಯ ಕಾರಣ ಭಾರತ ತಂಡವು ಕೇವಲ 6 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆ ಬಳಿಕ ಅಬ್ಬರಿಸಿದ ರೀತಿ. ಅಂದರೆ ಮೊದಲೆರಡು ಓವರ್ಗಳಲ್ಲಿ ಸ್ಫೋಟಕ ದಾಂಡಿಗರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಭಾರತೀಯ ಬ್ಯಾಟರ್ಗಳ ಸಿಡಿಲಬ್ಬರಕ್ಕೆ ಪಾಕಿಸ್ತಾನ್ ವಿಶ್ವ ದಾಖಲೆ ಧೂಳೀಪಟ
ಅದರಲ್ಲೂ ಅಭಿಷೇಕ್ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆದರೆ ಆ ಬಳಿಕ ಬಂದ ಇಶಾನ್ ಕಿಶನ್ ಸಿಡಿಲಬ್ಬರಕ್ಕೆ ಕಿವೀಸ್ ಬೌಲರ್ಗಳೇ ದಂಗಾದರು. ಅಲ್ಲದೆ ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 76 ರನ್ ಚಚ್ಚಿದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 82 ರನ್ಗಳಿಸಿದರು. ಅದು ಕೂಡ ಕೇವಲ 37 ಎಸೆತಗಳಲ್ಲಿ.
ಆ ಬಳಿಕ ಬಂದ ಶಿವಂ ದುಬೆ 18 ಎಸೆತಗಳಲ್ಲಿ ಬಾರಿಸಿದ್ದು ಬರೋಬ್ಬರಿ 36 ರನ್ಗಳು. ಈ ಮೂಲಕ ಭಾರತ ತಂಡವು 28 ಎಸೆತಗಳು ಬಾಕಿಯಿರುವಂತೆಯೇ 209 ರನ್ಗಳಿಸಿ ಭರ್ಜರಿ ಜಯ ದಾಖಲಿಸಿತ್ತು. ಹೀಗಾಗಿಯೇ ಭಾರತದ ವಿರುದ್ಧ ಗೆಲ್ಲಲು 300 ರನ್ ಆದರೂ ಗಳಿಸಬೇಕು ಎಂದು ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.
