ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಎರಡನೇ ಕ್ವಾಲಿಫೈಯರ್ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ (SRH vs RR) ನಡುವೆ ಇಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ರಾಜಸ್ಥಾನ ಎರಡನೇ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿತು. ಎರಡನೇ ಕ್ವಾಲಿಫೈಯರ್ನಲ್ಲಿ ಗೆದ್ದ ತಂಡ ಮೇ 26 ರಂದು ಚೆನ್ನೈನಲ್ಲಿಯೇ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಫೈನಲ್ ಆಡಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಕೆಕೆಆರ್ ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಲೀಗ್ ಹಂತದಲ್ಲಿ ಬ್ಯಾಟ್ ಬೀಸಿ ಸಂಚಲನ ಮೂಡಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕ್ವಾಲಿಫೈಯರ್-1ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಸೋಲು ಅನುಭವಿಸಬೇಕಾಯಿತು. ಆ ಪಂದ್ಯದಲ್ಲಿ ಅವರ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ತಂಡಕ್ಕೆ ಉತ್ತಮ ಆರಂಭವನ್ನು ನೀಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ಈ ಇಬ್ಬರೂ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೆಚ್ಚಲಿದೆ. ಚೆನ್ನೈನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಲ್ಲ, ಆಗಾಗ್ಗೆ ಚೆಂಡು ನಿಂತು ಬ್ಯಾಟ್‌ಗೆ ಬರುತ್ತದೆ, ಆದ್ದರಿಂದ ಇಂದಿನ ಪಂದ್ಯ ಹೈದರಾಬಾದ್ಗೆ ಸವಾಲಾಗಲಿದೆ.
ಚೆಪಾಕ್ ಮೈದಾನದಲ್ಲಿ ರಾಜಸ್ಥಾನ್- ಹೈದರಾಬಾದ್ ಪ್ರದರ್ಶನ ಹೇಗಿದೆ?
ರಾಜಸ್ಥಾನ್ ರಾಯಲ್ಸ್ ಬಗ್ಗೆ ಮಾತನಾಡುತ್ತಾ, ಸಂಜು ಸ್ಯಾಮ್ಸನ್ ನೇತೃತ್ವದ ಈ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಇಲ್ಲಿಗೆ ತಲುಪಿದೆ. ಆರ್ಸಿಬಿ ಆರು ಗೆಲುವುಗಳನ್ನು ಗಳಿಸುವ ಮೂಲಕ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು, ಆದರೆ ನಾಕೌಟ್ ಪಂದ್ಯದಲ್ಲಿ ಸೋಲು ಕಂಡಿತು. ಈ ಪಂದ್ಯದಲ್ಲಿ ಆರ್‌ಆರ್‌ನ ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳು ತಮ್ಮ ಶಕ್ತಿ ಪ್ರದರ್ಶಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದಾಗ್ಯೂ, ಸಂಜು ಸ್ಯಾಮ್ಸನ್ ಅವರ ಫಾರ್ಮ್ ತಂಡಕ್ಕೆ ಚಿಂತೆಯ ವಿಷಯವಾಗಿದೆ. ಯಶಸ್ವಿ ಜೈಸ್ವಾಲ್ ಲಯಕಂಡುಕೊಂಡಿರುವುದು ಖುಷಿಯ ವಿಚಾರ.
ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಒಟ್ಟು 19 ಪಂದ್ಯಗಳು ನಡೆದಿವೆ. ಇದರಲ್ಲಿ ರಾಜಸ್ಥಾನ್ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಸ್ವಲ್ಪ ಮುನ್ನಡೆ ಸಾಧಿಸಿದ್ದರೆ, ಎಸ್ಆರ್ಹೆಚ್ 9 ಗೆದ್ದಿದೆ. ಐಪಿಎಲ್ 2024 ರಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾದಾಗ, ಹೈದರಾಬಾದ್ 1 ರನ್‌ನಿಂದ ಗೆದ್ದಿತ್ತು. ಕಳೆದ 6 ಪಂದ್ಯಗಳಲ್ಲಿ ಉಭಯ ತಂಡಗಳು 3-3 ಅಂತರದಲ್ಲಿ ಜಯ ಸಾಧಿಸಿದ್ದವು. ಹೀಗಾಗಿ ಇಂದಿನ ಪಂದ್ಯವೂ ರೋಚಕವಾಗಿ ಮೂಡಿಬರುವ ನಿರೀಕ್ಷೆಯಿದೆ.
ಜಿಯೋ ಸಿನಿಮಾ ಅಲ್ಲ; ಟಿ20 ವಿಶ್ವಕಪ್ ಪಂದ್ಯಗಳನ್ನು ಮೊಬೈಲ್‌ನಲ್ಲಿ ಉಚಿತವಾಗಿ ವೀಕ್ಷಿಸುವುದು ಹೇಗೆ?
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ನಿಧಾನವಾಗಿದೆ. ಚೆಪಾಕ್‌ನಲ್ಲಿ ಸ್ಪಿನ್ನರ್‌ಗಳು ಸಾಕಷ್ಟು ಸಹಾಯವನ್ನು ಪಡೆಯುತ್ತಾರೆ. ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ಹೆಣಗಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಅಷ್ಟು ಸುಲಭವಾಗಿ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ಸ್ವಲ್ಪ ಸಮಯ ಕ್ರೀಸ್ನಲ್ಲಿ ನಿಂತರೆ ನಂತರ ಆಡಬಹುದು. ಬ್ಯಾಟರ್ ಪಿಚ್ ಅನ್ನು ಅರ್ಥಮಾಡಿಕೊಂಡರೆ, ನಂತರ ದೊಡ್ಡ ಹಿಟ್‌ಗಳನ್ನು ಹೊಡೆಯಬಹುದು. ಚೆನ್ನೈನಲ್ಲಿ ನಡೆದ ಐಪಿಎಲ್‌ನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 164 ಮತ್ತು ಎರಡನೇ ಇನ್ನಿಂಗ್ಸ್‌ನ ಸರಾಸರಿ 150 ರನ್.
ಶುಕ್ರವಾರ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಚೆನ್ನೈನಲ್ಲಿ ನಡೆಯುವ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. ಕ್ವಾಲಿಫೈಯರ್-2 ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಕಡಿಮೆ ಇದ್ದರೂ, ಈ ಪಂದ್ಯಕ್ಕೆ ಮೀಸಲು ದಿನವನ್ನು ಕಾಯ್ದಿರಿಸಿರುವ ಕಾರಣ ಆತಂಕ ಪಡುವ ಅಗತ್ಯವಿಲ್ಲ. ಶುಕ್ರವಾರ ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ ಶನಿವಾರ ನಡೆಯಲಿದೆ. ಎರಡೂ ದಿನಗಳಲ್ಲಿ ಪಂದ್ಯ ನಡೆಯದಿದ್ದರೆ, ಸನ್‌ರೈಸರ್ಸ್ ಅಂಕಪಟ್ಟಿಯಲ್ಲಿ ರಾಜಸ್ಥಾನಕ್ಕಿಂತ ಒಂದು ಸ್ಥಾನ ಮುಂದಿರುವುದರಿಂದ ಹೈದರಾಬಾದ್ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಎಸ್ಆರ್ಹೆಚ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್, ಟಿ. ನಟರಾಜನ್.
ರಾಜಸ್ಥಾನ್: ಟಾಮ್ ಕೊಹ್ಲರ್-ಕ್ಯಾಡ್ಮೋರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ