
ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೆ ಅವರನ್ನು ತಂಡದಿಂದಲೂ ಹೊರಹಾಕಲಾಗಿದೆ. ಸೂರ್ಯಕುಮಾರ್ ಯಾದವ್ ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ತಂಡದಿಂ ಕೈಬಿಟ್ಟಿರುವುದು ಸರಿಯಾದ ನಿರ್ಧಾರವಾಗಿದೆ ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವರು ಸೂರ್ಯನಿಗೆ ಕೊನೆಯ ಅವಕಾಶವನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಒಬ್ಬರು.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಗವಾಸ್ಕರ್, ‘ಸೂರ್ಯಕುಮಾರ್ ಯಾದವ್ ಅವರನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. 2028 ರಲ್ಲಿ ಟಿ20 ವಿಶ್ವಕಪ್ ಮತ್ತು ಒಲಿಂಪಿಕ್ಸ್ ಇದೆ. ಹೀಗಾಗಿ ಕನಿಷ್ಠ ಮುಂಬರುವ ಇಂಗ್ಲೆಂಡ್ ಸರಣಿಯವರೆಗೆ ಅವರಿಗೆ ಅವಕಾಶ ನೀಡಬೇಕಿತ್ತು. ಆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರ ಪ್ರದರ್ಶನವನ್ನು ನೋಡಿದ ನಂತರವೇ ಆಯ್ಕೆದಾರರು ನಿರ್ಧಾರಕ್ಕೆ ಬಂದಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ 2026 ರ ಐಪಿಎಲ್ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಪ್ರದರ್ಶನ ಆಯ್ಕೆದಾರರ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದಿದ್ದಾರೆ.
ಆದರೆ, ಆಯ್ಕೆದಾರರ ಚಿಂತನೆ ಬೇರೆಯದೇ ಆಗಿರಬಹುದು ಎಂದಿರುವ ಗವಾಸ್ಕರ್, ‘ಬದಲಾವಣೆ ಈಗಲೇ ಆರಂಭವಾಗಬೇಕು ಎಂದು ಆಯ್ಕೆದಾರರು ಭಾವಿಸಿರಬಹುದು. ಸೂರ್ಯಗೆ ಈಗ 35 ಅಥವಾ 36 ವರ್ಷ. 2028 ರ ಹೊತ್ತಿಗೆ ಅವರಿಗೆ 38 ವರ್ಷ ವಯಸ್ಸಾಗಿರುತ್ತದೆ. ಆ ಸಮಯದಲ್ಲಿ, ನಾವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಅಥವಾ ವಿಶ್ವಕಪ್ ಉಳಿಸಿಕೊಳ್ಳಲು ಬಯಸಿದರೆ, ನಮಗೆ ಯುವ ನಾಯಕನ ಅಗತ್ಯವಿದೆ. ಅದಕ್ಕಾಗಿಯೇ ಶ್ರೇಯಸ್ ಅಯ್ಯರ್ ಅವರಂತಹ ಅನುಭವ ಹೊಂದಿರುವ ಯುವ ಆಟಗಾರನನ್ನು ಆಯ್ಕೆ ಮಾಡಿರಬಹುದು ಎಂದಿದ್ದಾರೆ.
ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್ಗೆ ಗೇಟ್ಪಾಸ್
ನಾಯಕತ್ವದಿಂದ ತೆಗೆದುಹಾಕಲ್ಪಟ್ಟಿದ್ದರೂ ಸಹ, ಗವಾಸ್ಕರ್ ಸೂರ್ಯನ ವ್ಯಕ್ತಿತ್ವವನ್ನು ಶ್ಲಾಘಿಸಿದರು. ಮಹೇಂದ್ರ ಸಿಂಗ್ ಧೋನಿಯಂತೆ ಸೂರ್ಯ ಮೈದಾನದಲ್ಲಿ ತುಂಬಾ ಶಾಂತವಾಗಿದ್ದರು. ಸೂರ್ಯ ತಂಡಕ್ಕೆ ತನ್ನ ಶಾಂತ ಸ್ವಭಾವವನ್ನು ಪರಂಪರೆಯಾಗಿ ಬಿಟ್ಟು ಹೋಗಿದ್ದಾರೆ. ಕಠಿಣ ಸಂದರ್ಭಗಳಲ್ಲಿಯೂ ಒತ್ತಡಕ್ಕೆ ಒಳಗಾಗದೆ ತಂಡವನ್ನು ಮುನ್ನಡೆಸುವಲ್ಲಿ ಅವರು ಧೋನಿಯಂತೆಯೇ ಇದ್ದರು ಎಂದು ಗವಾಸ್ಕರ್ ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ