
ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಬಗ್ಗೆಗಿನ ಆತಂಕ ದೂರವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅಯ್ಯರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ ಅವರ ಪೆಕ್ಕೆಲುಬಿನ ಮೇಲ್ಭಾಗದ ಅಂಗದಲ್ಲಿ (ಗುಲ್ಮ) ಆಂತರಿಕ ರಕ್ತಸ್ರಾವವಾಗಿದ್ದ ಕಾರಣ ಐಸಿಯುನಲ್ಲಿರಿಸಲಾಗಿತ್ತು. ಇದೀಗ ಶ್ರೇಯಸ್ ಅಯ್ಯರ್ ಅವರನ್ನು ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಅವರು ನಮಗೆ ಫೋನ್‌ನಲ್ಲಿ ಉತ್ತರಿಸುತ್ತಿದ್ದಾರೆ ಅಂದರೆ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದರ್ಥ.
ಈ ಘಟನೆ ದುರದೃಷ್ಟಕರ, ಇದೀಗ ವೈದ್ಯರು ಅವರ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಹೀಗಾಗಿ ಈ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಕ್ರಿಕ್‌ಬಝ್ ವರದಿಯ ಪ್ರಕಾರ, ಶ್ರೇಯಸ್ ಅಯ್ಯರ್ ಅವರ ಆರೋಗ್ಯ ಇದೀಗ ಸ್ಥಿರವಾಗಿದೆ. ಹೀಗಾಗಿ ಅವರನ್ನು ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೆ ಸಿಡ್ನಿಯಲ್ಲಿಯೇ ಬಿಡುಬಿಟ್ಟಿರುವ ಬಿಸಿಸಿಐ ವೈದ್ಯಕೀಯ ತಂಡವು ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದ್ದಾರೆ.
ಇತ್ತ ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಆಗಿರುವ ಕಾರಣ ಶ್ರೇಯಸ್ ಅಯ್ಯರ್ ಅಪಾಯದಿಂದ ಪಾರಾಗಿದ್ದಾರೆ ಎಂದೇ ಹೇಳಬಹುದು. ಹೀಗಾಗಿ ಇನ್ನು ಕೆಲವು ದಿನಗಳ ಚಿಕಿತ್ಸೆಯ ಬಳಿಕ ಅವರು ಸಂಪೂರ್ಣ ಆರೋಗ್ಯವಂತರಾಗಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ.
ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.
ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟು ಬಿದ್ದಿದೆ. ಈ ಹೊಡೆತದ ನೋವಿನಿಂದ ನರಳಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಕ್ಷಣವೇ ವೈದ್ಯರಲ್ಲಿಗೆ ಕರೆದೊಯ್ಯಲಾಗಿತ್ತು. ಇದೀಗ ಸಿಡ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯವು ಸ್ಥಿರವಾಗಿದೆ ಎಂದು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
Published On - 10:24 am, Tue, 28 October 25