AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6: ಕಂಬ್ಯಾಕ್ ಪಂದ್ಯದಲ್ಲೇ ಸೂರ್ಯನ ಸಿಡಿಲಬ್ಬರ

ಸೂರ್ಯ ಮುಳುಗಿದೆ ಎಂದುಕೊಂಡವರಿಗೆ ಕೋಲ್ಕತ್ತಾದಲ್ಲಿ ಸಿಡಿಲಬ್ಬರದ ಉತ್ತರ ಸಿಕ್ಕಿದೆ! ಸತತ ಐದು ತಿಂಗಳ ವಿಶ್ರಾಂತಿ ಮತ್ತು ಟೀಮ್ ಇಂಡಿಯಾದಿಂದ ಹೊರಬಿದ್ದ ನೋವಿನ ನಡುವೆ ಮೈದಾನಕ್ಕಿಳಿದ ಸೂರ್ಯಕುಮಾರ್ ಯಾದವ್, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಮ್ಮ ಹಳೆಯ ಖದರ್ ತೋರಿಸಿದ್ದಾರೆ. ಈ ಖದರ್​ನೊಂದಿಗೆ ಮುಂಬೈ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

6,6,6,6,6: ಕಂಬ್ಯಾಕ್ ಪಂದ್ಯದಲ್ಲೇ ಸೂರ್ಯನ ಸಿಡಿಲಬ್ಬರ
Suryakumar Yadav Image Credit source: JioHotstar
ಝಾಹಿರ್ ಯೂಸುಫ್
|

Updated on:Nov 14, 2026 | 2:07 PM

Share

ಸುಮಾರು ಐದು ತಿಂಗಳ ವಿಶ್ರಾಂತಿ ಮತ್ತು ಭಾರತ ಟಿ20 ತಂಡದಿಂದ ಹೊರಗುಳಿದ ನಿರಾಸೆಯ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಮುಂಬೈ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮೈದಾನದಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ (SMAT) 2026-27ರ ಆರಂಭಿಕ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಆಯ್ಕೆಗಾರರಿಗೆ ತಮ್ಮ ಬ್ಯಾಟ್ ಮೂಲಕವೇ ಖಡಕ್ ಉತ್ತರ ನೀಡಿದ್ದಾರೆ.

ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ನಿಗದಿತ 20 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. 173 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಮುಂಬೈ ತಂಡದ ಪರ ನಾಯಕ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

360 ಡಿಗ್ರಿ ವೈಭವ:

ಮುಂಬೈ 90 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಸೂರ್ಯಕುಮಾರ್ ಯಾದವ್, ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಹೈದರಾಬಾದ್ ಸ್ಪಿನ್ನರ್‌ಗಳನ್ನು ಮನಬಂದಂತೆ ದಂಡಿಸಿದ ಅವರು, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ 21 ಎಸೆತಗಳನ್ನು ಎದುರಿಸಿದ ಸೂರ್ಯ, 6 ಫೋರ್ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 285.71ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 60 ರನ್ ಸಿಡಿಸಿದರು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ

ಮತ್ತೊಂದೆಡೆ ಸೂರ್ಯಕುಮಾರ್ ಯಾದವ್​​ಗೆ ಉತ್ತಮ ಸಾಥ್ ನೀಡಿದ ಯುವ ಆಟಗಾರ ಮುಶೀರ್ ಖಾನ್ 24 ಎಸೆತಗಳಲ್ಲಿ 51 ರನ್ (6 ಫೋರ್, 3 ಸಿಕ್ಸರ್) ಬಾರಿಸಿದರು. ಈ ಜೋಡಿ 3ನೇ ವಿಕೆಟ್‌ಗೆ ಕೇವಲ 23 ಎಸೆತಗಳಲ್ಲಿ 65 ರನ್‌ಗಳ ಜೊತೆಯಾಟವಾಡಿ ಪಂದ್ಯದ ದಿಕ್ಕನ್ನೇ ಬದಲಿಸಿತು. ಪರಿಣಾಮವಾಗಿ ಮುಂಬೈ ತಂಡ ಕೇವಲ 13.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ, ಇನ್ನೂ 41 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಪಂದ್ಯಶ್ರೇಷ್ಠ ಗೌರವ:

ಈ ಪಂದ್ಯದಲ್ಲಿ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ ಮುಂಬೈ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಒಲಿದುಬಂತು. ಮುಂಬರುವ ಸರಣಿಗಳಿಗೆ ಮುನ್ನ ಸೂರ್ಯ ಅವರ ಈ ಫಾರ್ಮ್ ಮುಂಬೈ ತಂಡದ ಜೊತೆಗೆ ಮುಂಬೈ ಇಂಡಿಯನ್ಸ್​ ಅಭಿಮಾನಿಗಳಲ್ಲೂ ಹೊಸ ನಿರೀಕ್ಷೆ ಮೂಡಿಸಿದೆ.

Published On - 2:06 pm, Sat, 14 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More