ಕೈ ತಪ್ಪಿದ ನಾಯಕತ್ವ… ಸೂರ್ಯಕುಮಾರ್ ಯಾದವ್ ಹೇಳಿದ್ದೇನು?
ವಿಶ್ವಕಪ್ ವಿಜಯದ ಬೆನ್ನಲ್ಲೇ ಭಾರತ ಟಿ20 ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ನೂತನ ನಾಯಕರಾಗಿ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಈ ಹೊಸ ನಾಯಕತ್ವದ ಯುಗದ ಮೊದಲ ಸವಾಲಾಗಿ ಟೀಮ್ ಇಂಡಿಯಾ ಜೂನ್ ತಿಂಗಳ ಕೊನೆಯಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

ಭಾರತ ಟಿ20 ತಂಡದ ನಾಯಕ ಬದಲಾಗಿದ್ದಾರೆ. ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡಗಳ ನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಯಾದವ್ ಯುಗಾಂತ್ಯವಾಗಿದೆ ಎನ್ನಬಹುದು.
ಈ ಬಗ್ಗೆ ಮುಂಬೈ ಟಿ20 ಲೀಗ್ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, “ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮುಂಬೈ ಕ್ರಿಕೆಟ್‌ಗೆ ಇದು ಅತ್ಯಂತ ಹೆಮ್ಮೆಯ ಕ್ಷಣ. ಸತತವಾಗಿ ಮುಂಬೈನ ಮೂವರು ಆಟಗಾರರು ರಾಷ್ಟ್ರೀಯ ತಂಡದ ನಾಯಕರಾಗುತ್ತಿರುವುದು ಸಣ್ಣ ವಿಷಯವಲ್ಲ” ಎಂದು ಅವರು ಹೇಳಿದ್ದಾರೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಹೊಸ ತಂಡವನ್ನು ಪ್ರಕಟಿಸಿದ ತಕ್ಷಣ, ಸೂರ್ಯಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಧಿಕೃತ ತಂಡದ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಿಗಾಗಿ ಇಡೀ ತಂಡಕ್ಕೆ ಮತ್ತು ಹೊಸ ನಾಯಕನಿಗೆ ಒಳಿತಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದ್ದಾರೆ.
ನಾಯಕತ್ವ ಬದಲಾವಣೆಗೆ ಕಾರಣಗಳೇನು?
2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದ ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಆದರೆ, ಇತ್ತೀಚಿನ ಐಪಿಎಲ್ 2026ರಲ್ಲಿ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಮತ್ತು ವೈಯಕ್ತಿಕ ರನ್ ಗಳಿಕೆಯ ಕುಸಿತ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.
ಹೀಗಾಗಿ ನಾಯಕತ್ವದಿಂದ ಕೆಳಗಿಳಿಸಿ ಮುಂಬರುವ ಟಿ20 ಸರಣಿಗಳಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಏಷ್ಯನ್ ಗೇಮ್ಸ್ ಮತ್ತು ಮುಂದಿನ ಟಿ20 ವಿಶ್ವಕಪ್ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಬದಲಾವಣೆಯನ್ನು ಮಾಡಿದೆ.
ಅಂದರೆ 35 ವರ್ಷದ ಸೂರ್ಯಕುಮಾರ್ ಯಾದವ್ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಈಗಲೇ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂದು ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!
ಅದರಂತೆ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಹೊಸ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿ ಬಳಿಕ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಬೇಕಿದ್ದು, ಇದು ಅಯ್ಯರ್ ಕ್ಯಾಪ್ಟನ್ಸಿಗೆ ಎದುರಾಗಲಿರುವ ಮೊದಲ ಸವಾಲಾಗಿರಲಿದೆ.




