
ಭಾರತ ತಂಡ ಶ್ರೀಲಂಕಾ (India vs Sri Lanka) ಪ್ರವಾಸವನ್ನು ಅದ್ಭುತ ಗೆಲುವಿನೊಂದಿಗೆ ಆರಂಭಿಸಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ, ಆತಿಥೇಯ ಶ್ರೀಲಂಕಾವನ್ನು 165 ರನ್‌ಗಳಿಂದ ಸೋಲಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ತಂಡದ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್ (Manav Suthar ) ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಸ್ಪ್ರೀತ್ ಬುಮ್ರಾ ಸೇರಿದಂತೆ ಅತ್ಯಂತ ಅನುಭವಿ ಬೌಲರ್‌ಗಳು ಸಹ ತಮ್ಮ ಇಡೀ ವೃತ್ತಿಜೀವನದಲ್ಲಿ ಸಾಧಿಸಲು ವಿಫಲವಾದ ಸಾಧನೆಯನ್ನು ಮಾನವ್ ಸುತಾರ್ ಕೇವಲ ಎರಡನೇ ಪಂದ್ಯದಲ್ಲೇ ಮಾಡಿದರು.
ಟೆಸ್ಟ್ ಪಂದ್ಯದ ಕೊನೆಯ ದಿನದಂದು ಟೀಂ ಇಂಡಿಯಾ, ಶ್ರೀಲಂಕಾವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 206 ರನ್‌ಗಳಿಗೆ ಆಲೌಟ್ ಮಾಡಿ ಪಂದ್ಯವನ್ನು ಗೆದ್ದು ಬೀಗಿತು. ಯುವ ಸ್ಪಿನ್ನರ್ ಸುತಾರ್ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಇನ್ನಿಂಗ್ಸ್‌ನಲ್ಲಿ ಸುತಾರ್ 55 ರನ್‌ಗಳಿಗೆ ಅತ್ಯಧಿಕ ಆರು ವಿಕೆಟ್‌ಗಳನ್ನು ಪಡೆದರು. ಸುತಾರ್ ಇನ್ನಿಂಗ್ಸ್‌ನ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕೇವಲ 10 ಎಸೆತಗಳಲ್ಲಿ ಪಡೆದಿದ್ದು ಮತ್ತಷ್ಟು ವಿಶೇಷವಾಗಿತ್ತು.
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಸುತಾರ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ ಸುತಾರ್ ಈ ಪಂದ್ಯದಲ್ಲಿ ಒಟ್ಟು 10ವಿಕೆಟ್‌ಗಳನ್ನು ಕಬಳಿಸಿದರು. ಈ ಸಾಧನೆಯೊಂದಿಗೆ, ಸುತಾರ್ ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಅನೇಕ ಶ್ರೇಷ್ಠ ಬೌಲರ್‌ಗಳನ್ನು ಹಿಂದಿಕ್ಕಿದರು. ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಪಡೆದ ಅನೇಕ ಶ್ರೇಷ್ಠ ಬೌಲರ್‌ಗಳು ಇದ್ದಾರೆ. ಅವರಲ್ಲಿ ಹಲವರು ಒಂದೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ. ಆದರೆ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಎಂದಿಗೂ 10 ವಿಕೆಟ್‌ಗಳನ್ನು ಪಡೆದಿಲ್ಲ.
ಭಾರತದ ಲೆಜೆಂಡರಿ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ, ಆಸ್ಟ್ರೇಲಿಯಾದ ಬ್ರೆಟ್ ಲೀ, ಜೋಶ್ ಹೇಜಲ್‌ವುಡ್ ಮತ್ತು ಜೇಸನ್ ಗಿಲ್ಲೆಸ್ಪಿ ಅಥವಾ ಗ್ಯಾರಿ ಸೋಬರ್ಸ್ ಮತ್ತು ಜೋಯಲ್ ಗಾರ್ನರ್‌ರಂತಹ ಮಾರಕ ವೆಸ್ಟ್ ಇಂಡೀಸ್ ಬೌಲರ್‌ಗಳಾಗಲಿ, ಅವರಲ್ಲಿ ಯಾರೂ ತಮ್ಮ ಇಡೀ ವೃತ್ತಿಜೀವನದಲ್ಲಿ ಒಂದು ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ರಾಜಸ್ಥಾನದ ಸುತಾರ್ ತಮ್ಮ ಎರಡನೇ ಟೆಸ್ಟ್‌ನಲ್ಲಿ ಈ ಸಾಧನೆಯನ್ನು ಮಾಡಿದರು.
IND vs SL: ಐಪಿಎಲ್‌ನಲ್ಲಿ ಆಡಿಸುವ ಆಮಿಷ; ವಿಕೆಟ್ ಕೈಚೆಲ್ಲಿದ ಲಂಕಾ ಬ್ಯಾಟರ್
ಸುತಾರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ ಆಡಿರುವ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಅಫ್ಘಾನಿಸ್ತಾನ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೂ ಸುತಾರ್ ಒಂದು ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಆ ಪಂದ್ಯದಲ್ಲಿ ಅವರು ಒಟ್ಟು ಏಳು ವಿಕೆಟ್‌ಗಳನ್ನು ಪಡೆದಿದ್ದರು. ಹೀಗಾಗಿ, ಇದುವರೆಗಿನ ತಮ್ಮ ಎರಡು ಟೆಸ್ಟ್ ಪಂದ್ಯಗಳಲ್ಲಿ, ಸುತಾರ್ ಕೇವಲ 11.35 ರ ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ.