Syed Mushtaq Ali Trophy 2021: ಕರ್ನಾಟಕಕ್ಕೆ ಹ್ಯಾಟ್ರಿಕ್ ಗೆಲುವು

| Updated By: ಝಾಹಿರ್ ಯೂಸುಫ್

Updated on: Nov 06, 2021 | 5:28 PM

Syed Mushtaq Ali Trophy 2021 Highlights: ಈ ಸಾಧಾರಣ ಸವಾಲು ಬೆನ್ನತ್ತಿದ ಸರ್ವೀಸಸ್ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕರ್ನಾಟಕ ಬೌಲರುಗಳು ಯಶಸ್ವಿಯಾದರು.

Syed Mushtaq Ali Trophy 2021: ಕರ್ನಾಟಕಕ್ಕೆ ಹ್ಯಾಟ್ರಿಕ್ ಗೆಲುವು
ಸಾಂದರ್ಭಿಕ ಚಿತ್ರ
Follow us on

ಒಂದೆಡೆ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಅಬ್ಬರಿಸುತ್ತಿದ್ದರೆ, ಇತ್ತ ದೇಶೀಯ ಟೂರ್ನಿಯಲ್ಲಿ ಕರ್ನಾಟಕ ಜಯದ ನಾಗಾಲೋಟ ಮುಂದುವರೆಸಿದೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಮುಂಬೈ ಹಾಗೂ ಛತ್ತೀಸ್​ಗಢ್ ತಂಡಗಳಿಗೆ ಸೋಲುಣಿಸಿದ್ದ ಕರ್ನಾಟಕ ಇದೀಗ ಮೂರನೇ ಗೆಲುವು ದಾಖಲಿಸಿದೆ. ಸರ್ವೀಸಸ್ ವಿರುದ್ದದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸರ್ವೀಸಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅದರಂತೆ ಇನಿಂಗ್ಸ್​ ಆರಂಭಿಸಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲಿಲ್ಲ. ತಂಡದ ಮೊತ್ತ 17 ಆಗಿದ್ದ ವೇಳೆ 6 ರನ್​ಗಳಿಸಿ ದೇವದತ್ ಪಡಿಕ್ಕಲ್ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಮಯಾಂಕ್ ಅಗರ್ವಾಲ್ ಜೊತೆಗೂಡಿದ ನಾಯಕ ಮನೀಷ್ ಪಾಂಡೆ ತಂಡಕ್ಕೆ ಆಸೆಯಾದರು. ಈ ಹಂತದಲ್ಲಿ 28 ರನ್​ಗಳಿಸಿದ ಮಯಾಂಕ್ ಔಟಾಗಿ ನಡೆದರೆ, ಇದರ ಬೆನ್ನಲ್ಲೇ ಕರುಣ್ ನಾಯರ್ (6) ಕೂಡ ವಿಕೆಟ್ ಒಪ್ಪಿಸಿದರು.

ಇನ್ನೊಂದೆಡೆ ಎಚ್ಚರಿಕೆಯ ಆಟವಾಡಿದ ಮನೀಷ್ ಪಾಂಡೆ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಂತಿಮ ಹಂತದಲ್ಲಿ ಅನಿರುದ್ಧ ಜೋಶಿ 23 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 146 ಕ್ಕೆ ತಂದು ನಿಲ್ಲಿಸಿದರು.

ಈ ಸಾಧಾರಣ ಸವಾಲು ಬೆನ್ನತ್ತಿದ ಸರ್ವೀಸಸ್ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕರ್ನಾಟಕ ಬೌಲರುಗಳು ಯಶಸ್ವಿಯಾದರು. ಮೊದಲ ಓವರ್​ನಲ್ಲೇ ವಿಕೆಟ್ ಪಡೆದು ಸುಚಿತ್ ಕರ್ನಾಟಕಕ್ಕೆ ಯಶಸ್ಸು ತಂದುಕೊಟ್ಟರು. ಅಷ್ಟೇ ಅಲ್ಲದೆ ಇಡೀ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ ಕರ್ನಾಟಕ ಬೌಲರುಗಳು ಅಂತಿಮವಾಗಿ ಸರ್ವೀಸಸ್ ತಂಡದ ಮೊತ್ತವನ್ನು 8 ವಿಕೆಟ್ ಉರುಳಿಸಿ 109 ರನ್​ಗೆ ನಿಯಂತ್ರಿಸಿದರು. ಇದರೊಂದಿಗೆ ಕರ್ನಾಟಕ 33 ರನ್​ಗಳ ಭರ್ಜರಿ ಜಯ ಸಾಧಿಸಿತು. ಕರ್ನಾಟಕ ಪರ ವಿ.ವೈಶಾಖ್ 3 ವಿಕೆಟ್ ಪಡೆದು ಮಿಂಚಿದರೆ, ದರ್ಶನ್ 2 ವಿಕೆಟ್ ಪಡೆದು ಗಮನ ಸೆಳೆದರು. ಈ ಗೆಲುವಿನೊಂದಿಗೆ ಕರ್ನಾಟಕ ಆಡಿರುವ ಮೊದಲ 3 ಪಂದ್ಯಗಳಲ್ಲೂ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(Syed Mushtaq Ali Trophy 2021: Pandey’s fifty guide Karnataka To win over Services)