ಬೆಂಗಳೂರಿನಲ್ಲಿ ರನ್ ಸುನಾಮಿ ಎಬ್ಬಿಸಿದ ರಜತ್ ಪಾಟಿದರ್..! ಮಧ್ಯಪ್ರದೇಶಕ್ಕೆ ಫೈನಲ್​ ಟಿಕೆಟ್

|

Updated on: Dec 13, 2024 | 9:24 PM

Syed Mushtaq Ali Trophy 2024: ಸೈಯದ್ ಮುಷ್ಟಾಕ್ ಅಲಿ ಟಿ20 ಟ್ರೋಫಿಯ ಅಂತಿಮ ಹಂತಕ್ಕೆ ಮಧ್ಯಪ್ರದೇಶ ಮತ್ತು ಮುಂಬೈ ತಂಡಗಳು ಪ್ರವೇಶಿಸಿವೆ. ಮಧ್ಯಪ್ರದೇಶ ದೆಹಲಿಯನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರೆ, ಮುಂಬೈ ಬರೋಡಾವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆದುಕೊಂಡಿದೆ. ರಜತ್ ಪಾಟಿದಾರ್ ಅವರ ಅದ್ಭುತ ಬ್ಯಾಟಿಂಗ್ ಮಧ್ಯಪ್ರದೇಶದ ಗೆಲುವಿಗೆ ಕಾರಣವಾಯಿತು. ಈಗ ಮಹತ್ವದ ಫೈನಲ್ ಪಂದ್ಯಕ್ಕಾಗಿ ಎರಡು ತಂಡಗಳು ಸಜ್ಜಾಗಿವೆ.

ಬೆಂಗಳೂರಿನಲ್ಲಿ ರನ್ ಸುನಾಮಿ ಎಬ್ಬಿಸಿದ ರಜತ್ ಪಾಟಿದರ್..! ಮಧ್ಯಪ್ರದೇಶಕ್ಕೆ ಫೈನಲ್​ ಟಿಕೆಟ್
ರಜತ್ ಪಾಟಿದರ್
Follow us on

ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆದ ಎರಡು ಸೆಮಿಫೈನಲ್‌ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಮುಂಬೈ ಮತ್ತು ಮಧ್ಯಪ್ರದೇಶ ನಡುವೆ ಈ ಟೂರ್ನಿ ಫೈನಲ್ ಪಂದ್ಯ ನಡೆಯಲಿದೆ. ಡಿಸೆಂಬರ್ 13 ರ ಶುಕ್ರವಾರದಂದು ನಡೆದ ಮೊದಲ ಸೆಮಿಫೈನಲ್‌ನಲ್ಲಿ ಮುಂಬೈ ತಂಡ, ಬರೋಡಾ ತಂಡವನ್ನು ಸೋಲಿಸಿ ಎರಡನೇ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟರೆ, ಇತ್ತ ಎರಡನೇ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ತಂಡವು ಏಕಪಕ್ಷೀಯವಾಗಿ ದೆಹಲಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ದೆಹಲಿ ನೀಡಿದ 146 ರನ್​ಗಳ ಗುರಿಯನ್ನು ಮಧ್ಯಪ್ರದೇಶ ತಂಡ ಕೇವಲ 16 ಓವರ್​ಗಳಲ್ಲಿಯೇ ಸಾಧಿಸಿತು. ತಂಡದ ಈ ಅದ್ಭುತ ಗೆಲುವಿನಲ್ಲಿ ನಾಯಕ ರಜತ್ ಪಾಟಿದಾರ್ ಪ್ರಮುಖ ಪಾತ್ರವಹಿಸಿದರು.

ಪಾಟಿದಾರ್ ಸಿಡಿಲಬ್ಬರ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶದ ಅಬ್ಬರಕ್ಕೆ ಡೆಲ್ಲಿ ತಂಡ ಶರಣಾಗಬೇಕಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಆಯುಷ್ ಬಡೋನಿ ನಾಯಕತ್ವದ ಡೆಲ್ಲಿ ತಂಡ, ಮಧ್ಯಪ್ರದೇಶದ ಬಿಗಿಯಾದ ಬೌಲಿಂಗ್‌ ಮುಂದೆ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಿಗದಿತ 20 ಓವರ್‌ಗಲ್ಲಿ ಕೇವಲ 145 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಆರಂಭಿಕರಾದ ಪ್ರಿಯಾಂಶ್ ಆರ್ಯ 21 ಎಸೆತಗಳಲ್ಲಿ 29 ರನ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅನುಜ್ ರಾವತ್ 24 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದರು. ಮದ್ಯಪ್ರದೇಶದ ಪರ ​​ವೆಂಕಟೇಶ್ ಅಯ್ಯರ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು.

ಮಧ್ಯಪ್ರದೇಶಕ್ಕೆ ಸುಲಭ ಜಯ

ಇದಕ್ಕೆ ಪ್ರತಿಯಾಗಿ ಮಧ್ಯಪ್ರದೇಶ ಕೂಡ ತನ್ನ ಮೊದಲ 2 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಆರಂಭಿಕ ಅರ್ಪಿತ್ ಗೌರ್ ಅವರನ್ನು ಬೌಲ್ಡ್ ಮಾಡಿದರೆ, ಮೂರನೇ ಓವರ್‌ನಲ್ಲಿ ಇಶಾಂತ್ ಮತ್ತೆ ಸುಭ್ರಾಂಶು ಸೇನಾಪತಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು. ಈ ವೇಳೆ ಆರಂಭಿಕ ಆಟಗಾರ ಹರ್ಷ್ ಗಾವ್ಲಿ ಕೇವಲ 18 ಎಸೆತಗಳಲ್ಲಿ 30 ರನ್ ಗಳಿಸಿದರೆ ನಾಯಕ ಪಾಟಿದಾರ್ ಕ್ರೀಸ್​ಗೆ ಬಂದ ಕೂಡಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಪಾಟಿದಾರ್ ತಮ್ಮ ತವರು ಮೈದಾನದಲ್ಲಿ ಕೇವಲ 29 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. ಪಾಟಿದಾರ್ ಅವರ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ಅವರು ಹರ್‌ಪ್ರೀತ್ ಸಿಂಗ್ (46) ಅವರೊಂದಿಗೆ 106 ರನ್‌ಗಳ ಅಜೇಯ ಜೊತೆಯಾಟ ನಡೆಸಿದರು.

ರಹಾನೆ ಅಬ್ಬರ, ಮುಂಬೈ ಫೈನಲ್‌ಗೆ

ಇದೀಗ ಪ್ರಶಸ್ತಿಗಾಗಿ ಮಧ್ಯಪ್ರದೇಶ 2022ರ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಮುಂಬೈ ಮೊದಲ ಸೆಮಿಫೈನಲ್‌ನಲ್ಲಿ ಬರೋಡಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Fri, 13 December 24