T20 Blast 2023: ಎಸೆಕ್ಸ್ ತಂಡವನ್ನು ಮಣಿಸಿ 18 ವರ್ಷಗಳ ಬಳಿಕ ಚಾಂಪಿಯನ್​ ಪಟ್ಟಕ್ಕೇರಿದ ಸೋಮರ್‌ಸೆಟ್‌..!

|

Updated on: Jul 16, 2023 | 11:01 AM

T20 Blast 2023: ಇಂಗ್ಲೆಂಡ್​ನಲ್ಲಿ ನಡೆದ ವಿಟಾಲಿಟಿ ಟಿ20 ಬ್ಲಾಸ್ಟ್‌ ಫೈನಲ್ ಪಂದ್ಯದಲ್ಲಿ ಎಸೆಕ್ಸ್ ತಂಡವನ್ನು ಮಣಿಸಿದ ಸೋಮರ್‌ಸೆಟ್‌ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

T20 Blast 2023: ಎಸೆಕ್ಸ್ ತಂಡವನ್ನು ಮಣಿಸಿ 18 ವರ್ಷಗಳ ಬಳಿಕ ಚಾಂಪಿಯನ್​ ಪಟ್ಟಕ್ಕೇರಿದ ಸೋಮರ್‌ಸೆಟ್‌..!
ಟಿ20 ಬ್ಲಾಸ್ಟ್
Follow us on

ಇಂಗ್ಲೆಂಡ್​ನಲ್ಲಿ ನಡೆದ ವಿಟಾಲಿಟಿ ಟಿ20 ಬ್ಲಾಸ್ಟ್‌ (T20 Blast 2023) ಫೈನಲ್ ಪಂದ್ಯದಲ್ಲಿ ಎಸೆಕ್ಸ್ ತಂಡವನ್ನು ಮಣಿಸಿದ ಸೋಮರ್‌ಸೆಟ್‌ (Somerset beat Essex ) ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ತನ್ನ 18 ವರ್ಷಗಳ ಕಾಯುವಿಕೆಯನ್ನು ಸಹ ಕೊನೆಗೊಳಿಸಿದೆ. ಈ ಲೀಗ್​ನಲ್ಲಿ 2005ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದ ಸೋಮರ್‌ಸೆಟ್‌, ಇದೀಗ ತನ್ನ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿದೆ. ಸೋಮರ್‌ಸೆಟ್‌ನ ಈ ಮಹಾನ್ ಯಶಸ್ಸಿನ ಹಿಂದೆ ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ (Matt Henry) ಅವರ ಪಾತ್ರ ದೊಡ್ಡದಿದೆ. ಒಂದೇ ದಿನ ನಡೆದ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಸೋಮರ್‌ಸೆಟ್‌ ಪರ ಶ್ರೇಷ್ಠ ಪ್ರದರ್ಶನ ನೀಡಿದ ಮ್ಯಾಟ್ ಹೆನ್ರಿ ಈ ಎರಡೂ ಪಂದ್ಯಗಳಲ್ಲಿ 7 ವಿಕೆಟ್ ಪಡೆದರು.

ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೋಮರ್‌ಸೆಟ್ 20 ಓವರ್‌ಗಳಲ್ಲಿ 145 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಎಸೆಕ್ಸ್ ತಂಡವು ಪೂರ್ಣ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ ಕೇವಲ 18.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 131 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ 14 ರನ್​ಗಳಿಂದ ಚಾಂಪಿಯನ್​ ಪಟ್ಟವನ್ನು ಕಳೆದುಕೊಂಡಿತು.

ಮ್ಯಾಟ್ ಹೆನ್ರಿ ಫೈನಲ್‌ನ ಹೀರೋ

ಅಂತಿಮ ಪಂದ್ಯದಲ್ಲಿ ಎಸೆಕ್ಸ್ ತಂಡವನ್ನು 131 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಮ್ಯಾಟ್ ಹೆನ್ರಿ ಪಾತ್ರ ಪ್ರಮುಖವಾಗಿತ್ತು. ತಮ್ಮ ಖೋಟಾದ 3.3 ಓವರ್‌ಗಳಲ್ಲಿ 24 ರನ್‌ ನಿಡಿದ ಹೆನ್ರಿ ಪ್ರಮುಖ 4 ವಿಕೆಟ್‌ ಪಡೆದರು. ಈ ವೇಳೆ ಹೆನ್ರಿ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು. ಈ ಅದ್ಭುತ ಪ್ರದರ್ಶನಕ್ಕಾಗಿ ಹೆನ್ರಿ ಅಂತಿಮ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಸರ್ರೆ ವಿರುದ್ಧ ಗೆಲುವು ಸೋಮರ್‌ಸೆಟ್ ಫೈನಲ್‌ಗೆ

ಇನ್ನು ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಸೋಮರ್‌ಸೆಟ್, ಸರ್ರೆ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿಯೂ ಸೋಮರ್‌ಸೆಟ್ ಮೊದಲು ಬ್ಯಾಟ್ ಮಾಡಿ 7 ವಿಕೆಟ್‌ ಕಳೆದುಕೊಂಡು 142 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಸರ್ರೆ ತಂಡ 16.5 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್ ಆಯಿತು. ಇದರ ಪರಿಣಾಮ ಸೋಮರ್‌ಸೆಟ್ ಪಂದ್ಯವನ್ನು 24 ರನ್‌ಗಳಿಂದ ಗೆದ್ದುಕೊಂಡಿತು.

7 ವಿಕೆಟ್ ಪಡೆದ ಮ್ಯಾಟ್ ಹೆನ್ರಿ

ಸರ್ರೆ ವಿರುದ್ಧವೂ ಅದ್ಭುತ ಪ್ರದರ್ಶನ ನೀಡಿದ ಹೆನ್ರಿ, 3.5 ಓವರ್​ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ಈ ಮೂಲಕ ಬಲಗೈ ವೇಗದ ಬೌಲರ್ ಮ್ಯಾಟ್ ಹೆನ್ರಿ ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ 7 ವಿಕೆಟ್ ಪಡೆದು ತನ್ನ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ