2024 ರಲ್ಲಿ ಕ್ರಿಕೆಟ್ (Cricket) ಪ್ರೇಮಿಗಳಿಗೆ ರಸದೌತಣ ಸಿಗಲಿರುವುದು ಖಚಿತ. ಏಕೆಂದರೆ ಈ ಬಾರಿಯ ವರ್ಷಾರಂಭದಿಂದಲೇ ಲೀಗ್ ಕ್ರಿಕೆಟ್ ಟೂರ್ನಿಗಳು ಶುರುವಾಗುತ್ತಿದೆ. ಹೀಗೆ ಜನವರಿಯಿಂದ ಶುರುವಾಗುವ ಕ್ರಿಕೆಟ್ ಟೂರ್ನಿ ಮುಗಿಯುವುದು ಮುಂದಿನ ವರ್ಷ ಜನವರಿಯಲ್ಲಿ ಎಂಬುದು ವಿಶೇಷ. ಅಂದರೆ ಐಸಿಸಿ ಟೂರ್ನಿ ಹಾಗೂ ಸರಣಿಗಳ ನಡುವೆ ಈ ವರ್ಷ 10 ಲೀಗ್ ಟೂರ್ನಿಗಳು ನಡೆಯಲಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್. ಹೀಗಾಗಿಯೇ ವರ್ಷಂಪೂರ್ತಿ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆಯಂತು ಸಿಗಲಿದೆ.
ಜನವರಿ 9 ರಿಂದ ಸೌತ್ ಆಫ್ರಿಕಾ ಟಿ20 ಲೀಗ್ ಶುರುವಾಗಲಿದೆ. ಈ ಟೂರ್ನಿ ಮುಗಿಯುವುದು ಫೆಬ್ರವರಿ 10 ರಂದು. ಇದೇ ವೇಳೆ ಮತ್ತೊಂದೆಡೆ ಯುಎಇನಲ್ಲಿ ಇಂಟರ್ನ್ಯಾಷನಲ್ ಟಿ20 ಲೀಗ್ ಕೂಡ ಜರುಗಲಿದೆ. ಈ ಟೂರ್ನಿ ಜನವರಿ 19 ರಿಂದ ಆರಂಭವಾಗಿ ಫೆಬ್ರವರಿ 17 ಕ್ಕೆ ಮುಗಿಯಲಿದೆ.
ಹಾಗೆಯೇ ಜನವರಿ 19 ರಿಂದ ಮಾರ್ಚ್ 1 ರ ತನಕ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ನಡೆಯಲಿದೆ. ಹಾಗೆಯೇ ಪಾಕಿಸ್ತಾನ್ ಸೂಪರ್ ಲೀಗ್ ಫೆಬ್ರವರಿ 13 ರಿಂದ ಶುರುವಾಗಿ ಮಾರ್ಚ್ 19 ಕ್ಕೆ ಕೊನೆಗೊಳ್ಳಲಿದೆ.
ಇನ್ನು ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ ಮಾರ್ಚ್ 23 ರಿಂದ ಶುರುವಾಗುವ ಸಾಧ್ಯತೆಯಿದೆ. ಅದರಂತೆ ಮೇ 26 ರಂದು ಫೈನಲ್ ಪಂದ್ಯ ನಡೆಯಬಹುದು. ಮೇ 30 ರಿಂದ ಇಂಗ್ಲೆಂಡ್ನಲ್ಲಿ ವಿಟಾಲಿಟಿ ಬ್ಲಾಸ್ಟ್ ಟೂರ್ನಿ ಶುರುವಾಗಲಿದ್ದು, ಈ ಟೂರ್ನಿಯ ಫೈನಲ್ ಪಂದ್ಯ ಮೇ 26 ರಂದು ನಡೆಯಲಿದೆ.
ಇದರ ಬೆನ್ನಲ್ಲೇ ಟಿ20 ವಿಶ್ವಕಪ್ ಕೂಡ ಶುರುವಾಗಲಿದೆ. ಅಂದರೆ ಜೂನ್- 4 ರಿಂದ ಜೂನ್ 30 ತನಕ ಚುಟುಕು ವಿಶ್ವಕಪ್ ಕದನ ನಡೆಯಲಿದೆ.
ಇನ್ನು ಇಂಗ್ಲೆಂಡ್ನ ಹಂಡ್ರೇಡ್ ಲೀಗ್ ಅನ್ನು ಆಗಸ್ಟ್ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ನಲ್ಲಿ ಆಗಸ್ಟ್-ಸೆಪ್ಟೆಂಬರ್ ನಡುವೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆ.
ಹಾಗೆಯೇ ಅಬುಧಾಬಿ ಟಿ10 ಲೀಗ್ ಅಕ್ಟೋಬರ್ ತಿಂಗಳಲ್ಲಿ ಜರುಗಲಿದೆ. ಇನ್ನು ಬಿಗ್ ಬ್ಯಾಷ್ ಲೀಗ್ ಡಿಸೆಂಬರ್ನಿಂದ ಆರಂಭವಾಗಿ ಮುಂದಿನ ವರ್ಷ ಜನವರಿಯಲ್ಲಿ ಮುಗಿಯಲಿದೆ.
ಅಂದರೆ ಇಲ್ಲಿ ಫ್ರಾಂಚೈಸಿ ಲೀಗ್ ಕ್ರಿಕೆಟ್ ವರ್ಷಂಪೂರ್ತಿ ನಡೆಯುತ್ತಿರುವುದು ವಿಶೇಷ. ಇದರ ನಡುವೆ ಹಲವು ಸರಣಿಗಳನ್ನು ಕೂಡ ಆಡಲಾಗುತ್ತದೆ. ಹೀಗಾಗಿ ಈ ವರ್ಷವಿಡೀ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗುವುದು ಖಚಿತ ಎಂದೇ ಹೇಳಬಹುದು.
ಇದನ್ನೂ ಓದಿ: Virat Kohli: ಹೊಸ ವರ್ಷದಲ್ಲಿ ಕಿಂಗ್ ಕೊಹ್ಲಿ ಮುಂದಿದೆ 10 ದಾಖಲೆಗಳು
—————————————————————–
Published On - 2:22 pm, Tue, 2 January 24