ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಟಿ20 ಕ್ರಿಕೆಟ್ನದ್ದೇ (T20 Cricket) ಕಾರುಬಾರು. ಈ ಚುಟುಕು ಮಾದರಿಯ ಕ್ರಿಕೆಟ್ನ ಹೊಡಿಬಡಿ ಆಟಕ್ಕೆ ಫಿದಾ ಆಗಿರುವ ಕ್ರಿಕೆಟ್ ಫ್ಯಾನ್ಸ್ ಹೆಚ್ಚಾಗಿ ಈ ಆಟಕ್ಕೆ ಜೋತು ಬೀಳುವುದು ಸಹಜ. ಇದಕ್ಕೆ ಕಾರಣವೂ ಇದ್ದು, ಈ ಆಟದಲ್ಲಿ ಒಮ್ಮೊಮ್ಮೆ ಬ್ಯಾಟ್ಸ್ಮನ್ಗಳ ಅಬ್ಬರ ಕಂಡು ಬಂದರೆ, ಇನ್ನು ಕೆಲವೊಮ್ಮೆ ಬೌಲರ್‌ಗಳು ತಮ್ಮ ಕೈಚೆಳಕ ತೋರುತ್ತಾರೆ. ಅಲ್ಲದೆ ಕ್ರಿಕೆಟ್ನ ಅತ್ಯಂತ ಕಡಿಮೆ ಸ್ವರೂಪ ಇದಾಗಿರುವುದರಿಂದ, ಹೆಚ್ಚು ಹೊತ್ತು ಪಂದ್ಯ ವೀಕ್ಷಿಸುವ ಗೋಜು ಅಭಿಮಾನಿಗಳಿಗಿರುವುದಿಲ್ಲ. ಹಾಗಾಗಿ ಹೆಚ್ಚಿನ ಅಭಿಮಾನಿಗಳು ಟಿ20 ಕ್ರಿಕೆಟ್ ನೋಡಲು ಇಷ್ಟಪಡುತ್ತಾರೆ. ಆದರೆ ಇಲ್ಲೊಂದು ಪಂದ್ಯ ಕೇವಲ 2 ಎಸೆತಗಳಲ್ಲಿ ಮುಕ್ತಾಯಗೊಳ್ಳುವದರೊಂದಿಗೆ ಐತಿಹಾಸಿಕ ದಾಖಲೆಯ ಪಟ್ಟಿಗೆ ಸೇರಿಕೊಂಡಿದೆ.ಹಾಗೆಯೇ ಕೇವಲ ಎರಡೇ ಎಸೆತಗಳಲ್ಲಿ ಮುಗಿಯುವುದರೊಂದಿಗೆ ಪಂದ್ಯ ನೋಡಲು ಹಣಕೊಟ್ಟು ಕ್ರೀಡಾಂಗಣಕ್ಕೆ ಬಂದಿದವರಿಗೆ ಬ್ರಹ್ಮನಿರಸನವನ್ನುಂಟು ಮಾಡಿದೆ.
ನಾವು ಹೇಳುತ್ತಿರುವ ಈ ಪಂದ್ಯದಲ್ಲಿ ಸ್ಪೇನ್ ಮತ್ತು ಐಲ್ ಆಫ್ ಮ್ಯಾನ್ ತಂಡಗಳು ಫೆಬ್ರವರಿ 26 ರಂದು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐಲ್ ಆಫ್ ಮ್ಯಾನ್ ತಂಡ, ಸ್ಪೇನ್ ತಂಡದ ಕೇವಲ ಇಬ್ಬರು ಬೌಲರ್‌ಗಳ ಮುಂದೆ ಮಂಕಾಗಿ ಹೋಯಿತು. ಸ್ಪೇನ್ ತಂಡದ ಇಬ್ಬರು ಬೌಲರ್‌ಗಳ ದಾಳಿಗೆ ನಲುಗಿದ ಐಲ್ ಆಫ್ ಮ್ಯಾನ್ ತಂಡ ಕೇವಲ ಎರಡಂಕ್ಕಿಗೆ ಆಲೌಟ್ ಆಗುವುದರೊಂದಿಗೆ ವಿಶ್ವ ಕ್ರಿಕೆಟ್ನಲ್ಲಿ ಬೇಡದ ದಾಖಲೆ ಬರೆಯಿತು.
ವಾಸ್ತವವಾಗಿ ಮೊದಲು ಬ್ಯಾಟಿಂಗ್ ಮಾಡಿದ ಐಲ್ ಆಫ್ ಮ್ಯಾನ್ ತಂಡ 20 ಓವರ್ಗಳ ಈ ಪಂದ್ಯದಲ್ಲಿ 8.4 ಓವರ್ಗಳನಷ್ಟೇ ಆಡಲು ಶಕ್ತವಾಗಿ ಕೇವಲ 10 ರನ್‌ಗಳಿಗೆ ಆಲೌಟ್ ಆಯಿತು. ಐಲ್ ಆಫ್ ಮ್ಯಾನ್ ಇಡೀ ತಂಡವನ್ನು ಪೆವಿಲಿಯನ್ಗಟ್ಟುವಲ್ಲಿ ಸ್ಪೇನ್ ತಂಡದ 3 ಬೌಲರ್‌ಗಳು ಯಶಸ್ವಿಯಾದರು. ಇದರಲ್ಲಿ ಇಬ್ಬರು ಬೌಲರ್‌ಗಳು ತಲಾ 4 ವಿಕೆಟ್ ಪಡೆದು ಮಿಂಚಿದರು.
CCL 2023: ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸತತ 2ನೇ ಗೆಲುವು! ಪಾಯಿಂಟ್ ಪಟ್ಟಿಯಲ್ಲಿ ಯಾವ ಸ್ಥಾನ?
ಗೆಲ್ಲಲು 20 ಓವರ್‌ಗಳಲ್ಲಿ 11 ರನ್ಗಳ ಗುರಿ ಹೊತ್ತ ಸ್ಪೇನ್ ತಂಡ ನೀರು ಕುಡಿದಷ್ಟು ಸರಾಗವಾಗಿ ಪಂದ್ಯವನ್ನು ಗೆದ್ದು ಮುಗಿಸಿತು. ಸ್ಪೇನ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅವೈಸ್ ಅಹ್ಮದ್ ಮೊದಲ ಓವರ್ನ ಮೊದಲ ಎರಡು ಎಸೆತಗಳಲ್ಲಿಯೇ ಭರ್ಜರಿ 2 ಸಿಕ್ಸರ್ ಬಾರಿಸುವ ಮೂಲಕ ಆಟವನ್ನು ಕೊನೆಗೊಳಿಸಿದರು. ಪರಿಣಾಮವಾಗಿ ಈ ಪಂದ್ಯವನ್ನು ಸ್ಪೇನ್ 118 ಎಸೆತಗಳು ಬಾಕಿ ಇರುವಂತೆಯೇ 10 ವಿಕೆಟ್‌ಗಳಿಂದ ಗೆದ್ದುಕೊಂಡಿತು.
ಕೇವಲ 10 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಐಲ್ ಆಫ್ ಮ್ಯಾನ್ ತಂಡ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ಗೆ ಆಲೌಟ್ ಆದ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಇದರೊಂದಿಗೆ ಟಿ20ಯಲ್ಲಿ 72 ದಿನಗಳ ಹಿಂದೆ ದಾಖಲಾಗಿದ್ದ ಅತಿ ಕಡಿಮೆ ಸ್ಕೋರ್ ದಾಖಲೆಯನ್ನೂ ಐಲ್ ಆಫ್ ಮ್ಯಾನ್ ತಂಡ ಮುರಿದಿದೆ. ಇದಕ್ಕೂ ಮೊದಲು 16 ಡಿಸೆಂಬರ್ 2022 ರಂದು, ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಈ ದಾಖಲೆಗೆ ಕೊರಳೊಡ್ಡಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ