T20 World Cup 2021: ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ (Team India) ಎದುರಾಳಿಗಳಿಗೆ ಖಡಕ್ ಎಚ್ಚರಿ ರವಾನಿಸಿದ್ದಾರೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ (England) ನೀಡಿದ 188 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ದ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಬ್ಯಾಟಿಂಗ್ ಬಲಿಷ್ಠತೆಯನ್ನು ಭಾರತ ತಂಡ ತೆರೆದಿಟ್ಟಿದೆ. ಅದರಲ್ಲೂ ಎರಡೂ ಪಂದ್ಯಗಳನ್ನು ಆರಂಭಿಕ ಆಟಗಾರರೇ ಗೆಲ್ಲಿಸಿರೋದು ವಿಶೇಷ. ಅಂದರೆ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕಳೆದುಕೊಂಡಿದ್ದು ಕೇವಲ 4 ವಿಕೆಟ್ ಮಾತ್ರ ಎಂಬುದು ವಿಶೇಷ.
ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗೆ 188 ರನ್ ಗಳ ಬೃಹತ್ ಮೊತ್ತ ಗುರಿ ನೀಡಿತು. ಈ ಗುರಿಯನ್ನು ಬೆನ್ನತ್ತಲು ಆರಂಭಿಕರಾದ ಇಶಾನ್ ಕಿಶನ್ (70) ಮತ್ತು ಕೆಎಲ್ ರಾಹುಲ್ (51) ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದರಂತೆ ಟೀಮ್ ಇಂಡಿಯಾ 19 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಈ ಪಂದ್ಯದಲ್ಲಿ ಇಶಾನ್ ಕಿಶನ್ ರಿಟೆರ್ಡ್ ಆಗಿದ್ದರೆ, ರಿಷಭ್ ಪಂತ್ ಅಜೇಯ 29 ರನ್ ಗಳಿಸಿದ್ದರು. ಅಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ 7 ಬೌಲರ್‌ಗಳನ್ನು ಬಳಸಿದರೂ ಪಡೆದಿದ್ದು ಕೇವಲ 3 ವಿಕೆಟ್ ಮಾತ್ರ.
ಇನ್ನು ಎರಡನೇ ಅಭ್ಯಾಸ ಪಂದ್ಯದಲ್ಲಿ, ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ ಪೇರಿಸಿತು. ಈ ಮೊತ್ತವನ್ನು ಭಾರತ ತಂಡವು 17.5 ಓವರ್ ಚೇಸ್ ಮಾಡಿತು. ಅತ್ತ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಟೀಮ್ ಇಂಡಿಯಾ ಬ್ಯಾಟರುಗಳ ವಿಕೆಟ್ ಪಡೆಯಲು 8 ಬೌಲರುಗಳನ್ನು ಬಳಸಿದರು. ಇದಾಗ್ಯೂ ಸಿಕ್ಕಿದ್ದು 1 ವಿಕೆಟ್ ಮಾತ್ರ.
ಅಂದರೆ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್ ಎನಿಸಿಕೊಂಡಿರುವ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಕೇನ್ ರಿಚರ್ಡ್ಸನ್ನಂತಹ ವೇಗಿಗಳನ್ನು ಬಳಸಿದರೂ ವಿಕೆಟ್ ಪಡೆಯುವಲ್ಲಿ ಸಫಲವಾಗಿಲ್ಲ. ಇನ್ನು ಸ್ಪಿನ್ನರ್ಗಳಾದ ಆಸ್ಟನ್ ಅಗರ್, ಮ್ಯಾಕ್ಸ್ವೆಲ್, ಝಂಪಾ ಕೂಡ ಪ್ರಯತ್ನ ಪಡೆದರೂ ಫಲ ಮಾತ್ರ ಶೂನ್ಯವಾಗಿತ್ತು. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 60 ರನ್ ಗಳಿಸಿ ರಿಟೆರ್ಡ್ ಆದರೆ, ಕೆಎಲ್ ರಾಹುಲ್ 39 ಹಾಗೂ ಸೂರ್ಯಕುಮಾರ್ ಯಾದವ್ ಔಟಾಗದೆ 38 ರನ್ ಗಳಿಸಿದರು.
ಬಲಿಷ್ಠ ತಂಡಗಳ ವಿರುದ್ದದ ಈ ಎರಡು ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟರುಗಳು ಅಬ್ಬರಿಸಿದ್ದಾರೆ. ಅದರಲ್ಲೂ ವಿಕೆಟ್ ಕಳೆದುಕೊಳ್ಳದೇ ಅತ್ಯುತ್ತಮವಾಗಿ ಚೇಸ್ ಮಾಡಿದ್ದಾರೆ. ಎರಡೂ ಅಭ್ಯಾಸ ಪಂದ್ಯಗಳಲ್ಲಿ, ಎದುರಾಳಿ ತಂಡಗಳು ಒಟ್ಟು 15 ಬೌಲರ್‌ಗಳನ್ನು ಬಳಸಿದರೂ ಟೀಮ್ ಇಂಡಿಯಾ ಕಳೆದುಕೊಂಡಿದ್ದು ಕೇವಲ 4 ವಿಕೆಟ್ಗಳು ಮಾತ್ರ. ಅಷ್ಟೇ ಅಲ್ಲದೆ 2 ಪಂದ್ಯಗಳಿಂದ ಟೀಮ್ ಇಂಡಿಯಾ ಬ್ಯಾಟರುಗಳು ಕಲೆಹಾಕಿದ್ದು ಬರೋಬ್ಬರಿ 345 ರನ್. ಟೀಮ್ ಇಂಡಿಯಾದ ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೋಡಿ ಇದೀಗ ಎದುರಾಳಿ ತಂಡಗಳಿಗೆ ಭಾರತೀಯ ಬ್ಯಾಟರುಗಳನ್ನು ಕಟ್ಟಿಹಾಕುವುದೇ ದೊಡ್ಡ ಚಿಂತೆಯಾಗಿದೆ.
ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ?
ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು?
ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ
(T20 World Cup 2021: indian batsmen scored 345 runs in 2 matches)